ಬೆಂಗಳೂರು: ನರೇಗಾ ಯೋಜನೆಯಡಿ ಪ್ರತಿ ಕುಟುಂಬಕ್ಕೆ ಒಂದು ಜಾಬ್ ಕಾರ್ಡ್ ನೀಡಲಾಗುತ್ತಿದ್ದು, ಅದರಲ್ಲಿ ಕುಟುಂಬದ ಎಲ್ಲ ಸದಸ್ಯರ ಹೆಸರುಗಳು ಇರುತ್ತವೆ. ಎಲ್ಲರಿಗೂ ಕೆಲಸ ನೀಡಲಾಗುತ್ತದೆಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಅವರ ಟ್ವೀಟ್ ಮೂಲಕ ಮಾಡಿರುವ ಆರೋಪಗಳಲ್ಲಿ ಸತ್ಯಾಂಶವಿಲ್ಲ ಎಂದು ಈಶ್ವರಪ್ಪ ತಿರುಗೇಟು ನೀಡಿದ್ದಾರೆ.
ಜಾಬ್ ಕಾರ್ಡ್‌ನಲ್ಲಿ ಕುಟುಂಬದ ಎಲ್ಲ ಸದಸ್ಯರ ಹೆಸರುಗಳು ಇರುವುದರಿಂದ ನರೇಗಾ ಯೋಜನೆಯಡಿ ಕಾಮಗಾರಿಗಳಲ್ಲಿ ಭಾಗವಹಿಸಿ ಉದ್ಯೋಗ ಪಡೆಯಬಹುದಾಗಿದೆ. ಅದಕ್ಕೆ ಯಾವುದೇ ನಿರ್ಬಂಧಗಳಿರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಏಪ್ರಿಲ್ 1 ರಿಂದ ಇಲ್ಲಿಯವರಗೆ ಹೆಚ್ಚುವರಿಯಾಗಿ 40,745 ಹೆಚ್ಚುವರಿ ಜಾಬ್ ಕಾರ್ಡ್‌ಗಳನ್ನು ವಿತರಣೆ ಮಾಡಲಾಗುತ್ತಿದೆ. 18 ವರ್ಷ ಮೇಲ್ಪಟ್ಟವರು ಉದ್ಯೋಗ ಪಡೆಯಲು ಅರ್ಹರಾಗಿದ್ದಾರೆ. ಈಗಲೂ ನರೇಗಾ ಯೋಜನೆಯಡಿ ಕಾರ್ಮಿಕರಾಗಿ ಹೆಸರು ನೋಂದಾಯಿಸಲು ಎಲ್ಲರಿಗೂ ಅರ್ಹತೆ ಇದೆ. ಇದಕ್ಕಾಗಿ ಕಾಯಕ ಮಿತ್ರ ಆ್ಯಪ್ ಬಿಡುಗಡೆ ಮಾಡಲಾಗಿದೆ ಎಂದರು.
ನರೇಗಾ ಯೋಜನೆಯಡಿ ಕೂಲಿ ಹಣ ಪಾವತಿಸಲು ನಿಯಮಗಳ ಪ್ರಕಾರ ಕೆಲಸ ಮಾಡಿದ 15 ದಿನಗಳ ಒಳಗೆ ಕಾಲಾವಕಾಶವಿರುತ್ತದೆ. ಎನ್ಎಂಆರ್ ಮುಕ್ತಾಯಗೊಳಿಸಿದ ಶೇ. 99.07 ಪ್ರಕರಣಗಳಲ್ಲಿ 8 ದಿನಗಳೊಳಗೆ ಕೂಲಿ ಹಣವನ್ನು ಪಾವತಿಸಲಾಗಿದೆ. ಶೇ.0.87 ಪ್ರಕರಣಗಳಲ್ಲಿ ಕೂಲಿ ಹಣ ಪಾವತಿಸಲು 9-15 ದಿನಗಳ ಕಾಲಾವಕಾಶವನ್ನು ತೆಗೆದುಕೊಳ್ಳಲಾಗಿರುತ್ತದೆ. ಶೇ.0.06 ಪ್ರಕರಣಗಳಲ್ಲಿ ಮಾತ್ರ 15 ದಿನಗಳಿಗಿಂತ ಹೆಚ್ಚಿನ ವಿಳಂಬವಾಗಿದೆ ಎಂದು ಈಶ್ವರಪ್ಪ ತಿಳಿಸಿದರು.
ರಾಜ್ಯದಲ್ಲಿ ನರೇಗಾ ಯೋಜನೆಯಡಿ 45.499 ಕಾಮಗಾರಿಗಳು ಪ್ರಗತಿಯಲ್ಲಿವೆ.ಆದಾಯ ತೆರಿಗೆ ಪಾವತಿದಾರರಿಗೆ, ಸರ್ಕಾರಿ ನೌಕರರಿಗೆ ಮತ್ತು ಚುನಾಯಿತ ಪ್ರತಿನಿಧಿಗಳಿಗೆ ಜಾಬ್ ಕಾರ್ಡ್ ನೀಡಲು ಅವಕಾಶವಿಲ್ಲ ಎಂದರು.
ಒಂದು ವೇಳೆ ಯಾವುದೇ ಅಧಿಕಾರಿ ಒಂದು ಕುಟುಂಬಕ್ಕೆ ಒಂದೇ ಕಾರ್ಡ್ ಇರುವುದರಿಂದ ಉಳಿದ ಸದಸ್ಯರಿಗೆ ಕೆಲಸ ನೀಡುವುದಿಲ್ಲ ಎಂದು ಹೇಳಿದರೆ, ಅಂತಹವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಈಶ್ವರಪ್ಪ ಎಚ್ಚರಿಕೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.