ಬೆಂಗಳೂರು: 'ವಕ್ಫ್ ಆಸ್ತಿ ವಿಚಾರದಲ್ಲಿ ಬಿಜೆಪಿ ಕೆಟ್ಟ ರಾಜಕಾರಣ ಮಾಡುತ್ತಿದೆ. ಆದರೆ 2019ರಿಂದ 2022ರವರೆಗೆ ರಾಜ್ಯದಲ್ಲಿ ಅವರದೇ ಸರ್ಕಾರ ಇದ್ದಾಗ ವಿಜಯಪುರ ಜಿಲ್ಲೆಯ ರೈತರಿಗೆ ವಕ್ಫ್ ಮಂಡಳಿ ಮೂಲಕ ನೋಟಿಸ್ ಕೊಡಲಾಗಿತ್ತು. ಆಗ ಇರದ ಹಿಂದೂ ಪ್ರೇಮವನ್ನು ಈಗ ಕಪೋಲಕಲ್ಪಿತ ಸುಳ್ಳುಗಳ ಮೂಲಕ ವ್ಯಕ್ತಪಡಿಸಲಾಗುತ್ತಿದೆ ಎಂದು ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ.
ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, 'ಬಿಜೆಪಿಗರ ನಕಲಿ ಹಿಂದೂ ಪ್ರೇಮದ ಮೊಸಳೆ ಕಣ್ಣೀರು ಬಟಾ ಬಯಲು!. 2019ರಿಂದ 2022ರವರೆಗೆ ರಾಜ್ಯದಲ್ಲಿ ಆಡಳಿತ ನಡೆಸಿದ ಆಪರೇಷನ್ ಕಮಲದ ಸರ್ಕಾರದ ಅವಧಿಯಲ್ಲಿ ವಕ್ಫ್ ಬೋರ್ಡ್ ವಿಜಯಪುರದ ರೈತರಿಗೆ ನೀಡಿದ ನೋಟೀಸುಗಳಿವು. ಆಗ ಇರದ ಹಿಂದೂ ಪ್ರೇಮ ಈಗ ಕಪೋಲ ಕಲ್ಪಿತ ಸುಳ್ಳುಗಳ ಆಧಾರದ ಮೇಲೆ ಚಿಗುರೊಡೆದಿದ್ದು ಹೇಗೆ' ಎಂದು ಪ್ರಶ್ನಿಸಿದ್ದಾರೆ.
'ರಾಜ್ಯದ ಅಭಿವೃದ್ಧಿ ಬಿಟ್ಟು ಹಿಜಾಬ್, ಹಲಾಲ್, ಉರಿ ಗೌಡ, ನಂಜೇಗೌಡ ಎಂದು ಆಡಳಿತ ನಡೆಸಿದ ನಾಟಕ ಮಂಡಳಿಯ ಮುಂದುವರೆದ ಭಾಗ ಈಗ ಪ್ರಸ್ತುತ ನಡೆಯುತ್ತಿರುವ ವಿದ್ಯಮಾನ. ಸುಳ್ಳು ಕಂತೆ ಕಟ್ಟಿ ಜನರ ಕಣ್ಣಿಗೆ ಮಣ್ಣೆರೆಚುವ ಇವರ ಕುತಂತ್ರ ಇಲ್ಲಿ ನಡೆಯುವುದಿಲ್ಲ. ವಿಜಯೇಂದ್ರ ಅವರ ಸತ್ಯಶೋಧನಾ ಸಮಿತಿ ಅವರ ಸರ್ಕಾರದ ಅವಧಿಯಲ್ಲಿ ನಮ್ಮ ರೈತರಿಗೆ ಕಳುಹಿಸಿದ ನೋಟೀಸುಗಳಿಗೆ ಉತ್ತರ ಕೊಡಲಿ' ಎಂದು ಸವಾಲು ಹಾಕಿದ್ದಾರೆ.
ನಾ ಮುಂದು, ತಾ ಮುಂದು ಎಂದು ತಮ್ಮ ಪ್ರತಿಷ್ಠೆಯ ಅಸ್ತಿತ್ವಕ್ಕಾಗಿ ಸದಾ ಸುಳ್ಳಿನಕಂತೆ ಕಟ್ಟುವ, ಜನರ ಭಾವನೆಗಳೊಂದಿಗೆ ಆಟವಾಡುವ ಇವರು, ನಮ್ಮ ರೈತರಿಗೆ ಕಳುಹಿಸಿರುವ ನೋಟಿಸುಗಳಿಗೆ ಉತ್ತರಿಸಲಿ.
ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ರಚಿಸಿರುವ ಸತ್ಯ ಶೋಧನಾ ಸಮಿತಿಯನ್ನು ಅವರದೇ ಪಕ್ಷದ ಬಸನಗೌಡ ಪಾಟೀಲ ಯತ್ನಾಳ ಅವರು ಹಿಗ್ಗಾಮುಗ್ಗಾ ಟೀಕಿಸಿದ ಮೇಲೆ ಪುನಾರಚಿಸಲಾಗಿದೆ. ಇಷ್ಟೆಲ್ಲ ಆದಮೇಲೆ ಯತ್ನಾಳ್ ಜೊತೆಗೆ ಸಂಸದ ರಮೇಶ ಜಿಗಜಿಣಗಿ ಅವರುಗಳನ್ನು ಸೇರಿಸಿದಂತೆ ನಟಿಸಲಾಗಿದೆ. ಇದು ಆ ಪಕ್ಷದ ದುಸ್ಥಿತಿಗೆ ಹಿಡಿದ ಕನ್ನಡಿಯಾಗಿದೆ. ಇದನ್ನು ಬಿಟ್ಟು, ತಮ್ಮ ಸರ್ಕಾರದ ಅವಧಿಯಲ್ಲಿ ನಮ್ಮ ರೈತರಿಗೆ ಕೊಟ್ಟ ನೋಟಿಸ್‌ಗಳಿಗೆ ಮೊದಲು ಉತ್ತರ ಕೊಡಲಿ' ಎಂದು ಅವರು ಆಗ್ರಹಿಸಿದ್ದಾರೆ.
'ವಿಜಯಪುರ ಜಿಲ್ಲೆಯಲ್ಲಿ ವಕ್ಫ್ ಆಸ್ತಿ ಎಂದು ಹೇಳಿ ಯಾವ ರೈತರಿಗೂ ನೋಟಿಸ್ ಕೊಟ್ಟಿಲ್ಲ. ಇಲ್ಲದ ಸಮಸ್ಯೆಯನ್ನು ಹುಟ್ಟುಹಾಕುತ್ತಿರುವ ಬಿಜೆಪಿ ನಾಯಕರು ತಮ್ಮ ನಡುವೆ ಇರುವ ಸಮಸ್ಯೆಗಳನ್ನು ಮೊದಲು ಬಗೆಹರಿಸಿಕೊಳ್ಳಲಿ' ಎಂದು ಅವರು ವ್ಯಂಗ್ಯವಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.