ADVERTISEMENT

ಹೆಚ್ಚುವರಿ ಡಿಸಿಎಂ ನೇಮಿಸಲು ಹೈಕಮಾಂಡ್‌ಗೆ ಸಚಿವರ ಒತ್ತಡ

​ಪ್ರಜಾವಾಣಿ ವಾರ್ತೆ
Published 9 ಜನವರಿ 2024, 16:23 IST
Last Updated 9 ಜನವರಿ 2024, 16:23 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಬೆಂಗಳೂರು: ಲೋಕಸಭಾ ಚುನಾವಣೆಗೂ ಮೊದಲು ಹೆಚ್ಚುವರಿ ಉಪ ಮುಖ್ಯಮಂತ್ರಿ ಹುದ್ದೆಗಳನ್ನು ಸೃಷ್ಟಿಬೇಕೆಂದು ಹೈಕಮಾಂಡ್‌ ಮೇಲೆ ಒತ್ತಡ ಹೇರಲು ಕೆಲವು ಸಚಿವರು ತಂತ್ರಗಾರಿಕೆ ಹೆಣೆಯುತ್ತಿದ್ದಾರೆ.

ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್‌ ಸಿಂಗ್ ಸುರ್ಜೇವಾಲ ಅವರನ್ನು ಭೇಟಿ ಮಾಡಿರುವ ಗೃಹ ಸಚಿವ ಜಿ. ಪರಮೇಶ್ವರ, ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ, ಸಹಕಾರ ಸಚಿವ ಕೆ.ಎನ್‌. ರಾಜಣ್ಣ ಮತ್ತಿತರರು ಹೆಚ್ಚುವರಿ ಉಪ ಮುಖ್ಯಮಂತ್ರಿ ಹುದ್ದೆಯ ಅನಿವಾರ್ಯದ ಬಗ್ಗೆ ಮನವರಿಕೆ ಮಾಡಿದ್ದಾರೆ.

ADVERTISEMENT

ಲಿಂಗಾಯತ, ದಲಿತ ಹಾಗೂ ಅಲ್ಪಸಂಖ್ಯಾತ ಈ ಮೂರು ಸಮುದಾಯಗಳನ್ನು ಪ್ರತಿನಿಧಿಸುವ ಹಿರಿಯ ಸಚಿವರಿಗೆ ಉಪ ಮುಖ್ಯಮಂತ್ರಿ ಹುದ್ದೆ ನೀಡುವುದರಿಂದ ಈ ಸಮುದಾಯಗಳ ಓಲೈಕೆ ಸಾಧ್ಯವಾಗಲಿದೆ. ಲೋಕಸಭೆ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆಲ್ಲುವ ಪಕ್ಷದ ಗುರಿಗೆ ಈ ನಡೆ ಪೂರಕವಾಗಲಿದೆ ಎಂಬ ವಾದವನ್ನು ಸುರ್ಜೇವಾಲ ಎದುರು ಈ ಸಚಿವರು ಪ್ರತಿಪಾದಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಸತೀಶ ಜಾರಕಿಹೊಳಿ, ‘ಸುರ್ಜೇವಾಲ ಅವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ, ನಿರ್ಣಾಯಕ ಸಮುದಾಯಗಳಿಗೆ ಉಪ ಮುಖ್ಯಮಂತ್ರಿ ಸ್ಥಾನ ಕೊಡಬೇಕೆಂದು ಕೇಳಿದ್ದೇವೆ. ಇದರಿಂದ ಚುನಾವಣೆಯಲ್ಲಿ ಅನುಕೂಲ ಆಗಲಿದೆ ಎಂದಿದ್ದೇವೆ’ ಎಂದರು. 

‘ಉಪ ಮುಖ್ಯಮಂತ್ರಿ ಹುದ್ದೆ ನೀಡಿದರೆ ಸಮುದಾಯಗಳು ಪಕ್ಷದ ಬೆನ್ನಿಗೆ ನಿಲ್ಲಲು ಅನುಕೂಲ ಆಗುತ್ತದೆ. ಎಷ್ಟು ಉಪ ಮುಖ್ಯಮಂತ್ರಿ ಹುದ್ದೆ ಸೃಷ್ಟಿಸಬೇಕು ಎನ್ನುವುದು ಹೈಕಮಾಂಡ್​ಗೆ ಬಿಟ್ಟಿದ್ದು. ಆದರೆ, ಲೋಕಸಭೆ ಚುನಾವಣೆಗೆ ಮೊದಲೇ ಮಾಡಬೇಕು. ಈ ಬಗ್ಗೆ ಸುರ್ಜೇವಾಲ ಅವರು ಹೈಕಮಾಂಡ್ ಗಮನಕ್ಕೆ ತರಲಿದ್ದಾರೆ’ ಎಂದು ತಿಳಿಸಿದರು.

‘ಹೆಚ್ಚುವರಿ ಉಪ ಮುಖ್ಯಮಂತ್ರಿ ವಿಚಾರದಲ್ಲಿ ಡಿ.ಕೆ. ಶಿವಕುಮಾರ್‌ ಅವರ ಅಭಿಪ್ರಾಯ ಬೇರೆ. ನಮ್ಮ ಅಭಿಪ್ರಾಯ ಬೇರೆ. ಅವರು ಉಪ ಮುಖ್ಯಮಂತ್ರಿಯಾಗಿಯೇ ಇರುತ್ತಾರೆ. ಒಂದೇ ಉಪ ಮುಖ್ಯಮಂತ್ರಿ ಹುದ್ದೆ ಎಂಬುದು ಡಿ.ಕೆ. ಶಿವಕುಮಾರ್‌ ಅಭಿಪ್ರಾಯ. ಆದರೆ, ಈಗ ನಾವು ಹೆಚ್ಚುವರಿ ಉಪ ಮುಖ್ಯಮಂತ್ರಿಗೆ ಮನವಿ ಮಾಡಿದ್ದೇವೆ. ಹೈಕಮಾಂಡ್ ನಾಯಕರು ನಿರ್ಧಾರ ತೆಗೆದುಕೊಳ್ಳಬೇಕು. ಸುರ್ಜೇವಾಲ ನಮ್ಮ ಮಾತಿಗೆ ಸಮ್ಮತಿಸಿದ್ದಾರೆ. ಹಾಗೆಂದು, ಉಪ ಮುಖ್ಯಮಂತ್ರಿ  ಸ್ಥಾನ ನೀಡದಿದ್ದರೆ ಯಾರೂ ಪಕ್ಷ ಬಿಟ್ಟು ಹೋಗುವುದಿಲ್ಲ. ನಾವು ಬ್ಲ್ಯಾಕ್ ಮೇಲ್ ಮಾಡಿಲ್ಲ’ ಎಂದು ಸ್ಪಷ್ಟಪಡಿಸಿದರು.

ಪಕ್ಷದ ಚೌಕಟ್ಟಿನಲ್ಲಿ ಚರ್ಚೆ: ‘ಹೆಚ್ಚುವರಿ ಉಪ ಮುಖ್ಯಮಂತ್ರಿ ವಿಚಾರದ ಬಗ್ಗೆ ನಾನು ಬಹಿರಂಗವಾಗಿ ಮಾತನಾಡುವುದಿಲ್ಲ. ಅದೆಲ್ಲವೂ ನಮ್ಮ ಪಕ್ಷದ ಚೌಕಟ್ಟಿನಲ್ಲಿ ಚರ್ಚೆ ಮಾಡಬೇಕು’ ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಹೇಳಿದರು.

‘ಸುರ್ಜೇವಾಲ ಅವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಅನೇಕ ವಿಚಾರಗಳನ್ನು ಚರ್ಚೆ ಮಾಡಿದ್ದೇವೆ. ಚುನಾವಣಾ ತಯಾರಿ ಸೇರಿದಂತೆ ಹಲವು ವಿಚಾರಗಳ ಕುರಿತು ಮಾತನಾಡಿದ್ದೇವೆ. ಬಹಿರಂಗವಾಗಿ ಚರ್ಚೆ ಮಾಡುವ ಯಾವ ವಿಚಾರವೂ ಇಲ್ಲ. ಹೆಚ್ಚುವರಿ ಉಪ ಮುಖ್ಯಮಂತ್ರಿ ವಿಚಾರ ಕೂಡಾ ಪಕ್ಷದ ಆಂತರಿಕ ವಿಚಾರ. ಅದನ್ನು ಬಹಿರಂಗವಾಗಿ ಚರ್ಚೆ ಮಾಡಬಾರದು. ಚರ್ಚೆ ಮಾಡುವ ಅವಶ್ಯಕತೆಯೂ ಇಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.