ಕಾರವಾರ: ‘ರಾಜ್ಯ ರಾಜಕಾರಣದಲ್ಲಿ ವಿಶೇಷ ಬೆಳವಣಿಗೆಗಳಾಗುತ್ತಿಲ್ಲ. ಎಲ್ಲವೂ ನಿಮ್ಮಂತಹ ಮಾಧ್ಯಮದವರ ಕೃಪೆಯಿಂದ ಸೃಷ್ಟಿಯಾಗಿದೆ. ಇದರಲ್ಲಿ ಯಾವುದೇ ಅರ್ಥಿವಿಲ್ಲ’ ಎಂದು ಕಂದಾಯ ಮತ್ತು ಕೌಶಲಾಭಿವೃದ್ಧಿ ಸಚಿವ ಆರ್.ವಿ.ದೇಶಪಾಂಡೆ ಹೇಳಿದರು.
ತಾಲ್ಲೂಕಿನ ತೋಡೂರು ಗ್ರಾಮ ಪಂಚಾಯ್ತಿಯಲ್ಲಿ ಸೋಮವಾರ ಸ್ವಚ್ಛತೆಯೇ ಸೇವೆ ಸಪ್ತಾಹಕ್ಕೆ ಚಾಲನೆ ನೀಡಿದ ಬಳಿಕ ಸುದ್ದಿಗಾರರ ಜತೆ ಅವರು ಮಾತನಾಡಿದರು.
ರಮೇಶ ಜಾರಕಿಹೊಳಿ ಅವರೇ ಸರ್ಕಾರ ಐದು ವರ್ಷ ಸುಭದ್ರ ಎಂದು ಹೇಳಿದ್ದಾರೆ. ಭಿನ್ನಮತದ ಕುರಿತಾದ ವದಂತಿಗೆ ಹೆಚ್ಚಿನ ಮಹತ್ವ ಕೊಡುವ ಅಗತ್ಯವೇ ಇಲ್ಲ ಎಂದರು.
ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ ಸಚಿವ ಸ್ಥಾನ ಆಕಾಂಕ್ಷಿ ಎಂದು ಹೇಳಿಕೊಂಡಿದ್ದಾರೆ ಎಂದು ಪತ್ರಕರ್ತರು ಹೇಳಿದಾಗ, 'ಅದರಲ್ಲೇನು ತಪ್ಪಿದೆ? ಅವರು ಯುವಕರಿದ್ದಾರೆ. ಅವರು ನನ್ನ ಶಿಷ್ಯರು. ನಾವು ಪ್ರಯತ್ನ ಮಾಡಬೇಕು, ಕಾಯಕವೇ ಕೈಲಾಸ. ಫಲ ಸಿಗುವುದರಲ್ಲಿ ಪ್ರಯತ್ನದೊಂದಿಗೆ ದೈವೀ ಕೃಪೆಯೂ ಇರಬೇಕು’ ಎಂದು ಹೇಳಿದರು.
ಬಿಜೆಪಿಯು ಸರ್ಕಾರ ಬೀಳಿಸಲು ಯತ್ನಿಸುತ್ತಿದೆಯೇ ಎಂದು ಕೇಳಿದಾಗ, 'ಯಡಿಯೂರಪ್ಪ ಅವರೇ ನಾವು ಇದರಿಂದ ದೂರವಿದ್ದೇವೆ. ಸರ್ಕಾರ ತಾನಾಗಿ ಉರುಳಿದರೆ ತಮ್ಮ ಸರ್ಕಾರ ರಚಿಸುವುದಾಗಿ ಹೇಳಿದ್ದಾರೆ' ಎಂದರು.
ಲೋಕಸಭೆ ಚುನಾವಣೆಗೆ ಉತ್ತರ ಕನ್ನಡ ಅಭ್ಯರ್ಥಿಯ ಬಗ್ಗೆ ಇನ್ನೂ ಯೋಚಿಸಿಲ್ಲ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.