ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಆಪ್ತ ಬಣದಲ್ಲಿ ಗುರುತಿಸಿಕೊಂಡಿರುವ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ, ತಮ್ಮ ಪಕ್ಷದ ನಾಯಕರ ಮನೆ ಮನೆ ಭೇಟಿಯ ‘ಯಾತ್ರೆ’ ನಡೆಸುತ್ತಿರುವುದು ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸ ಒದಗಿಸಿದೆ.
ಮೂರು ದಿನಗಳ ಹಿಂದೆ ದೆಹಲಿಗೆ ತೆರಳಿದ್ದ ಜಾರಕಿಹೊಳಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿದ್ದರು. ಮಾತುಕತೆ ವೇಳೆ, ‘ಸಿದ್ದರಾಮಯ್ಯ ಅವರು ಅಧಿಕಾರ ತ್ಯಾಗ ಮಾಡುವ ಅನಿವಾರ್ಯ ಸನ್ನಿವೇಶ ಸೃಷ್ಟಿಯಾದರೆ ಮುಂದಿನ ಅವಕಾಶ ದಲಿತ ಸಮುದಾಯವರಿಗೆ ಸಿಗಬೇಕು; ಆ ಸ್ಥಾನವನ್ನು ನೀವೇ ತುಂಬಬೇಕು’ ಎಂಬ ಒತ್ತಾಯ ಮಂಡಿಸಿದ್ದರು. ರಾಜ್ಯ ಸರ್ಕಾರದ ನಾಯಕತ್ವ ಬದಲಾವಣೆಯಯು ಸನ್ನಿಹಿತವಾದಲ್ಲಿ, ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಯಾಗಿರುವ ಡಿ.ಕೆ. ಶಿವಕುಮಾರ್ ಅವರಿಗೆ ಅವಕಾಶ ತಪ್ಪಿಸುವುದು ಅವರ ಉದ್ದೇಶ ಎಂಬ ವ್ಯಾಖ್ಯಾನವೂ ನಡೆದಿತ್ತು.
ಆ ಬೆಳವಣಿಗೆಯ ಬೆನ್ನಲ್ಲೇ, ಸತೀಶ ಜಾರಕಿಹೊಳಿ ತಮ್ಮ ರಾಜಕೀಯ ಯಾತ್ರೆಯನ್ನು ಚುರುಕುಗೊಳಿಸಿರುವುದು ಹಾಗೂ ದಲಿತ ಸಮುದಾಯದ ನಾಯಕರನ್ನು, ಶಾಸಕರನ್ನು ಭೇಟಿಯಾಗಿ ಸಮಾಲೋಚನೆ ನಡೆಸುತ್ತಿರುವುದು ಪಕ್ಷದೊಳಗೆ ಹಾಗೂ ಸಾರ್ವಜನಿಕ ವಲಯದಲ್ಲಿ ಕುತೂಹಲವನ್ನು ಹೆಚ್ಚಿಸಿದೆ.
ಖರ್ಗೆಯವರ ಭೇಟಿ ಬಳಿಕ ತುಮಕೂರಿಗೆ ತೆರಳಿದ ಸತೀಶ ಅವರು, ಗೃಹ ಸಚಿವ ಹಾಗೂ ಪಕ್ಷದ ಹಿರಿಯ ನಾಯಕ ಜಿ. ಪರಮೇಶ್ವರ ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದರು. ಮಂಗಳವಾರ ಮೈಸೂರಿಗೆ ಹೋದ ಅವರು, ಸಮಾಜ ಕಲ್ಯಾಣ ಸಚಿವ ಎಚ್.ಸಿ. ಮಹದೇವಪ್ಪ ಅವರ ಮನೆಗೆ ಭೇಟಿ ಕೊಟ್ಟು ಚರ್ಚೆ ನಡೆಸಿದರು. ಪಕ್ಷದ ಹಲವು ಶಾಸಕರು, ಮುಖಂಡರನ್ನು ಭೇಟಿ ಮಾಡಿ ಚರ್ಚೆ ನಡೆಸಿದರು.
ಬಳಿಕ, ಸುದ್ದಿಗಾರರ ಜತೆ ಮಾತನಾಡಿದ ಸತೀಶ, ‘ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಆಗಿ ಮುಂದುವರಿಯುತ್ತಾರೆ. ನಾಯಕರ ಭೇಟಿ ಎಂದ ಮೇಲೆ ರಾಜಕೀಯ ಚರ್ಚೆ ಸಹಜ’ ಎಂದು ಹೇಳುವ ಮೂಲಕ ತಮ್ಮ ಭೇಟಿಯ ನಿಗೂಢತೆಯನ್ನು ಹಾಗೆಯೇ ಉಳಿಸಿದರು.
ಸರ್ಕಾರ ಅಸ್ತಿತ್ವಕ್ಕೆ ಬಂದ ಲಾಗಾಯ್ತಿನಿಂದಲೂ ಡಿ.ಕೆ. ಶಿವಕುಮಾರ್ ಅವರ ವಿರುದ್ಧ ತಮ್ಮ ಅಸಹನೆಯನ್ನು ಸತೀಶ ವ್ಯಕ್ತಪಡಿಸುತ್ತಲೇ ಬಂದಿದ್ದಾರೆ. ಬೆಳಗಾವಿ ರಾಜಕಾರಣದಲ್ಲಿ ಉಪಮುಖ್ಯಮಂತ್ರಿ ಹಸ್ತಕ್ಷೇಪ ಇದಕ್ಕೆ ಕಾರಣ ಎನ್ನಲಾಗಿದೆ. ಸತೀಶ ಅವರ ದೆಹಲಿ ಭೇಟಿ ಕುರಿತು ಪ್ರತಿಕ್ರಿಯಿಸಿದ್ದ ಡಿ.ಕೆ. ಶಿವಕುಮಾರ್, ‘ರಾಜ್ಯದ ರಾಜಕೀಯ ಬೆಳವಣಿಗೆಗಳ ಬಗ್ಗೆ ಹೈಕಮಾಂಡ್‌ಗೆ ವರದಿ ಸಲ್ಲಿಸಲಾಗುತ್ತಿದೆ’ ಎಂದಿದ್ದರು.
ಇದಕ್ಕೆ ತಿರುಗೇಟು ನೀಡಿದ್ದ ಸತೀಶ, ‘ರಾಜ್ಯದಲ್ಲಿ ಯಾರೂ ಕಿಂಗ್ ಮೇಕರ್ ಆಗಲು ಸಾಧ್ಯವಿಲ್ಲ’ ಎಂದು ಹೇಳಿದ್ದರು. ಅದಾದ ಮರುದಿನವೇ, ಮಾಜಿ ಸಂಸದ ಡಿ.ಕೆ. ಸುರೇಶ್ ಅವರೂ ಜಾರಕಿಹೊಳಿ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದರು. ಇದು ನಾನಾ ರೀತಿಯ ಚರ್ಚಗೆ ಕಾರಣವಾಗಿತ್ತು.
‘5 ವರ್ಷವೋ 3 ವರ್ಷವೋ ಹೈಕಮಾಂಡ್‌ಗೆ ಕೇಳಬೇಕು’
ಮೈಸೂರು: ‘ಸಿದ್ದರಾಮಯ್ಯನವರೇ ಮುಖ್ಯಮಂತ್ರಿಯಾಗಿರಲಿದ್ದಾರೆ. ಐದು ವರ್ಷವಿರುತ್ತಾರೋ, ಮೂರು ವರ್ಷವಿರುತ್ತಾರೋ ಎಂಬುದನ್ನು ಪಕ್ಷದ ಹೈಕಮಾಂಡ್ ಬಳಿ ಕೇಳಬೇಕು. ಡಿಕೆಶಿ ಮತ್ತೊಬ್ಬರ ಬಗ್ಗೆ ನನಗೆ ಗೊತ್ತಿಲ್ಲ’ ಎಂದು ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ನಗರದಲ್ಲಿ ಮಂಗಳವಾರ ಸುದ್ದಿಗಾರ ರೊಂದಿಗೆ ಮಾತನಾಡಿ, ‘ಬೆಂಬಲಿಗರು ತಮ್ಮ ನಾಯಕರ ಪರ ಘೋಷಣೆ ಕೂಗುವುದು ಸಾಮಾನ್ಯ. ಅದರಿಂದ ಏನೋ ಬದಲಾವಣೆಯಾಗುತ್ತದೆ ಎನ್ನುವುದು ಸರಿಯಲ್ಲ. ವಿಪಕ್ಷಗಳೂ ಪ್ರೀತಿಯಿಂದ ನನ್ನ ಹೆಸರೂ ಹೇಳುತ್ತಿರಬಹುದು. ಪಕ್ಷದಲ್ಲಿ ಅಂಥ ಯಾವ ಬೆಳವಣಿಗೆಯೂ ಆಗಿಲ್ಲ’ ಎಂದರು.
‘ರಾಜಕಾರಣಿಗಳು ಸೇರಿದ ಮೇಲೆ ರಾಜಕಾರಣದ ಚರ್ಚೆ ಸಾಮಾನ್ಯ. ಸಚಿವ ಮಹದೇವಪ್ಪ ಜೊತೆಗಿನ ಭೇಟಿಯಲ್ಲಿ ಮಹತ್ವದ್ದೇನೂ ಇಲ್ಲ. ಇಡೀ ದಿನ ಮೈಸೂರಿನಲ್ಲಿದ್ದು ದಸರಾ ನೋಡುತ್ತಿದ್ದೇನೆ ಅಷ್ಟೇ' ಎಂದರು.
ಸನ್ನಿವೇಶ ಬರಲಿ: ಪರಮೇಶ್ವರ
ಬೆಂಗಳೂರು: ‘ಸಚಿವ ಸತೀಶ ಜಾರಕಿಹೊಳಿ ಹಾಗೂ ನಾನು ಕುಳಿತುಕೊಂಡು ಎರಡು ಲೋಟ ಕಾಫಿ ಕುಡಿದರೆ ಮುಖ್ಯಮಂತ್ರಿ ಮಾಡಿ ಬಿಡುತ್ತಾರೆ ಎನ್ನುವುದಾದರೆ ಬಹಳ ಚರ್ಚೆಗಳು ಆಗುತ್ತಿದ್ದವು. ಬಹಳಷ್ಟು ಕಾಫಿ ಖರ್ಚಾಗುತ್ತಿತ್ತು’ ಎಂದು ಗೃಹ ಸಚಿವ ಜಿ. ಪರಮೇಶ್ವರ ಹೇಳಿದರು.
‘ನಾವು ಮಾತನಾಡುವುದರಿಂದ ಏನೂ ಆಗುವುದಿಲ್ಲ. ಎಲ್ಲ ನಿರ್ಧಾರಗಳನ್ನು ಹೈಕಮಾಂಡ್ ತೆಗೆದುಕೊಳ್ಳುತ್ತದೆ. ಅಂತಹ ಸನ್ನಿವೇಶ (ಮುಖ್ಯಮಂತ್ರಿ ಬದಲಾವಣೆ) ಈಗ ಬಂದಿಲ್ಲ. ಸನ್ನಿವೇಶ ಬಂದಾಗ ಚರ್ಚೆ ಮಾಡೋಣ. ಅದರ ಬಗ್ಗೆ ಕೂಗು ಹಾಕೋಣ, ಬೇಡಿಕೆ ಇಡೋಣ. ಬೇಕಾದದ್ದು ಮಾಡೋಣ’ ಎಂದರು.
ಮುಂದಿನ ಮುಖ್ಯಮಂತ್ರಿ ವಿಚಾರದಲ್ಲಿ ಯಾವುದೇ ಚರ್ಚೆಯಾಗಿಲ್ಲ, ಯಾವುದೇ ಘೋಷಣೆಯೂ ಆಗಿಲ್ಲ. ಲಾಬಿಯೂ ಇಲ್ಲ. ಈಗ ಸಿದ್ದರಾಮಯ್ಯ ಸಿ.ಎಂ ಆಗಿದ್ದಾರೆ. ಅವರ ಕೈಕೆಳಗೆ ನಾವು ಕೆಲಸ ಮಾಡುತ್ತಿದ್ದೇವೆ-ಡಿ.ಕೆ. ಶಿವಕುಮಾರ್, ಉಪಮುಖ್ಯಮಂತ್ರಿ
ಸಚಿವರು ಪರಸ್ಪರ ಭೇಟಿ ಮಾಡುವುದರಲ್ಲಿ ತಪ್ಪೇನಿದೆ? ಹಿಂದೆಲ್ಲ ಅದು ಸುದ್ದಿ ಆಗುತ್ತಿರಲಿಲ್ಲ. ಈಗ ಅದು ಸುದ್ದಿ ಆಗುತ್ತದೆ. ಯಾರೋ ಸಚಿವರನ್ನು ಭೇಟಿ ಮಾಡಿದ ತಕ್ಷಣ ಸಂಚು ರೂಪಿಸುತ್ತಿದ್ದೇವೆ ಎಂಬಂತೆ ಬಿಂಬಿಸುವುದು ಸರಿಯಲ್ಲ-ಪ್ರಿಯಾಂಕ್ ಖರ್ಗೆ, ಗ್ರಾಮೀಣಾಭಿವೃದ್ಧಿ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.