ADVERTISEMENT

ಸಾಲದ ಮೊತ್ತ ಕಡಿತ ಮಾಡದಿರಲು ನಬಾರ್ಡ್‌ಗೆ ಸಚಿವ ಶಿವಾನಂದ ಪಾಟೀಲ ಆಗ್ರಹ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2024, 13:12 IST
Last Updated 12 ನವೆಂಬರ್ 2024, 13:12 IST
<div class="paragraphs"><p>ಶಿವಾನಂದ ಪಾಟೀಲ</p></div>

ಶಿವಾನಂದ ಪಾಟೀಲ

   

ಹುಬ್ಬಳ್ಳಿ: ರೈತರಿಗೆ ಸಾಲ ನೀಡುವ ಸಹಕಾರಿ ಸಂಸ್ಥೆಗಳಿಗೆ ರಿಯಾಯಿತಿ ದರದಲ್ಲಿ ನೀಡುವ ಸಾಲದ ಮೊತ್ತವನ್ನು ಕಡಿಮೆ ಮಾಡುವುದರಿಂದ ಕೃಷಿ ಕ್ಷೇತ್ರಕ್ಕೆ ಹಿನ್ನಡೆಯಾಗಲಿದ್ದು, ಈ ಮೊದಲಿನ ಪ್ರಮಾಣದಲ್ಲೇ ಸಾಲ ನೀಡಬೇಕು ಎಂದು ಕಬ್ಬು ಅಭಿವೃದ್ಧಿ, ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಅವರು ನಬಾರ್ಡ್‌ಗೆ ಆಗ್ರಹಿಸಿದರು.

ನ.12ರ ಸಂಚಿಕೆಯಲ್ಲಿ ‘ಪ್ರಜಾವಾಣಿ’ ಪ್ರಕಟಿಸಿದ ‘ಕೈಕೊಟ್ಟ ನಬಾರ್ಡ್‌: ಸಾಲಕ್ಕೆ ಕುತ್ತು’ ವಿಶೇಷ ವರದಿಗೆ ಪ್ರತಿಕ್ರಿಯಿಸಿದ ಅವರು, ‘ಈಗಾಗಲೇ 2 ಸಲ ಮುಖ್ಯಮಂತ್ರಿ ಮೂಲಕ ಪತ್ರ ಬರೆಸಿದ್ದೇವೆ. ನಬಾರ್ಡ್‌ ವತಿಯಿಂದ ಯಾವುದಕ್ಕೂ ಉತ್ತರ ಬಂದಿಲ್ಲ. ಮತ್ತೊಮ್ಮೆ ಮುಖ್ಯಮಂತ್ರಿ ಮೂಲಕ ಪತ್ರ ಬರೆಯುತ್ತೇವೆ’ ಎಂದರು.

ADVERTISEMENT

‘ನಮ್ಮ ರಾಜ್ಯಕ್ಕಷ್ಟೇ ಈ ರೀತಿ ಕಡಿತ ಆಗಿದೆಯೇ? ಎನ್ನುವುದನ್ನು ಪರಿಶೀಲಿಸಬೇಕಾಗಿದೆ. ದಕ್ಷಿಣದ ಇತರ ರಾಜ್ಯಗಳಿಗೆ ರಾಜ್ಯದ ನಿಯೋಗವೊಂದನ್ನು ಕಳುಹಿಸಿಕೊಟ್ಟು, ಪರಿಶೀಲಿಸಲಾಗುವುದು. ಅಲ್ಲಿಯೂ ಇದೇ ರೀತಿ ಆಗಿದ್ದರೆ ಎಲ್ಲ ದಕ್ಷಿಣ ರಾಜ್ಯಗಳ ಮುಖ್ಯಮಂತ್ರಿಗಳ ಮೂಲಕವೂ ನಬಾರ್ಡ್‌ಗೆ ಪತ್ರ ಬರೆಯಿಸಲಾಗುವುದು’ ಎಂದು ಹೇಳಿದರು.

‘ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಈ ಸಮಸ್ಯೆ ಸೃಷ್ಟಿಯಾಗಿದೆ. ನಬಾರ್ಡ್ ವರ್ಷದಿಂದ ವರ್ಷಕ್ಕೆ ರಿಯಾಯಿತಿ ಬಡ್ಡಿ ದರದ ಸಾಲ ಕಡಿಮೆ ಮಾಡುತ್ತ ಬಂದಿದ್ದು ಈಗ ಸುಮಾರು ₹ 20 ಸಾವಿರ ಕೋಟಿ ಕಡಿಮೆಯಾಗಿದೆ. ಪ್ರತಿಶತ ಶೇ 40ರಷ್ಟು ಇದ್ದ ಸಾಲದ ಪ್ರಮಾಣ ಈಗ ಶೇ 20ಕ್ಕೆ ಬಂದಿದೆ’ ಎಂದರು.

‘ಕೇಂದ್ರ ಸರ್ಕಾರ ಹೊಸದಾಗಿ ಸಹಕಾರ ಸಚಿವಾಲಯವನ್ನು ಆರಂಭಿಸಿರುವುದರಿಂದ ಯಾವುದೇ ಪ್ರಯೋಜನವಾಗಿಲ್ಲ. ಮಹಾರಾಷ್ಟ್ರದಲ್ಲಿರುವ ಸಹಕಾರ ಕ್ಷೇತ್ರದ ಮೇಲೆ ಹಿಡಿತ ಸಾಧಿಸುವ ಉದ್ದೇಶದಿಂದ ಇದನ್ನು ಮಾಡಿರಬಹುದು. ಇದರಿಂದ ಸಹಕಾರ ಕ್ಷೇತ್ರಕ್ಕೇನೂ ಪ್ರಯೋಜನವಾಗಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ರಾಜ್ಯದಲ್ಲಿ ಸುಮಾರು 63 ಲಕ್ಷ ರೈತರಿದ್ದು, ಈ ಪೈಕಿ ಸುಮಾರು 30ರಿಂದ 35 ಲಕ್ಷ ರೈತರು ಕೃಷಿ ಸಾಲಕ್ಕೆ ಡಿಸಿಸಿ ಬ್ಯಾಂಕುಗಳನ್ನು ಅವಲಂಬಿಸಿದ್ದಾರೆ. ನಬಾರ್ಡ್ ರಿಯಾಯಿತಿ ದರದ ಸಾಲದ ಮೊತ್ತ ಕಡಿಮೆ ಮಾಡಿದರೆ ಡಿಸಿಸಿ ಬ್ಯಾಂಕುಗಳ ಕೃಷಿ ಸಾಲ ವಿತರಣೆಯ ಸಾಮರ್ಥ್ಯ ಕಡಿಮೆಯಾಗಲಿದ್ದು, ಇದು ಕೃಷಿ ಕ್ಷೇತ್ರದ ಹಿನ್ನಡೆಗೆ ಕಾರಣವಾಗಲಿದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.