ಬೆಂಗಳೂರು: ರಾಜ್ಯದಲ್ಲಿ ಕನ್ನಡ ನಾಮಫಲಕ ಅಳವಡಿಕೆ ಸಂಬಂಧ ಸ್ವತಃ ಜಿಲ್ಲಾಧಿಕಾರಿಗಳೇ ವಿಧಾನಸಭಾ ಕ್ಷೇತ್ರವಾರು ಭೇಟಿ ನೀಡಿ, ನಾಮಫಲಕ ಅಳವಡಿಕೆ ಪ್ರಗತಿ ಕುರಿತು ಮಾ.12 ರಂದು ವರದಿ ನೀಡಬೇಕು ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ಎಸ್.ತಂಗಡಗಿ ಸೂಚನೆ ನೀಡಿದ್ದಾರೆ.
ಭಾಷಾ ಸಮಗ್ರ ಅಭಿವೃದ್ಧಿ (ತಿದ್ದುಪಡಿ) ಕಾಯ್ದೆ ಜಾರಿ ಸಂಬಂಧ ಸಚಿವರು ವಿಕಾಸಸೌಧದಲ್ಲಿ ಗುರುವಾರ ಜಿಲ್ಲಾಧಿಕಾರಿಗಳ ಜತೆ ವಿಡಿಯೊ ಸಂವಾದ ನಡೆಸಿದರು.
'ಹೊಸ ಕಾಯ್ದೆಯ ಪ್ರಕಾರ ವಾಣಿಜ್ಯ, ಉದ್ದಿಮೆಗಳ ನಾಮಫಲಕದಲ್ಲಿ ಶೇ 60 ರಷ್ಟು ಕನ್ನಡ ಭಾಷೆ ಇರಲೇಬೇಕು. ಅದಕ್ಕೆ ಸಂಬಂಧಿಸಿದಂತೆ ಪ್ರತಿ ಜಿಲ್ಲೆಯಲ್ಲಿನ ಪ್ರಗತಿ ಕುರಿತಂತೆ ಖುದ್ದು ಜಿಲ್ಲಾಧಿಕಾರಿಗಳೇ ಪರಿಶೀಲನೆ ನಡೆಸಬೇಕು ' ಎಂದು ಸೂಚಿಸಿದರು.
‘ನಾಮಫಲಕದಲ್ಲಿ ಶೇ 60ರಷ್ಟು ಕನ್ನಡ ಅಳವಡಿಕೆಯ ಗಡುವು ಮಾರ್ಚ್ 15ರವರೆಗೆ ಮುಂದೂಡಲಾಗಿದ್ದರೂ, ಈವರೆಗಿನ ಪ್ರಗತಿಯ ವರದಿ ನೀಡಬೇಕು. ಜಿಲ್ಲಾಧಿಕಾರಿ ನೇತೃತ್ವದಲ್ಲಿ ಜಿಲ್ಲಾ ಸಮಿತಿ ಹಾಗೂ ತಾಲ್ಲೂಕು ಮಟ್ಟದಲ್ಲಿ ಉಪವಿಭಾಗಾಧಿಕಾರಿ ಆಧ್ಯಕ್ಷತೆಯಲ್ಲಿ ಸಭೆ ನಡೆಸಿ ಸಮಸ್ಯೆಗಳನ್ನು ಇತ್ಯರ್ಥಗೊಳಿಸಬೇಕು’ ಎಂದೂ ಹೇಳಿದರು.
‘ಕನ್ನಡ ನಾಮಫಲಕ ಅಳವಡಿಕೆ ಕುರಿತು ವ್ಯಾಪಾರಿಗಳಲ್ಲಿ ಜಾಗೃತಿ ಮೂಡಿಸಬೇಕು ಹಾಗೂ ನಾಮಫಲಕ ಅಳವಡಿಸದವರಿಗೆ ನೋಟಿಸ್ ನೀಡಬೇಕು. ಕನ್ನಡ ನಾಮಫಲಕ ಅಳವಡಿಸದಿದ್ದರೆ ಉದ್ದಿಮೆ ಪರವಾನಗಿ ರದ್ದು ಸೇರಿದಂತೆ ದುಬಾರಿ ದಂಡ ವಿಧಿಸಲಾಗುವುದು’ ಎಂಬ ಎಚ್ಚರಿಕೆ ನೀಡಬೇಕು ಎಂದರು.
ಸಭೆಯಲ್ಲಿ ಇಲಾಖೆ ಕಾರ್ಯದರ್ಶಿ ಅಜಯ್ ನಾಗಭೂಷಣ್, ನಿರ್ದೇಶಕಿ ಡಾ.ಧರಣಿದೇವಿ ಮಾಲಗತ್ತಿ ಇದ್ದರು.
‘ಮರಾಠಿ ನಾಮಫಲಕ ತೆಗೆದು ಕನ್ನಡ ಹಾಕಿ’
ಗಡಿ ಜಿಲ್ಲೆಗಳಾದ ಬೆಳಗಾವಿ ಬಳ್ಳಾರಿ ಕೋಲಾರ ಚಿಕ್ಕಬಳ್ಳಾಪುರ ಚಾಮರಾಜನಗರ ತಮಕೂರು ದಕ್ಷಿಣಕನ್ನಡಗಳಲ್ಲಿ ಕನ್ನಡ ನಾಮಫಲಕ ಅಳವಡಿಕೆಗೆ ಹೆಚ್ಚಿನ ಒತ್ತು ನೀಡಬೇಕು. ಆ ಜಿಲ್ಲೆಗಳಲ್ಲಿ ಕನ್ನಡಪರ ಸಂಘಟನೆಗಳು ಹೆಚ್ಚಾಗಿ ಪ್ರತಿಭಟನೆ ನಡೆಸುತ್ತಿದ್ದು ಅದನ್ನು ನಿಯಂತ್ರಿಸಲು ಕನ್ನಡ ನಾಮಫಲಕ ಅಳವಡಿಕೆ ಶೇ 100 ರಷ್ಟು ಆಗಬೇಕು. ಖಾನಾಪುರ ನಿಪ್ಪಾಣಿ ಚಿಕ್ಕೋಡಿಯಂತಹ ತಾಲ್ಲೂಕುಗಳಲ್ಲಿ ಮರಾಠಿ ನಾಮಫಲಕ ತೆರವು ಮಾಡಿ ಕನ್ನಡ ನಾಮಫಲಕ ಅಳವಡಿಕೆ ಕಟ್ಟು ನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು ಎಂದು ಸಚಿವ ಶಿವರಾಜ್ ತಂಗಡಗಿ ನಿರ್ದೇಶನ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.