ಬೆಂಗಳೂರು: ‘ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ ಗಂಗಾ ಕಲ್ಯಾಣ ಯೋಜನೆಗೆ ನೀಡುವ ನೆರವಿನ ಮೊತ್ತವನ್ನು ₹ 3.50 ಲಕ್ಷಕ್ಕೆ ಹೆಚ್ಚಿಸಬೇಕು’ ಎಂದು ವಿವಿಧ ನಿಗಮ, ಮಂಡಳಿಗಳ ವ್ಯವಸ್ಥಾಪಕ ನಿರ್ದೇಶಕರಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶಿವರಾಜ ತಂಗಡಗಿ ಸೂಚಿಸಿದರು.
ವಿಧಾನಸೌಧದ ತಮ್ಮ ಕೊಠಡಿಯಲ್ಲಿ ಅಧಿಕಾರಿಗಳ ಸಭೆ ನಡೆಸಿದ ಅವರು, ‘ಗಂಗಾ ಕಲ್ಯಾಣ ಯೋಜನೆಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಪ್ರತಿ ಘಟಕಕ್ಕೆ ₹ 2 ನೀಡಲಾಗುತ್ತಿದೆ. ಆದರೆ, ಸಮಾಜ ಕಲ್ಯಾಣ ಇಲಾಖೆಯಲ್ಲಿ ₹ 3.5 ಲಕ್ಷ ನೀಡಲಾಗುತ್ತಿದೆ. ಒಂದೇ ಉದ್ದೇಶಕ್ಕಾಗಿ ನೀಡುವ ನೆರವಿನ ಮೊತ್ತದಲ್ಲಿ ಇಲಾಖೆಗೊಂದು ನೀತಿ ಅನುಸರಿಸುವುದು ಸೂಕ್ತವಲ್ಲ’ ಎಂದು ಅವರು ಅಭಿಪ್ರಾಯಪಟ್ಟರು.
ರ‍್ಯಾಂಕಿಂಗ್ ಹೆಚ್ಚಳ: ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಉನ್ನತ ಶಿಕ್ಷಣ ಪಡೆಯಲು ಇಚ್ಛಿಸುವ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡಲು ವಿಶ್ವ ರ‍್ಯಾಂಕಿಂಗ್‌ನಲ್ಲಿ 150ರ ಒಳಗಿರಬೇಕು ಎಂಬ ನಿಯಮವನ್ನು 500 ರ‍್ಯಾಂಕಿಂಗ್ ಒಳಗಿರುವ ವಿದ್ಯಾರ್ಥಿಗಳಿಗೆ ಎಂದು ತಿದ್ದುಪಡಿ ಮಾಡಬೇಕು ಎಂದು ಸಚಿವರು ಸೂಚಿಸಿದರು.
ಸಾರಥಿ ಸ್ವಾವಲಂಬನೆ: ಬಜೆಟ್‌ನಲ್ಲಿ ಘೋಷಿಸಿರುವ ‘ಸಾರಥಿ ಸ್ವಾವಲಂಬನೆ’ ಯೋಜನೆಯಡಿ ರೈತರಲ್ಲದ ಹಿಂದುಳಿದ ವರ್ಗಗಳ ಫಲಾನುಭವಿಗಳು ಸ್ವಸಾಮರ್ಥ್ಯದ ಮೇಲೆ ಜೀವನ ರೂಪಿಸಿಕೊಳ್ಳಲು ಸರಕು ಸಾಗಣೆ ವಾಹನ ಖರೀದಿಗೆ ₹ 3 ಲಕ್ಷವರೆಗೆ ಸಹಾಯಧನ ನೀಡಲಾಗುವುದು. ಈ ಯೋಜನೆಗೆ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಬೇಕು ಎಂದೂ ತಿಳಿಸಿದರು.
‘ಅರಿವು’ ಯೋಜನೆ: ‘ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಸಿಇಟಿ ಮೂಲಕ ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಶಿಕ್ಷಣಕ್ಕೆ ಪ್ರವೇಶ ಪಡೆದರೆ ಪ್ರತಿವರ್ಷ ₹ 1 ಲಕ್ಷದಂತೆ ಶೈಕ್ಷಣಿಕ ಸಾಲವನ್ನು ಶೇ 2ರಷ್ಟು ಬಡ್ಡಿ ದರದಲ್ಲಿ ನೀಡಲಾಗುವುದು. ದೇವರಾಜ ಅರಸು ಅಭಿವೃದ್ಧಿ ನಿಗಮದ ವತಿಯಿಂದ ಪ್ರತಿ ವರ್ಷ 1,000 ವಿದ್ಯಾರ್ಥಿಗಳಿಗೆ ಈ ಸಾಲ ನೀಡಲಾಗುತ್ತಿದೆ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವ್ಯಾಪ್ತಿಯ ಇತರ ನಿಗಮಗಳಿಂದಲೂ ವಿದ್ಯಾರ್ಥಿಗಳು ಈ ನೆರವು ಪಡೆದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ’ ಎಂದೂ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.