ಗುಬ್ಬಿ/ಕುಣಿಗಲ್ (ತುಮಕೂರು): ಕೇಂದ್ರ ಸಚಿವ ವಿ. ಸೋಮಣ್ಣ ಹಾಗೂ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಬಿಜೆಪಿ ಸಂಸದ ಡಾ.ಸಿ.ಎನ್. ಮಂಜುನಾಥ್ ಶನಿವಾರ ಬಿಜೆಪಿ ಹಿರಿಯ ಮುಖಂಡ ಎಲ್.ಕೆ ಅಡ್ವಾಣಿ ನಿಧನರಾಗಿದ್ದಾರೆ ಎಂದು ಘೋಷಿಸಿ, ಕಾರ್ಯಕರ್ತರ ಸಭೆಯಲ್ಲಿ ಶ್ರದ್ಧಾಂಜಲಿ ಸಲ್ಲಿಸಿದರು. ಸುದ್ದಿ ಸುಳ್ಳು ಎಂದು ಗೊತ್ತಾದ ನಂತರ ತಮ್ಮಿಂದ ಆದ ಈ ಅಚಾತುರ್ಯಕ್ಕೆ ಇಬ್ಬರೂ ಕ್ಷಮೆ ಕೋರಿದರು.
ಗುಬ್ಬಿಯಲ್ಲಿ ನಡೆದ ಬಿಜೆಪಿ, ಜೆಡಿಎಸ್ ಕಾರ್ಯಕರ್ತರ ಅಭಿನಂದನಾ ಸಮಾರಂಭದಲ್ಲಿ ಭಾಷಣ ಮಾಡುತ್ತಿದ್ದ ಕೇಂದ್ರ ಸಚಿವ ವಿ.ಸೋಮಣ್ಣ ಅವರಿಗೆ ವೇದಿಕೆಯಲ್ಲಿದ್ದ ಕಾರ್ಯಕರ್ತರು ಮತ್ತು ಪಕ್ಷದ ಮುಖಂಡರು, ‘ಎಲ್.ಕೆ ಅಡ್ವಾಣಿ ನಿಧನರಾದರು’ ಎಂಬ ಸುದ್ದಿ ತಿಳಿಸಿದರು.
ಕೂಡಲೇ ಭಾಷಣ ನಿಲ್ಲಿಸಿದ ಸೋಮಣ್ಣ, ‘ನಮ್ಮ ನಾಯಕ ಅಡ್ವಾಣಿ ಅವರು ಈಗ ತಾನೇ ನಿಧನರಾದರು’ ಎಂದು ಕಾರ್ಯಕ್ರಮದಲ್ಲಿ ಘೋಷಿಸಿಯೇ ಬಿಟ್ಟರು. ಎಲ್ಲರೂ ಎರಡು ನಿಮಿಷ ಮೌನ ಆಚರಿಸಿ ಶ್ರದ್ಧಾಂಜಲಿ ಸಲ್ಲಿಸೋಣ ಎಂದು ಮನವಿ ಮಾಡಿದರು. ಬಳಿಕ ಭಾಷಣ ಮುಂದುವರಿಸಿದ ಅವರು, ತಕ್ಷಣ ದೆಹಲಿಗೆ ಹೊರಡಬೇಕಾಗಿರುವುದರಿಂದ ಕಾರ್ಯಕ್ರಮ ಮುಂದೂಡುವುದಾಗಿ ಹೇಳಿದರು.
ಸತ್ಯ ಸಂಗತಿ ತಿಳಿದ ಬಳಿಕ ಮುಜುಗರಕ್ಕೆ ಒಳಗಾದ ಅವರು, ತಮ್ಮಿಂದಾದ ಅಚಾತುರ್ಯಕ್ಕೆ ಕ್ಷಮೆ ಕೋರಿ ಅವಸರದಿಂದಲೇ ಸಭೆಯಿಂದ ನಿರ್ಗಮಿಸಿದರು.
ಮತ್ತೊಂದೆಡೆ, ಕುಣಿಗಲ್‌ನಲ್ಲಿ ನಡೆದ ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರು ಅಭಿನಂದನಾ ಸಮಾರಂಭದಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಬಿಜೆಪಿ ಸಂಸದ ಡಾ.ಸಿ.ಎನ್.ಮಂಜುನಾಥ್ ಕೂಡ ಇದೇ ಎಡವಟ್ಟು ಮಾಡಿದರು.
ಬಿಜೆಪಿ ಹಿರಿಯ ಮುಖಂಡ ಎಲ್.ಕೆ.ಅಡ್ವಾಣಿ ನಿಧನವಾಗಿದ್ದಾರೆ ಎಂದು ಡಾ. ಮಂಜುನಾಥ್ ಕಾರ್ಯಕರ್ತರ ಸಭೆಯಲ್ಲಿ ಘೋಷಣೆ ಮಾಡಿದರು.
ಮಾಜಿ ಸಚಿವ ಡಿ.ನಾಗರಾಜಯ್ಯ, ಸ್ಥಳೀಯ ಬಿಜೆಪಿ ಮುಖಂಡ ಡಿ.ಕೃಷ್ಣಕುಮಾರ ಸೇರಿದಂತೆ ನೂರಾರು ಬಿಜೆಪಿ, ಜೆಡಿಎಸ್ ಮುಖಂಡರು ಮತ್ತು ಕಾರ್ಯಕರ್ತರ ಜತೆಗೂಡಿ ಕಾರ್ಯಕ್ರಮದಲ್ಲಿ ಒಂದು ನಿಮಿಷ ಮೌನಾಚರಣೆ ಮಾಡಿ ಶ್ರದ್ಧಾಂಜಲಿ ಸಲ್ಲಿಸಿದರು.
ಸ್ತಯ ಸಂಗತಿ ಗೊತ್ತಾದ ಬಳಿಕ ಎಚ್ಚೆತ್ತುಕೊಂಡ ಡಾ. ಮಂಜುನಾಥ್ ಅವರು, ‘ಸಾಮಾಜಿಕ ಜಾಲತಾಣಗಳಲ್ಲಿ ಬಿತ್ತರವಾದ ಸುಳ್ಳು ಸುದ್ದಿಯಿಂದ ಈ ಅಚಾತುರ್ಯವಾಗಿದೆ’ ಎಂದು ಕಾರ್ಯಕ್ರಮದ ಕೊನೆಯಲ್ಲಿ ವಿಷಾದ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.