ಬೆಂಗಳೂರು: ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸರ್ಕಾರ ಬದ್ಧವಾಗಿದೆ. ಮುಷ್ಕರ ಕೈಬಿಟ್ಟು ಬೋಧನಾ ಕಾರ್ಯಕ್ಕೆ ಮರಳಲು ಜ.6ರವರೆಗೂ ಗಡುವು ನೀಡಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಹೇಳಿದರು.
ಮಂಗಳವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಅತಿಥಿ ಉಪನ್ಯಾಸಕರನ್ನು ಕಾಯಂ ಮಾಡಲು ಕಾನೂನು ಹಾಗೂ ನ್ಯಾಯಾಲಯಗಳ ತೀರ್ಪಿನ ಪ್ರಕಾರ ಸಾಧ್ಯವಿಲ್ಲ. ಚುನಾವಣಾ ಪ್ರಣಾಳಿಕೆಯಲ್ಲಿ ಪಕ್ಷ ಕೊಟ್ಟ ಭರವಸೆ ಉಳಿಸಿಕೊಳ್ಳಲು ಸರ್ಕಾರ ಬದ್ಧವಾಗಿದೆ. ಅವರ ಬೇಡಿಕೆಗಳನ್ನು ಸಹಾನುಭೂತಿಯಿಂದ ಪರಿಶೀಲಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗೌರವಧನ ಹೆಚ್ಚಳ ಸೇರಿದಂತೆ ಕೆಲ ಅನುಕೂಲ ಮಾಡಿಕೊಟ್ಟಿದ್ದಾರೆ. ಹಂತಹಂತವಾಗಿ ಇನ್ನಷ್ಟು ಅನುಕೂಲ ಮಾಡಿಕೊಡಲಾಗುವುದು ಎಂದರು.
‘ಸರ್ಕಾರದ ಸ್ಪಂದನೆ ಜತೆಗೆ ಜ.1ರಂದು ಬೋಧನೆಗೆ ಹಾಜರಾಗುವಂತೆ ಮಾಡಿದ ಮನವಿಗೆ ಓಗೊಟ್ಟು ಈಗಾಗಲೇ 3,200 ಅತಿಥಿ ಉಪನ್ಯಾಸಕರು ಕೆಲಸಕ್ಕೆ ಮರಳಿದ್ದಾರೆ. ಕೆಲವರು ಸೇವಾಭದ್ರತೆಗೆ ಆಗ್ರಹಿಸಿ ಪಾದಯಾತ್ರೆ ಮಾಡುತ್ತಿದ್ದಾರೆ. ಜ.6ರವರೆಗೂ ಕಾಯುತ್ತೇವೆ. ಈಗಾಗಲೇ ಅಧಿಕಾರಿಗಳು, ಪ್ರಾಂಶುಪಾಲರ ಜತೆ ಸಭೆ ನಡೆಸಿದ್ದು, ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಮುಂದಿನ ವಾರದಿಂದಲೇ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳುತ್ತೇವೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.