ADVERTISEMENT

"ಪರೀಕ್ಷಾ ಕೇಂದ್ರಗಳು ಮನೆಯಷ್ಟೇ ಸುರಕ್ಷಿತ: ಸಚಿವ ಸುರೇಶ್ ಕುಮಾರ್

ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರಗಳಿಗೆ ಶಿಕ್ಷಣ ಸಚಿವರ ಭೇಟಿ

​ಪ್ರಜಾವಾಣಿ ವಾರ್ತೆ
Published 1 ಜುಲೈ 2020, 15:58 IST
Last Updated 1 ಜುಲೈ 2020, 15:58 IST
ಹಾರೋಹಳ್ಳಿಯ ಕರ್ನಾಟಕ ಪಬ್ಲಿಕ್‌ ಶಾಲೆಯಲ್ಲಿನ ಪರೀಕ್ಷಾ ಕೇಂದ್ರಕ್ಕೆ ಬುಧವಾರ ಶಿಕ್ಷಣ ಸಚಿವ ಸುರೇಶ್‌ಕುಮಾರ್‍ ಭೇಟಿ ನೀಡಿದ್ದರು
ಹಾರೋಹಳ್ಳಿಯ ಕರ್ನಾಟಕ ಪಬ್ಲಿಕ್‌ ಶಾಲೆಯಲ್ಲಿನ ಪರೀಕ್ಷಾ ಕೇಂದ್ರಕ್ಕೆ ಬುಧವಾರ ಶಿಕ್ಷಣ ಸಚಿವ ಸುರೇಶ್‌ಕುಮಾರ್‍ ಭೇಟಿ ನೀಡಿದ್ದರು   

ರಾಮನಗರ: ಪರೀಕ್ಷಾ ಕೇಂದ್ರಗಳು ಮನೆಯಷ್ಟೇ ಸುರಕ್ಷಿತವಾಗಿದ್ದು, ದಿನ ಕಳೆದಂತೆ ವಿದ್ಯಾರ್ಥಿಗಳಲ್ಲಿನ ಆತಂಕವೂ ದೂರವಾಗುತ್ತಿದೆ ಎಂದು ಶಿಕ್ಷಣ ಸಚಿವ ಸುರೇ‌ಶ್‌ಕುಮಾರ್‍ ತಿಳಿಸಿದರು.

ನಗರದ ಭಾರತೀಯ ಸಂಸ್ಕೃತಿ ವಿದ್ಯಾಪೀಠದ ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರಕ್ಕೆ ಬುಧವಾರ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಗಳನ್ನು ಪರಿಶೀಲಿಸಿದ ಸಂದರ್ಭ ಪತ್ರಕರ್ತರ ಜೊತೆ ಅವರು ಮಾತನಾಡಿದರು. ಇಂಗ್ಲಿಷ್, ಗಣಿತ, ವಿಜ್ಞಾನ ಪರೀಕ್ಷೆಗಳು ಈಗಾಗಲೇ ಮುಗಿದಿದ್ದು, ಬುಧವಾರ ವಿದ್ಯಾರ್ಥಿಗಳು ಸಮಾಜ ವಿಜ್ಞಾನ ಪರೀಕ್ಷೆ ಬರೆದಿದ್ದಾರೆ. ಪರೀಕ್ಷಾ ಕೇಂದ್ರಗಳು ಮಕ್ಕಳ ಸುರಕ್ಷಿತಾ ಕೇಂದ್ರವಾಗಿರಲಿದೆ ಎಂದು ಭರವಸೆ ನೀಡಿದ್ದೆವು. ಅದೇ ರೀತಿ ಸಾಕಷ್ಟು ಮುಂಜಾಗ್ರತ ಕ್ರಮಗಳನ್ನು ತೆಗೆದುಕೊಂಡಿದ್ದು ಪರೀಕ್ಷೆ ಬರೆಸಲಾಗುತ್ತಿದೆ ಎಂದು ಹೇಳಿದರು.

"ಜಿಲ್ಲೆಯ ಕನಕಪುರ, ಚನ್ನಪಟ್ಟಣ ಮತ್ತು ರಾಮನಗರ ತಾಲೂಕಿನ 12 ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿದ್ದೇನೆ. ಮರಳವಾಡಿಯ ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿದ್ದ ಸಮಯದಲ್ಲಿ ವಿದ್ಯಾರ್ಥಿಗಳನ್ನು ಮಾತನಾಡಿಸಿದೆ. ಈ ವೇಳೆ ಗಣಿತ ಮತ್ತು ವಿಜ್ಞಾನ ವಿಷಯಗಳ ಕುರಿತು ಪರೀಕ್ಷಾ ಅನುಭವನ್ನು ಹಂಚಿಕೊಂಡಿದ್ದಾರೆ. ಕೇಂದ್ರದಲ್ಲಿನ ಶಿಸ್ತು, ಅಂತರ ಪಾಲನೆ ರಾಜ್ಯದ ಹಿರಿಯರಿಗೆ ಮಾದರಿಯಾಗಿ ನಿಲ್ಲಲಿದೆ. ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಆತಂಕ ದೂರ ಮಾಡಿದೆ’ ಎಂದು ಹೇಳಿದರು.

ADVERTISEMENT

ಪೂರಕ ಪರೀಕ್ಷೆ: ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಸೋಂಕು ಕಾಣಿಸಿಕೊಂಡರೆ ಹೆದರುವ ಅವಶ್ಯಕತೆ ಇಲ್ಲ. ಎಲ್ಲರಿಗೂ ಆಗಸ್ಟ್ ತಿಂಗಳ ಕೊನೆಯ ಭಾಗದಲ್ಲಿ ಪೂರಕ ಪರೀಕ್ಷೆ ಮಾಡಲಿದ್ದೇವೆ. ಅಂದು ಪರೀಕ್ಷೆ ಬರೆಯುವವರನ್ನು ಹೊಸ ವಿದ್ಯಾರ್ಥಿಗಳು ಎಂದೇ ಪರಿಗಣಿಸಲಾಗುವುದು. ರಾಜ್ಯದಲ್ಲಿ ಈತನಕ 10- 12 ವಿದ್ಯಾರ್ಥಿಗಳು ಸೋಂಕಿಗೆ ತುತ್ತಾಗಿದ್ದಾರೆ. ಎಲ್ಲರಿಗೂ ಪೂರಕ ಪರೀಕ್ಷೆಯ ವ್ಯವಸ್ಥೆ ಮಾಡಿಕೊಡಲಾಗುತ್ತದೆ ಎಂದು ತಿಳಿಸಿದರು.

ಆಗಸ್ಟ್‌ 15ರ ನಂತರವಷ್ಟೇ ಶಾಲೆ: ಶಾಲೆ ಆರಂಭದ ಕುರಿತು ಪ್ರತಿ ಶಾಲೆಯ ಪೋಷಕರ ಅಭಿಪ್ರಾಯ ಸಂಗ್ರಹಿಸಲಾಗಿತ್ತು. ಪ್ರಾಥಮಿಕ ಶಾಲೆಗಳನ್ನು ಆರಂಭಿಸದಂತೆ ಪೋಷಕರೇ ಮನವಿ ಮಾಡಿಕೊಂಡಿದ್ದಾರೆ. ಹೀಗಾಗಿ ಸದ್ಯಕ್ಕೆ ಶಾಲೆ ಆರಂಭಿಸುವುದಿಲ್ಲ. ಆಗಸ್ಟ್‌ 15ರ ಬಳಿಕ ಪರಿಸ್ಥಿತಿ ನೋಡಿಕೊಂಡು ತೀರ್ಮಾನಿಸುತ್ತೇವೆ ಎಂದರು.

ಎಲ್‍ಕೆಜಿ, ಯುಕೆಜಿ ವಿದ್ಯಾರ್ಥಿಗಳಿಗೆ ಆನ್‍ಲೈನ್ ಕ್ಲಾಸ್ ಮಾಡುವುದು. ಲೆಕ್ಕಾಚಾರ ಇಲ್ಲದೇ ನಿರಂತರವಾಗಿ ತರಗತಿಗಳು ನಡೆಯುತ್ತಿದ್ದವು. ಇದರ ಹೆಸರಿನಲ್ಲಿ ಶುಲ್ಕವನ್ನು ಪಡೆದುಕೊಳ್ಳುತ್ತಿದ್ದರು. ಇದನ್ನು ಪರಿಗಣಿಸಿ ಎಲ್‍ಕೆಜಿ ಯಿಂದ 5ನೇ ತರಗತಿ ತನಕ ಆನ್‍ಲೈನ್‌ ತರಗತಿಗಳನ್ನು ನಡೆಸುವುದನ್ನು ನಿಷೇಧಿಸಲಾಗಿದೆ. ಕೇಂದ್ರ ಸರ್ಕಾರವೂ ಈ ಬಗ್ಗೆ ಮಾರ್ಗಸೂಚಿ ಹೊರಡಿಸಿದ್ದು ಅದರಂತೆ ಎಲ್‍ಕೆಜಿ ಮತ್ತು ಯುಕೆಜಿ ಮಕ್ಕಳಿಗೆ ಆನ್‍ಲೈನ್ ಶಿಕ್ಷಣ ಇಲ್ಲ. ಬದಲಿಗೆ ಪೋಷಕರ ಜತೆಗೆ ವಾರಕೊಮ್ಮೆ ಶಿಕ್ಷಕರು ಮಾತನಾಡಲು ಅವಕಾಶ ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದರು.

ತಜ್ಞರ ಸಮಿತಿ: ಆನ್‌ಲೈನ್‌ ತರಗತಿ ಆಯೋಜನೆ ಸಂಬಂಧ ತಜ್ಞರ ಸಮಿತಿ ರಚನೆ ಮಾಡಲಾಗಿದೆ. ಯಾವ ವಯಸ್ಸಿನಿಂದ ಹಾಗೂ ಯಾವ ತರಗತಿಯಿಂದ ಆನ್‍ಲೈನ್ ಕ್ಲಾಸ್ ಶುರು ಮಾಡಬಹುದು? ಗ್ರಾಮೀಣ ಭಾಗದ ಸರ್ಕಾರಿ ಶಾಲಾ ಮಕ್ಕಳು ತಂತ್ರಜ್ಞಾನದಿಂದ ವಂಚಿತರಾಗಬಾರದು. ಹಾಗಾಗಿ ಶಿಕ್ಷಣದಲ್ಲಿ ತಂತ್ರಜ್ಞಾನವನ್ನು ಹೇಗೆ ಕೊಂಡೊಯ್ಯಬಹುದು ಎಂಬುದಾಗಿ ಸಮಿತಿ ಅಧ್ಯಯನ ಮಾಡುತ್ತಿದೆ ಎಂದು ಹೇಳಿದರು.

ಖಾಸಗಿ ಶಾಲೆಯಲ್ಲಿ ಶಿಕ್ಷಕರನ್ನು ತೆಗೆಯುವುದು ನನ್ನ ಗಮನಕ್ಕು ಬಂದಿದೆ. ಪ್ರಧಾನಿ ಮೋದಿ ಅವರೇ ಮನವಿ ಮಾಡಿಕೊಂಡಿದ್ದಾರೆ. ಮಾನವೀಯತೆಯಿಂದ ಯಾರನ್ನು ಕೆಲಸದಿಂದ ತೆಗೆಯಬಾರದು. ಶಿಕ್ಷಣ ಸಂಸ್ಥೆಗಳು ನೌಕರರ ಹಿತ ಕಾಯಬೇಕು ಎಂದು ಹೇಳಿದರು. ರಾಜ್ಯದಲ್ಲಿ ವಿರೋಧ ಪಕ್ಷದವರು ಲಾಕ್‍ಡೌನ್ ಪ್ರಸ್ತಾಪ ಮಾಡಿದ್ದಾರೆ. ಕೊರೊನಾ ಹೆಮ್ಮಾರಿ ದೇಶಾದ್ಯಂತ ವ್ಯಾಪಕವಾಗಿ ಹರಡುತ್ತಿದೆ. ಜನರ ಹಿತ ದೃಷ್ಟಿಯಿಂದ ಕಠಿಣ ಕ್ರಮದ ಅವಶ್ಯಕತೆ ಇದೆ ಎಂದು ಹೇಳಿದರು.

ಈ ವೇಳೆ ಸಿಇಒ ಇಕ್ರಂ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಸೋಮಶೇಖರಯ್ಯ, ಶಿಕ್ಷಣ ಇಲಾಖೆ ಅಧಿಕಾರಿಗಳು ಹಾಜರಿದ್ದರು.

ಎಲ್ಲೆಲ್ಲಿಗೆ ಭೇಟಿ

ಕನಕಪುರ ತಾಲೂಕಿನ ಹಾರೋಹಳ್ಳಿಯ ಕರ್ನಾಟಕ ಪಬ್ಲಿಕ್ ಶಾಲೆ, ಮರಳವಾಡಿಯ ಮುರಾರ್ಜಿ ದೇಸಾಯಿ ಮತ್ತು ಸರ್ಕಾರಿ ಪ್ರೌಢಶಾಲೆ, ಕನಕಪುರ ಟೌನ್ ವ್ಯಾಪ್ತಿಯ ಮುನ್ಸಿಪಲ್ ಹೈಸ್ಕೂಲ್, ಆರ್‍ಇಎಸ್ ಶಿಕ್ಷಣ ಸಂಸ್ಥೆ ಬಾಲಕರ ಮತ್ತು ಬಾಲಕಿಯರ ಪ್ರೌಢಶಾಲೆ, ಚನ್ನಪಟ್ಟಣದ ತಾಲ್ಲೂಕಿನ ಹೊಂಗನೂರು ಪ್ರೌಢಶಾಲೆ, ಟೌನ್ ವ್ಯಾಪ್ತಿಯ ಸೇಂಟ್ ಆನ್ಸ್, ಸರ್ಕಾರಿ ಪ್ರೌಢಶಾಲೆ ಹಾಗೂ ರಾಮನಗರದ ಭಾರತೀಯ ಸಂಸ್ಕೃತಿ ವಿದ್ಯಾಪೀಠ ವಿದ್ಯಾಪೀಠ,ಬಾಲಕಿಯರ ಸರ್ಕಾರಿ ಪ್ರೌಢಶಾಲೆ, ಬಿಡದಿಯ ಸರ್ಕಾರಿ ಪ್ರೌಢಶಾಲೆಗೆ ಭೇಟಿ ನೀಡಿದರು.

ಮನವಿ

ಶಿಕ್ಷಣ ಸಂಸ್ಥೆಗಳಿಗೆ ಸರ್ಕಾರವು ನೀಡಬೇಕಾದ ಆರ್‌ಟಿಸಿ ಬಾಕಿ ಅನುದಾನವನ್ನು ಕೂಡಲೇ ಬಿಡುಗಡೆ ಮಾಡಬೇಕು. ಖಾಸಗಿ ಶಾಲಾ ಶಿಕ್ಷಕರು ಹಾಗೂ ಬೋಧಕೇತರ ವರ್ಗಕ್ಕೆ ಪ್ರೋತ್ಸಾಹ ಧನ ನೀಡಬೇಕು. ಶಾಲೆಗಳನ್ನು ಆರಂಭಿಸಲು ಅವಕಾಶ ನೀಡಬೇಕು’ ಎಂದು ಕೋರಿ ಖಾಸಗಿ ಶಾಲಾ ಶಿಕ್ಷಕರ ಒಕ್ಕೂಟದ ಪದಾಧಿಕಾರಿಗಳು ಸಚಿವ ಸುರೇಶ್ ಕುಮಾರ್ ಅವರಿಗೆ ಬುಧವಾರ ಮನವಿ ಸಲ್ಲಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.