ಬೆಂಗಳೂರು: ಕರ್ನಾಟಕ ಗೃಹ ಮಂಡಳಿ ಅಭಿವೃದ್ಧಿಪಡಿಸುವ ಉಪನಗರ ಹಾಗೂ ವಿಲ್ಲಾ ಯೋಜನೆಗಳಿಗೆ ಅಗತ್ಯ ಜಮೀನು ಗುರುತಿಸುವ ಕಾರ್ಯವನ್ನು ತಕ್ಷಣ ಆರಂಭಿಸುವಂತೆ ವಸತಿ ಸಚಿವ ಜಮೀರ್ ಅಹಮದ್ ಖಾನ್ ಸೂಚಿಸಿದರು.
ಗೃಹಮಂಡಳಿ ಕಚೇರಿಯಲ್ಲಿ ಬುಧವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
ರಾಜಧಾನಿಯ ಐದು ಕಡೆ ತಲಾ ಎರಡು ಸಾವಿರ ಎಕರೆಯಲ್ಲಿ ಉಪನಗರ ಹಾಗೂ ತಲಾ 500 ಎಕರೆಯಲ್ಲಿ ನಾಲ್ಕು ಕಡೆ ವಿಲ್ಲಾ ಯೋಜನೆ ಅನುಷ್ಠಾನಗೊಳಿಸಲು ನಿರ್ಧರಿಸಲಾಗಿದೆ. ಅದಕ್ಕಾಗಿ ಅಧಿಕಾರಿಗಳ ವಿಶೇಷ ತಂಡ ರಚಿಸಬೇಕು ಎಂದರು.
ರಾಜಧಾನಿಯ ನಾಲ್ಕು ಭಾಗಗಳಲ್ಲಿ ಮೆಟ್ರೊ ಸೌಲಭ್ಯ ಸೇರಿದಂತೆ ಸೂಕ್ತ ಸಾರಿಗೆ ಸಂಪರ್ಕ ಹಾಗೂ ಇತರೆ ಮೂಲಸೌಕರ್ಯ ವ್ಯವಸ್ಥೆಗೆ ಅನುಕೂಲವಾಗುವಂತಹ ಜಮೀನು ಗುರುತಿಸಬೇಕು. 50:50ರ ಅನುಪಾತದಲ್ಲಿ ಜಮೀನು ಪಡೆಯಲು ಮಾಲೀಕರ ಜತೆ ಒಪ್ಪಂದ ಮಾಡಿಕೊಳ್ಳಬೇಕು ಎಂದು ಸೂಚಿಸಿದರು.
ಬೆಂಗಳೂರು ನಗರ ಹೊರತುಪಡಿಸಿ ರಾಜ್ಯದ ಇತರೆ ಭಾಗಗಳಲ್ಲಿ ಬಿಪಿಎಲ್ ಕುಟುಂಬಗಳಿಗೆ ರಿಯಾಯಿತಿ ದರದಲ್ಲಿ ನಿವೇಶನ ಅಥವಾ ಮನೆ ನಿರ್ಮಿಸಿಕೊಡುವ ಯೋಜನೆ ರೂಪಿಸುವ ಚಿಂತನೆ ಇದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.