ಬೆಂಗಳೂರು: ಗುರುವಾರ ಬೆಳಿಗ್ಗೆ ವಿಧಾನಸಭೆಯ ಕಲಾಪ ಆರಂಭವಾಗುವ ಸಮಯದಲ್ಲಿ ಬಹುತೇಕ ಸಚಿವರು ಗೈರಾಗಿದ್ದನ್ನು ಪ್ರತಿಭಟಿಸಿ ವಿರೋಧ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಸಭಾತ್ಯಾಗ ನಡೆಸಿದವು.
ಬೆಳಿಗ್ಗೆ 10.20ರ ಸುಮಾರಿಗೆ ಕಲಾಪ ಆರಂಭವಾಯಿತು. ಆಡಳಿತ ಪಕ್ಷದ ಮೊದಲ ಸಾಲಿನಲ್ಲಿ ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ. ಮಹದೇವಪ್ಪ ಮಾತ್ರ ಇದ್ದರು. ಎರಡನೇ ಸಾಲಿನಲ್ಲಿ ಯಾವುದೇ ಸಚಿವರು ಇರಲಿಲ್ಲ. ಮೂರನೇ ಸಾಲಿನಲ್ಲಿ ನಾಲ್ವರು ಸಚಿವರು ಮಾತ್ರ ಇದ್ದರು.
ಬಹುತೇಕ ಸಚಿವರು ಕಲಾಪಕ್ಕೆ ಗೈರಾಗಿರುವುದಕ್ಕೆ ವಿರೋಧ ಪಕ್ಷದ ನಾಯಕ ಆರ್. ಅಶೋಕ ಸೇರಿದಂತೆ ಬಿಜೆಪಿ, ಜೆಡಿಎಸ್‌ನ ಹಲವು ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಸಚಿವರು ಸದನಕ್ಕೆ ಬಾರದೆ ಅಗೌರವ ತೋರುತ್ತಿದ್ದಾರೆ ಎಂದು ಆರೋಪಿಸಿ ಸಭಾತ್ಯಾಗ ಮಾಡಿದರು.
ಸಚಿವರು ಗೈರಾಗಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸಭಾಧ್ಯಕ್ಷ ಯು.ಟಿ. ಖಾದರ್, ‘ಸಚಿವರು ಅಧಿವೇಶನದ ಅವಧಿಯಲ್ಲಿ ಬೇರೆ ಕಾರ್ಯಕ್ರಮಗಳನ್ನು ಒಪ್ಪಿಕೊಳ್ಳಬಾರದು. ಅಧಿವೇಶನವೇ ಮುಖ್ಯ ಆಗಬೇಕು’ ಎಂದರು.
ಮಹದೇವಪ್ಪ ಮಾತನಾಡಿ, ‘ವಿರೋಧ ಪಕ್ಷದ ಸದಸ್ಯರು ಪ್ರಶ್ನೆ ಎತ್ತಿದಾಗ ನಾವು ಇಲ್ಲಿಯೇ ಇದ್ದೆವು. ಎಲ್ಲ ಪ್ರಶ್ನೆಗಳಿಗೂ ಉತ್ತರ ನೀಡುತ್ತೇವೆ. ನಮ್ಮದು ಪಲಾಯನ ಮಾಡುವ ಸರ್ಕಾರ ಅಲ್ಲ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.