ಬೆಂಗಳೂರು: ಕಲಾಪದಲ್ಲಿ ಭಾಗವಹಿಸಬೇಕಿದ್ದ ಸಚಿವರು ಸಾಮೂಹಿಕವಾಗಿ ಗೈರಾಗಿದ್ದರಿಂದ ಬುಧವಾರ ಮಧ್ಯಾಹ್ನದ ಬಳಿಕ ವಿಧಾನ ಪರಿಷತ್ ಕಲಾಪ ನಡೆಯಲಿಲ್ಲ.
ಮಧ್ಯಾಹ್ನ 1.45ಕ್ಕೆ ಗಂಟೆಗೆ ಸದನದ ಕೋರಂ ಬೆಲ್ ಹಾಕಲಾಯಿತು. 15 ನಿಮಿಷಗಳ ಬಳಿಕ ಕಲಾಪ ಆರಂಭವಾಯಿತು. ಆದರೆ, ಸಭಾ ನಾಯಕ ಕೋಟ ಶ್ರೀನಿವಾಸ ಪೂಜಾರಿ ಮತ್ತು ಕೆಲವು ಸದಸ್ಯರು ಮಾತ್ರ ಆಡಳಿತ ಪಕ್ಷದ ಸಾಲಿನಲ್ಲಿದ್ದರು. ಸಚಿವರಾದ ಎಂ.ಟಿ.ಬಿ. ನಾಗರಾಜ್, ಕೆ. ಗೋಪಾಲಯ್ಯ, ಸಿ.ಸಿ. ಪಾಟೀಲ, ಮುರುಗೇಶ ನಿರಾಣಿ, ಸಿ.ಪಿ. ಯೋಗೇಶ್ವರ ಹಾಜರಿರಬೇಕಿತ್ತು. ಒಬ್ಬರೂ ಸದನಕ್ಕೆ ಬಂದಿರಲಿಲ್ಲ.
ಕಾಂಗ್ರೆಸ್ ಸದಸ್ಯ ಬಿ.ಕೆ. ಹರಿಪ್ರಸಾದ್ ಬಜೆಟ್ ಕುರಿತು ಮಾತನಾಡಬೇಕಿತ್ತು. ಸಭಾಪತಿ ಬಸವರಾಜ ಹೊರಟ್ಟಿ ಅವರು ಹರಿಪ್ರಸಾದ್ ಅವರಿಗೆ ಮಾತನಾಡಲು ಅವಕಾಶ ನೀಡಿದರು. ಆದರೆ, ಆಡಳಿತ ಪಕ್ಷದ ಸಾಲಿನಲ್ಲಿ ಸಚಿವರು ಮತ್ತು ಶಾಸಕರು ಗೈರಾಗಿರುವ ಬಗ್ಗೆ ವಿರೋಧ ಪಕ್ಷದ ಸದಸ್ಯರು ಆಕ್ಷೇಪ ಎತ್ತಿದರು.
'ಸಚಿವ ಆರ್. ಶಂಕರ್ ಮನೆಯಲ್ಲಿ ಭೋಜನ ಕೂಟ ಇರುವುದರಿಂದ ಸಚಿವರು, ಶಾಸಕರು ಅಲ್ಲಿಗೆ ತೆರಳಿದ್ದಾರೆ. ಶೀಘ್ರದಲ್ಲಿ ಸದನಕ್ಕೆ ಬರುತ್ತಾರೆ' ಎಂದು ಸಭಾ ನಾಯಕರು ಉತ್ತರಿಸಿದರು.
ಕೆಲಕಾಲ ವಾದ, ಪ್ರತಿವಾದ ನಡೆಯಿತು. 'ಸಚಿವರು ಸಾಮೂಹಿಕವಾಗಿ ಸದನಕ್ಕೆ ಗೈರಾಗಿರುವುದರಿಂದ ಕಲಾಪವನ್ನು ಸೋಮವಾರ ಬೆಳಿಗ್ಗೆ 10 ಗಂಟೆಗೆ ಮುಂದೂಡುತ್ತಿರುವುದಾಗಿ' ಸಭಾಪತಿ ಪ್ರಕಟಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.