ಬೆಂಗಳೂರು: ದಲಿತ ಸಚಿವರಿಂದ ಪ್ರತ್ಯೇಕ ಸಭೆ, ಮುಖ್ಯಮಂತ್ರಿ ಬದಲಾವಣೆ ಕುರಿತ ನಾನಾ ವ್ಯಾಖ್ಯಾನಗಳಿಂದ ಆಡಳಿತಾರೂಢ ಕಾಂಗ್ರೆಸ್‌ನಲ್ಲಿ ಉಂಟಾಗಿರುವ ಗೊಂದಲಗಳ ವಿಚಾರವನ್ನು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಪ್ರಸ್ತಾಪಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಲವು ಸಚಿವರ ನಡೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
‘ಚಹಾ, ಭೋಜನದ ನೆಪದಲ್ಲಿ ಸಚಿವರಾದ ಸತೀಶ ಜಾರಕಿಹೊಳಿ, ಎಚ್.ಸಿ. ಮಹದೇವಪ್ಪ, ಜಿ. ಪರಮೆಶ್ವರ ಅವರು ಗೌಪ್ಯವಾಗಿ ಸಭೆ ಸೇರಿ ಚರ್ಚಿಸಿರುವ ವಿಚಾರ ಸಭೆಯಲ್ಲಿ ಪ್ರಸ್ತಾವವಾಗಿದೆ. ಈ ವೇಳೆ ಮೂವರು ಸಚಿವರೂ, ‘ಜೊತೆಯಾಗಿ ಊಟ ಮಾಡಿರುವುದನ್ನೇ ಮಾಧ್ಯಮಗಳು ಅಪಾರ್ಥ ಕಲ್ಪಿಸಿಕೊಂಡು ಬಿಂಬಿಸಿರುವುದರಿಂದ ಮತ್ತು ತಪ್ಪಾಗಿ ಅರ್ಥೈಸಿಕೊಂಡಿದ್ದರಿಂದ ಗೊಂದಲಗಳು ಉಂಟಾಗಿವೆ. ಮಾಧ್ಯಮಗಳಲ್ಲಿ ವರದಿಯಾಗಿರುವಂತೆ ಯಾವ ಸಭೆಯೂ ನಡೆದಿಲ್ಲ. ಯಾವುದೇ ರಾಜಕೀಯ ವಿಚಾರಗಳನ್ನು ಚರ್ಚಿಸಿಲ್ಲ’ ಎಂದು ಸಮಜಾಯಿಷಿ ನೀಡಿದ್ದಾರೆ’ ಎಂದೂ ಮೂಲಗಳು ತಿಳಿಸಿವೆ.
‘ಮುಖ್ಯಮಂತ್ರಿ ಹುದ್ದೆ ಖಾಲಿ ಇಲ್ಲ. ಸಚಿವ ಸಂಪುಟವೂ ಇದೆ. ಇಂತಹ ಪರಿಸ್ಥಿತಿಯಲ್ಲಿ ಪ್ರತ್ಯೇಕ ಸಭೆ ನಡೆಸಿ ಸಾರ್ವಜನಿಕವಾಗಿ ಅಪಾರ್ಥಕ್ಕೆ ಅವಕಾಶ ಮಾಡಿಕೊಡುವುದು ಸರ್ಕಾರ ಮತ್ತು ಪಕ್ಷದ ಹಿತದೃಷ್ಟಿಯಿಂದ ಸರಿಯಲ್ಲ. ಸರ್ಕಾರ ₹50 ಸಾವಿರ ಕೋಟಿ ಮೊತ್ತದಲ್ಲಿ ಗ್ಯಾರಂಟಿ ಯೋಜನೆಗಳನ್ನು ರಾಜ್ಯದ ಜನರಿಗೆ ತಲುಪಿಸುತ್ತಿದೆ. ಆ ಬಗ್ಗೆ ಮಾತನಾಡಬೇಕಾದ ನಾಯಕರು, ಅನವಶ್ಯಕ ವಿಷಯಗಳ ಬಗ್ಗೆ ಮಾಧ್ಯಮಗಳ ಜೊತೆ ಮತ್ತು ಬಹಿರಂಗವಾಗಿ ಚರ್ಚೆ ನಡೆಸುತ್ತಿರುವುದು, ಹೇಳಿಕೆಗಳನ್ನು ನೀಡುತ್ತಿರುವುದು ಸರಿಯಲ್ಲ’ ಎಂದು ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿ ಅತೃಪ್ತಿ ವ್ಯಕ್ತಪಡಿಸಿದರು’ ಎನ್ನಲಾಗಿದೆ.
ಸಚಿವ ಸಂಪುಟ ಸಭೆ ಬಳಿಕ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವ ಎಚ್.ಕೆ. ಪಾಟೀಲ ಅವರು ‘ನಾವೆಲ್ಲರೂ ನಿಮ್ಮ ಜೊತೆ ಇದ್ದೇವೆ ಎಂದು ಎಲ್ಲ ಸಚಿವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಒಗ್ಗಟ್ಟಿನ ಬೆಂಬಲ ವ್ಯಕ್ತಪಡಿಸಿದ್ದಾರೆ’ ಎಂದಷ್ಟೇ ಹೇಳಿದರು.
ಅಶಿಸ್ತಿಗೆ ನೋಟಿಸ್: ಹೈಕಮಾಂಡ್ ಎಚ್ಚರಿಕೆ
ರಾಜ್ಯದಲ್ಲಿನ ಇತ್ತೀಚಿನ ರಾಜಕೀಯ ಬೆಳವಣಿಗೆಗಳ ಮಾಹಿತಿ ಪಡೆದಿರುವ ಕಾಂಗ್ರೆಸ್ ವರಿಷ್ಠರು, ಪದೇ ಪದೇ ಶಿಸ್ತು ಉಲ್ಲಂಘಿಸುತ್ತಿರುವ ನಾಯಕರಿಗೆ ನೋಟಿಸ್ ನೀಡಲು ಮುಂದಾಗಿದ್ದಾರೆ.
‘ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಪ್ರಧಾನ ಕಾರ್ಯದರ್ಶಿ (ಸಂಘಟನೆ)
ಕೆ.ಸಿ. ವೇಣುಗೋಪಾಲ್ ಮತ್ತು ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ರಾಜ್ಯದಲ್ಲಿ ನಡೆಯುತ್ತಿರುವ ಎಲ್ಲ ವಿದ್ಯಮಾನಗಳ ಮಾಹಿತಿ ಪಡೆದುಕೊಂಡಿದ್ದಾರೆ. ಈ ವಿಚಾರವನ್ನು
ಮೂವರು ನಾಯಕರು ಗಂಭೀರವಾಗಿ ತೆಗೆದು ಕೊಂಡಿದ್ದು, ಕ್ರಮ ತೆಗೆದುಕೊಳ್ಳುವ ನಿರ್ಧಾರಕ್ಕೆ ಬಂದಿದ್ದಾರೆ’ ಎಂದು ಮೂಲಗಳು ತಿಳಿಸಿವೆ.
ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಜೊತೆಗೂ ಚರ್ಚೆ ನಡೆಸಿರುವ ಮಲ್ಲಿಕಾರ್ಜುನ ಖರ್ಗೆ ಮತ್ತು ವೇಣುಗೋಪಾಲ್, ಎಚ್ಚರಿಕೆಯ ನಂತರವೂ ಸಚಿವರ ನಡೆಯಲ್ಲಿ ಬದಲಾವಣೆ ಆಗದಿದ್ದರೆ ಕ್ರಮ ತೆಗೆದುಕೊಳ್ಳಬೇಕಾದ ಅನಿವಾರ್ಯದ ಬಗ್ಗೆ ಸಮಾಲೋಚನೆ ನಡೆಸಿದ್ದಾರೆ. ಈ ವಿಚಾರದಲ್ಲಿ ನಿಗಾ ವಹಿಸುವಂತೆ ಸುರ್ಜೇವಾಲಾ ಅವರಿಗೆ ಖರ್ಗೆ ಮತ್ತು ವೇಣುಗೋಪಾಲ್ ಸೂಚನೆ ನೀಡಿದ್ದಾರೆ ಎಂದೂ ಗೊತ್ತಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.