ಬೆಂಗಳೂರು: ಆಸ್ಟ್ರೇಲಿಯದ ವೆಸ್ಟ್ ಸಿಡ್ನಿ ವಿಶ್ವವಿದ್ಯಾಲಯವು ರಾಜ್ಯದಲ್ಲಿ ಕೃಷಿ ವಿಶ್ವವಿದ್ಯಾಲಯ ಆರಂಭಿಸುವ ಇಂಗಿತ ವ್ಯಕ್ತಪಡಿಸಿದೆ. ಇಲ್ಲಿನ ಕೃಷಿ ವಿಶ್ವವಿದ್ಯಾಲಯಗಳ ಸಹಯೋಗದಲ್ಲಿ ಯೋಜನೆ ರೂಪಿಸಿ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಸಲಹೆ ನೀಡಿದರು.
ವೆಸ್ಟ್ ಸಿಡ್ನಿ ವಿಶ್ವವಿದ್ಯಾಲಯದ ಕುಲಪತಿ ಜಾರ್ಜ್ ವಿಲಿಯಮ್ಸ್ ಮತ್ತು ಭಾರತದಲ್ಲಿನ ಆಸ್ಟ್ರೇಲಿಯ ಕಾನ್ಸುಲೇಟ್ ಮೆಕ್‌ಗೀಚೀ ಅವರ ನಿಯೋಗವು ಶುಕ್ರವಾರ ಉನ್ನತ ಶಿಕ್ಷಣ ಸಚಿವ ಸುಧಾಕರ್ ಅವರನ್ನು ಭೇಟಿ ಮಾಡಿ, ಮಾತುಕತೆ ನಡೆಸಿತು.
‘ಸಿಡ್ನಿ ವಿಶ್ವವಿದ್ಯಾಲಯವು ಕೃಷಿ ನೀರಾವರಿಯಲ್ಲಿ ತಾಂತ್ರಿಕತೆ ಅಳವಡಿಕೆ, ಆಹಾರ ಸಂಸ್ಕರಣೆ, ಕೃಷಿ ಉತ್ಪನ್ನಗಳ ಮೌಲ್ಯವೃದ್ಧಿಯಲ್ಲಿ ಪರಿಣತಿ ಹೊಂದಿದೆ. ಬೆಂಗಳೂರಿನಲ್ಲಿ ಕೃಷಿ ವಿಶ್ವವಿದ್ಯಾಲಯ ಸ್ಥಾಪಿಸುವ ಆಸಕ್ತಿ ಹೊಂದಿದೆ. ಸ್ವತಂತ್ರವಾಗಿ ಅಥವಾ ಸ್ಥಳೀಯ ವಿಶ್ವವಿದ್ಯಾಲಯಗಳ ಸಹಯೋಗದಲ್ಲಿ ಕಾರ್ಯನಿರ್ವಹಿಸಲು ಎದುರು ನೋಡುತ್ತಿದ್ದೇವೆ’ ಎಂದು ನಿಯೋಗವು ತಿಳಿಸಿತು.
ಸಚಿವ ಸುಧಾಕರ್, ‘ನಮ್ಮ ಕೃಷಿ ವಿಶ್ವವಿದ್ಯಾಲಯಗಳ ಮೂಲಭೂತ ಸೌಕರ್ಯಗಳನ್ನು ಬಳಸಿಕೊಂಡು ಹೊಸ ಆವಿಷ್ಕಾರದ ಕೋರ್ಸ್‌ಗಳನ್ನು ಆರಂಭಿಸಿದರೆ, ನಮ್ಮ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ. ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರ ವಿನಿಮಯದ ಮೂಲಕ ಕಲಿಕೆಯನ್ನು ವಿಸ್ತರಿಸಬಹುದು’ ಎಂದು ಸಲಹೆ ನೀಡಿದರು.
ಸರ್ಕಾರದ ಮುಖ್ಯ ಕಾರ್ಯರ್ಶಿ ಶಾಲಿನಿ ರಜನೀಶ್, ‘ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಆಹಾರ ಸಂಸ್ಕರಣೆ, ಕೃಷಿ–ಉದ್ಯಮ ತಾಂತ್ರೀಕರಣಕ್ಕೆ ಪ್ರಯೋಗಾಲಯಗಳ ಸ್ಥಾಪನೆಯನ್ನು ಪರಿಶೀಲಿಸಬಹುದು. ರಾಜ್ಯದ ಇತರ ಭಾಗಗಳಲ್ಲಿ ವಿಶ್ವವಿದ್ಯಾಲಯ ಸ್ಥಾಪನೆ ಮತ್ತು ಸ್ಥಳೀಯ ವಿದ್ಯಾರ್ಥಿಗಳಿಗೆ ಶೇ 50ರಷ್ಟು ಅವಕಾಶ ನೀಡುವ ಬಗ್ಗೆ ಗಮನ ನೀಡಬೇಕು’ ಎಂದು ನಿಯೋಗಕ್ಕೆ ತಿಳಿಸಿದರು.
ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಎಂ.ಎಸ್.ಶ್ರೀಕರ್, ಇಲಾಖೆ ಅಧಿಕಾರಿಗಳು, ವೆಸ್ಟ್ ಸಿಡ್ನಿ ವಿಶ್ವವಿದ್ಯಾಲಯದ ಅಧಿಕಾರಿಗಳು ಸಭೆಯಲ್ಲಿ ಭಾಗಿಯಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.