ಬೆಂಗಳೂರು: ಕೋರ್ಟ್ ಕಲಾಪದಲ್ಲಿ ಸಂಯಮ ಮೀರಿ ವರ್ತಿಸಿ ದುರ್ನಡತೆ ತೋರಿದ ಆರೋಪಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ವಕೀಲ ಎಂ.ವೀರಭದ್ರಯ್ಯ ವಿರುದ್ಧ ದಾಖಲಿಸಿಕೊಳ್ಳಲಾಗಿದ್ದ ಸ್ವಯಂಪ್ರೇರಿತ ಕ್ರಿಮಿನಲ್ ನ್ಯಾಯಾಂಗ ನಿಂದನೆ ಪ್ರಕರಣವನ್ನು ಹೈಕೋರ್ಟ್ ಕೈಬಿಟ್ಟಿದೆ.
ಈ ಸಂಬಂಧ ವೀರಭದ್ರಯ್ಯ ಅವರು, ‘ನನ್ನ ವಿರುದ್ಧ ಸ್ವಯಂ ಪ್ರೇರಿತ ಕ್ರಿಮಿನಲ್ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಆರಂಭಿಸಲು ಹೈಕೋರ್ಟ್ ನ್ಯಾಯಾಂಗ ವಿಭಾಗದ ರಿಜಿಸ್ಟ್ರಾರ್‌ಗೆ ಸೂಚಿಸಿ ಇದೇ 5ರಂದು ಹೊರಡಿಸಿರುವ ಆದೇಶವನ್ನು ಹಿಂಪಡೆಯಬೇಕು’ ಎಂದು ಕೋರಿ ನ್ಯಾಯಮೂರ್ತಿ ಕೆ.ಎಸ್. ಹೇಮಲೇಖಾ ಅವರಿದ್ದ ನ್ಯಾಯಪೀಠಕ್ಕೆ ಮಧ್ಯಂತರ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ನ್ಯಾಯಪೀಠ ಪುರಸ್ಕರಿಸಿದ್ದು, ವಿಚಾರಣೆಗೆ ನೀಡಿದ್ದ ತನ್ನ ಆದೇಶವನ್ನು ಹಿಂಪಡೆದಿದೆ.
ಪ್ರಮಾಣ ಪತ್ರ: ‘ನಾನು 38 ವರ್ಷಗಳ ಕಾಲ ಕಳಂಕರಹಿತವಾಗಿ ವಕೀಲಿ ವೃತ್ತಿ ಪೂರೈಸಿದ್ದೇನೆ. ನ್ಯಾಯಾಲಯದ ಬಗ್ಗೆ ನನಗೆ ಅಪಾರ ಗೌರವ ಇದೆ. ನ್ಯಾಯಾಲಯಕ್ಕೆ ಧಕ್ಕೆ ತರುವಂತೆ ನಡೆದುಕೊಳ್ಳುವ ಯಾವುದೇ ಉದ್ದೇಶ ಅಂದು ನನಗೆ ಇರಲಿಲ್ಲ. ನಡೆದುದೆಲ್ಲವೂ ಆಕಸ್ಮಿಕ. ಇದಕ್ಕಾಗಿ ವಿಷಾದ ವ್ಯಕ್ತಪಡಿಸುತ್ತಿದ್ದೇನೆ. ಘಟನೆಯ ಬಗ್ಗೆ ನ್ಯಾಯಾಲಯಕ್ಕೆ ಬೇಷರತ್ ಕ್ಷಮೆ ಯಾಚಿಸುತ್ತಿದ್ದೇನೆ. ಭವಿಷ್ಯದಲ್ಲಿ ಇದು ಪುನರಾವರ್ತನೆ ಆಗದಂತೆ ಎಚ್ಚರಿಕೆ ವಹಿಸುತ್ತೇನೆ’ ಎಂದು ವೀರಭದ್ರಯ್ಯ ಅವರು ನ್ಯಾಯಪೀಠಕ್ಕೆ ಪ್ರಮಾಣ ಪತ್ರ ಸಲ್ಲಿಸಿದ್ದಾರೆ.
ಪ್ರಕರಣವೇನು?: ‘ಭಾರತ್ ಎಲೆಕ್ಟ್ರಾನಿಕ್ಸ್ ನೌಕರರ ಏಕತಾ ವೇದಿಕೆ‘ಯ ಮಾಜಿ ಪ್ರಧಾನ ಕಾರ್ಯದರ್ಶಿ ಮತ್ತು ‘ಬಿಇಎಲ್ ನೌಕರರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕಲ್ಯಾಣ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ’ಯೂ ಆದ ಬಿಇಎಲ್ ಕಾರ್ಖಾನೆ ನೌಕರ, ಕೆ.ಅಣ್ಣಾದೊರೆ ಸಲ್ಲಿಸಿದ್ದ ರಿಟ್ ಅರ್ಜಿಯೊಂದು ನ್ಯಾಯಮೂರ್ತಿ ಕೆ.ಎಸ್. ಹೇಮಲೇಖಾ ಅವರಿದ್ದ ಏಕಸದಸ್ಯ ನ್ಯಾಯಪೀಠದ ಮುಂದೆ ಇದೇ 5ರಂದು ವಿಚಾರಣೆಗೆ ನಿಗದಿಯಾಗಿತ್ತು. ಅಂದು ನ್ಯಾಯಪೀಠವು ಅರ್ಜಿಯನ್ನು ತಿರಸ್ಕರಿಸಿತ್ತು.
ಈ ವೇಳೆ ಅರ್ಜಿದಾರರ ಪರ ವಕೀಲರಾಗಿದ್ದ ಎಂ.ವೀರಭದ್ರಯ್ಯ, ‘ಫೈಲುಗಳನ್ನು ನನ್ನತ್ತ ಎಸೆದು, ಏರು ದನಿಯಲ್ಲಿ ತಿರುಗುತ್ತರ ನೀಡಿದ್ದಾರೆ. ನ್ಯಾಯಪೀಠದ ವಿರುದ್ಧ ಆಕ್ಷೇಪಾರ್ಹ ಮಾತುಗಳನ್ನು ಆಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನ್ಯಾಯಾಲಯದ ಸಾಮಾನ್ಯ ಪ್ರಕ್ರಿಯೆ ಮತ್ತು ಕಾರ್ಯ ವಿಧಾನದಲ್ಲಿ ಹಸ್ತಕ್ಷೇಪ ಮಾಡುವ ಮೂಲಕ ನ್ಯಾಯಾಲಯದ ಘನತೆಗೆ ಧಕ್ಕೆ ಉಂಟು ಮಾಡಿದ್ದಾರೆ’ ಎಂಬ ಆರೋಪದಡಿ ಕ್ರಿಮಿನಲ್ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲು ನ್ಯಾಯಮೂರ್ತಿಗಳು ಹೈಕೋರ್ಟ್ ನ್ಯಾಯಾಂಗ ರಿಜಿಸ್ಟ್ರಾರ್ ಅವರಿಗೆ ಆದೇಶಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.