ADVERTISEMENT

ಆರ್‌ಟಿಸಿಗಳಲ್ಲಿ ತಪ್ಪು, ವಾರದಲ್ಲಿ ಪರಿಹಾರ: ಕಂದಾಯ ಸಚಿವ ಆರ್. ಅಶೋಕ

ವಿಧಾನಸಭೆ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2020, 19:31 IST
Last Updated 7 ಡಿಸೆಂಬರ್ 2020, 19:31 IST
ಕಂದಾಯ ಸಚಿವ ಆರ್. ಅಶೋಕ
ಕಂದಾಯ ಸಚಿವ ಆರ್. ಅಶೋಕ   

ಬೆಂಗಳೂರು: ಪಹಣಿ ಪತ್ರಗಳಲ್ಲಿ (ಆರ್‌ಟಿಸಿ) ಬೆಳೆಗಳ ಬಗ್ಗೆ ತಪ್ಪು ಉಲ್ಲೇಖ ಮಾಡುತ್ತಿರುವುದರಿಂದ ಸಾಲ ಪಡೆಯಲು ರೈತರಿಗೆ ಸಮಸ್ಯೆ ಆಗುತ್ತಿದೆ ಎಂದು ಶಾಸಕರ ಅಹವಾಲಿಗೆ ಪ್ರತಿಕ್ರಿಯಿಸಿದ, ಕಂದಾಯ ಸಚಿವ ಆರ್. ಅಶೋಕ, ವಾರದಲ್ಲಿ ಸಭೆ ಕರೆದು ಈ ಸಮಸ್ಯೆ ಬಗೆಹರಿಸುವುದಾಗಿ ವಾಗ್ದಾನ ನೀಡಿದರು.

ವಿಧಾನಸಭೆಯಲ್ಲಿ ಸೋಮವಾರ ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್‌ನ ಟಿ.ಡಿ.ರಾಜೇಗೌಡ, ‘ಅಧಿಕಾರಿಗಳು ಮಾಡುತ್ತಿರುವ ಎಡವಟ್ಟಿನಿಂದಾಗಿ ರೈತರಿಗೆ ಸಮಸ್ಯೆ ಆಗುತ್ತಿದೆ’ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಆರ್‌.ಅಶೋಕ, ‘ಎಲ್ಲ ಸಮಸ್ಯೆಗಳನ್ನು ಇತ್ಯರ್ಥಪಡಿಸಲಾಗಿದೆ’ ಎಂದರು.

ADVERTISEMENT

ಬಿಜೆಪಿಯ ಆರಗ ಜ್ಞಾನೇಂದ್ರ, ‘ರೈತರು ಸರತಿ ಸಾಲಿನಲ್ಲಿ ಗಂಟೆಗಟ್ಟಲೆ ನಿಂತು ಪಹಣಿ ಪಡೆಯುತ್ತಾರೆ. ಬಳಿಕ ಅದರಲ್ಲಿ ಬೆಳೆಗಳ ತಪ್ಪು ಮಾಹಿತಿ ಇರುತ್ತದೆ’ ಎಂದರು.

ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ‘ಸಚಿವರೇ, ನೀವು ಅಧಿಕಾರಿಗಳ ಮಾತು ಕೇಳಬೇಡಿ. ಅಧಿಕಾರಿಗಳ ತಪ್ಪಿನಿಂದ ಅನೇಕ ರೈತರಿಗೆ ಸಮಸ್ಯೆ ಆಗಿದೆ. ರೈತರಿಗೆ ಬ್ಯಾಂಕ್‌ಗಳಲ್ಲಿ ಸಾಲ ಸಿಗುತ್ತಿಲ್ಲ’ ಎಂದರು.

ಜೆಡಿಎಸ್‌ನ ಎಚ್‌.ಕೆ.ಕುಮಾರಸ್ವಾಮಿ, ‘ಕಾಫಿ ತೋಟ, ಅಡಿಕೆ ತೋಟ ಇದ್ದವರ ಪಹಣಿಗಳಲ್ಲಿ ಖುಷ್ಕಿ ಬೆಳೆ ಎಂದು ಉಲ್ಲೇಖಿಸಲಾಗುತ್ತಿದೆ’ ಎಂದರೆ, ಜೆಡಿಎಸ್‌ನ ಕೆ.ಎಂ. ಶಿವಲಿಂಗೇಗೌಡ, ‘ಗ್ರಾಮ ಲೆಕ್ಕಿಗರು ಬೆಳೆಗಳ ಖುದ್ದು ಪರಿಶೀಲನೆ ಮಾಡಬೇಕು’ ಎಂದರು.

ಜೆಡಿಎಸ್‌ನ ಜಿ.ಟಿ.ದೇವೇಗೌಡ, ‘ಗ್ರಾಮ ಲೆಕ್ಕಿಗರು ಪಹಣಿ ಬರೆಯುವುದನ್ನು ಬಿಟ್ಟು ಹಲವು ವರ್ಷಗಳೇ ಕಳೆದಿವೆ’ ಎಂದು ಟೀಕಿಸಿದರು.

ಸದಸ್ಯರ ವರ್ತನೆ: ಕಾಗೇರಿ ಅಸಮಾಧಾನ

ವಿಧಾನಸಭಾ ಕಲಾಪದ ವೇಳೆ ಸದಸ್ಯರು ಗುಂಪು ಗುಂಪಾಗಿ ಸೇರಿ ಹರಟೆ ನಡೆಸಿದ್ದಕ್ಕೆ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಸೋಮವಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಅಗಲಿದ ಗಣ್ಯರಿಗೆ ಸಂತಾಪ ಸೂಚಿಸುವ ವೇಳೆಯಲ್ಲಿ ಬಿಜೆಪಿ ಸದಸ್ಯರು ಜೋರಾಗಿ ಹರಟೆ ಹೊಡೆಯುತ್ತಿದ್ದರು. ‘ಸದನದಲ್ಲಿ ಶಿಸ್ತು ಕಾಪಾಡುವುದು ಎಲ್ಲರ ಜವಾಬ್ದಾರಿ. ಸಚಿವರ ಜತೆಗೆ ಸದಸ್ಯರು ಮಾತನಾಡುವುದು ಇದ್ದರೆ ಅವರ ಕಚೇರಿಗೆ ಹೋಗಿ ಸಮಾಲೋಚಿಸಿ. ಅದನ್ನು ಬಿಟ್ಟು ಇಲ್ಲಿ ಮಾತನಾಡುವುದು ಸರಿಯಲ್ಲ’ ಎಂದು ಕಾಗೇರಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.