ಮಡಿಕೇರಿ: ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಅವರು ಜಿಲ್ಲೆಯಲ್ಲೇ ಇದ್ದರೂ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಸಚಿವ ಕೋಟ ಶ್ರೀನಿವಾಸ ಪೂಜಾರಿ ನೇತೃತ್ವದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಗೆ ಬಂದಿರಲಿಲ್ಲ.
ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಅವರು ಸಭೆಗೆ ಗೈರಾಗಿದ್ದರು ಎಂಬ ಮಾತುಗಳು ಕೇಳಿಬರುತ್ತಿವೆ. ಅವರು ನೆಲ್ಯಹುದಿಕೇರಿಯ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದರು.
ಸುದ್ದಿಗಾರರೊಂದಿಗೆ ಮಾತನಾಡಿದ ರಂಜನ್, ‘ಜಿಲ್ಲಾವಾರು ಹಾಗೂ ಸಾಮಾಜಿಕ ನ್ಯಾಯದ ಪ್ರಕಾರ ಸಚಿವ ಸ್ಥಾನ ಸಿಗುವ ನಿರೀಕ್ಷೆಯಿತ್ತು. ಆದರೆ, ಹಿರಿಯರನ್ನು ವರಿಷ್ಠರು ಕಡೆಗಣಿಸಿದ್ದಾರೆ’ ಎಂದು ಅಸಮಾಧಾನ ಹೊರಹಾಕಿದರು.
‘ಕೆಲವು ಜಿಲ್ಲೆಗೆ ಮೂರು ಸಚಿವ ಸ್ಥಾನ ನೀಡಲಾಗಿದೆ. ಇದು ಸರಿಯಾದ ಕ್ರಮವೇ’ ಎಂದು ಪ್ರಶ್ನಿಸಿದರು.
‘ಕೊಡಗಿಗೆ ಅನ್ಯಾಯವಾಗಿದ್ದರೂ ಸಂಸದ ಪ್ರತಾಪ ಸಿಂಹ ಮೌನವಾಗಿದ್ದಾರೆ. ಅವರದ್ದು ಜಾಣ ಮೌನ. ಅವರು ಒತ್ತಡ ಹಾಕಬೇಕಿತ್ತು. ಲೋಕಸಭೆ ಚುನಾವಣೆ ವೇಳೆ ಎರಡು ವಿಧಾನಸಭಾ ಕ್ಷೇತ್ರದಿಂದ 80 ಸಾವಿರ ಮತ ಲೀಡ್ ಕೊಡಿಸಿದ್ದೆವು. ಅವರ ಮೌನ ಬೇಸರ ತರಿಸಿದೆ’ ಎಂದು ವಾಗ್ದಾಳಿ ನಡೆಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.