ADVERTISEMENT

ಸಚಿವ ನಾರಾಯಣಗೌಡ ರಾಜೀನಾಮೆಗೆ ಗೂಳಿಹಟ್ಟಿ ಪಟ್ಟು

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2020, 19:30 IST
Last Updated 10 ಅಕ್ಟೋಬರ್ 2020, 19:30 IST
ಗೂಳಿಹಟ್ಟಿ ಡಿ.ಶೇಖರ್‌
ಗೂಳಿಹಟ್ಟಿ ಡಿ.ಶೇಖರ್‌   

ಚಿತ್ರದುರ್ಗ: ‘ಪುರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನದ ಮೀಸಲಾತಿಗೆ ನೀಡಿದ ಸಲಹೆ ಪರಿಗಣಿಸದ ಪೌರಾಡಳಿತ ಸಚಿವ ನಾರಾಯಣಗೌಡ ಅವರ ರಾಜೀನಾಮೆಯನ್ನು ಮುಖ್ಯಮಂತ್ರಿ ಪಡೆಯಬೇಕು. ಇಲ್ಲವೇ ನನ್ನ ರಾಜೀನಾಮೆ ಸ್ವೀಕರಿಸಲಿ’ ಎಂದು ಹೊಸದುರ್ಗ ಕ್ಷೇತ್ರದ ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್‌ ಆಗ್ರಹಿಸಿದರು.

‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಅವರು, ‘ಶಾಸಕರೇ ನೇರವಾಗಿ ಮುಖ್ಯಮಂತ್ರಿ, ಸಚಿವರನ್ನು ಭೇಟಿಯಾದರೆ ಕೆಲಸ ಆಗುವುದಿಲ್ಲ. ಶಾಸಕರ ಲೆಟರ್‌ಹೆಡ್‌ ಹಿಡಿದು ಹೋಗುವ ವ್ಯಕ್ತಿಯ ಕೆಲಸ ಸುಲಭವಾಗಿ ಆಗುತ್ತಿದೆ. ಶಾಸಕಾಂಗ ಪಕ್ಷದಲ್ಲಿ ಮಾತನಾಡಲು ಬಿಡುತ್ತಿಲ್ಲ. ಕೈಕಟ್ಟಿ, ಬಾಯಿ ಮುಚ್ಚಿಕೊಳ್ಳಲು ಜನರು ನಮ್ಮನ್ನು ಆಯ್ಕೆ ಮಾಡಿಲ್ಲ. ನಾನು ಹೆಬ್ಬೆಟ್ಟು ಎಂಎಲ್‌ಎ ಅಲ್ಲ’ ಎಂದು ತಮ್ಮದೇ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದರು.

‘ಪುರಸಭೆಗೆ ಚುನಾವಣೆ ನಡೆದ ಬಳಿಕ ನಿರೀಕ್ಷೆಯಂತೆ ಮೀಸಲಾತಿ ನಿಗದಿಯಾಗಿತ್ತು. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮೀಸಲಾತಿ ನಿಗದಿ ಮಾಡಲು ಶಾಸಕರ ಅಭಿಪ್ರಾಯ ಪಡೆಯಿತು. ಆದರೆ, ಪ್ರಕಟವಾದ ಅಧಿಸೂಚನೆಯಲ್ಲಿ ಸಲಹೆ ಕೈಬಿಟ್ಟಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಕಾಣದ ಕೈಗಳು ಹಸ್ತಕ್ಷೇಪ ಮಾಡುತ್ತಿವೆ. ಅವಮಾನ ಮಾಡುವ ಉದ್ದೇಶದಿಂದ ಹೀಗೆ ಮಾಡಲಾಗಿದೆ’ ಎಂದು ಕಿಡಿಕಾರಿದರು.

ADVERTISEMENT

‘ಬದಲಾದ ಮೀಸಲಾತಿಗೆ ಸಂಬಂಧಿಸಿದಂತೆ ಪ್ರಶ್ನಿಸಲು ಪೌರಾಡಳಿತ ಸಚಿವರನ್ನು ಸಂಪರ್ಕಿಸಲು ಪ್ರಯತ್ನಿಸಿದ್ದೇನೆ. ಸಚಿವರು ನನ್ನ ಫೋನ್‌ಗೆ ಸ್ಪಂದಿಸುತ್ತಿಲ್ಲ. ಇಲಾಖೆಯನ್ನು ಸಮರ್ಥವಾಗಿ ನಿರ್ವಹಿಸಲು ಸಾಧ್ಯವಿಲ್ಲದ ನಾರಾಯಣಗೌಡ ಅವರು ಸಚಿವರಾಗಿ ಏಕೆ ಇರಬೇಕು’ ಎಂದು ಪ್ರಶ್ನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.