ADVERTISEMENT

ಶಾಸಕ ಮುನಿರತ್ನ ಅತ್ಯಾಚಾರ ಪ್ರಕರಣ: ವಿಕಾಸಸೌಧದ 334ರ ಕೊಠಡಿಯಲ್ಲಿ ಮಹಜರು

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2024, 16:32 IST
Last Updated 7 ನವೆಂಬರ್ 2024, 16:32 IST
ಮುನಿರತ್ನ 
ಮುನಿರತ್ನ    

ಬೆಂಗಳೂರು: ರಾಜರಾಜೇಶ್ವರಿನಗರ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ವಿರುದ್ಧದ ಅತ್ಯಾಚಾರ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ವಿಶೇಷ ತನಿಖಾ ದಳದ (ಎಸ್ಐಟಿ) ಅಧಿಕಾರಿಗಳು, ಸಂತ್ರಸ್ತೆಯನ್ನು ವಿಕಾಸಸೌಧಕ್ಕೆ ಕರೆತಂದು ಗುರುವಾರ ಸ್ಥಳ ಮಹಜರು ನಡೆಸಿದರು.

ರಾಮನಗರ ಜಿಲ್ಲೆಯ ಕಗ್ಗಲೀಪುರ ಪೊಲೀಸ್‌ ಠಾಣೆಯಲ್ಲಿ ಮುನಿರತ್ನ ವಿರುದ್ಧ ದಾಖಲಾಗಿದ್ದ ಪ್ರಕರಣದ ತನಿಖೆಯನ್ನು ಎಸ್‌ಐಟಿ ಚುರುಕುಗೊಳಿಸಿದೆ. ಪ್ರಕರಣದ ಸಂಬಂಧ ಎಸ್‌ಐಟಿ ಮತ್ತಷ್ಟು ಮಾಹಿತಿ ಕಲೆ ಹಾಕುತ್ತಿದೆ.

ಗುರುವಾರ ಬೆಳಿಗ್ಗೆ 11ರ ಸುಮಾರಿಗೆ ವಿಕಾಸಸೌಧಕ್ಕೆ ಸಂತ್ರಸ್ತೆಯನ್ನು ಎಸ್‌ಐಟಿ ಅಧಿಕಾರಿಗಳು ಕರೆತಂದು ಮಹಜರು ನಡೆಸಿದರು.

ADVERTISEMENT

ಮುನಿರತ್ನ ಅವರು ಹಿಂದಿನ ಸರ್ಕಾರದಲ್ಲಿ ತೋಟಗಾರಿಕೆ ಸಚಿವರಾಗಿದ್ದರು. ಆಗ ಅವರಿಗೆ ವಿಕಾಸಸೌಧದ 3ನೇ ಮಹಡಿಯ 334ನೇ ಸಂಖ್ಯೆಯ ಕೊಠಡಿ ನೀಡಲಾಗಿತ್ತು. ಅಲ್ಲಿ ಮಹಜರು ನಡೆಸಿದರು ಎಂದು ಗೊತ್ತಾಗಿದೆ.

‘ಕೊಠಡಿಯ ಯಾವ ಸ್ಥಳದಲ್ಲಿ ನಿಮ್ಮ ಮೇಲೆ ಮುನಿರತ್ನ ಲೈಂಗಿಕ ದೌರ್ಜನ್ಯ ಎಸಗಿದ್ದರು’ ಎಂಬುದಾಗಿ ಸಂತ್ರಸ್ತೆಯನ್ನು ಕೇಳಿ ಮಾಹಿತಿ ಪಡೆದುಕೊಳ್ಳಲಾಯಿತು ಎಂದು ಮೂಲಗಳು ಹೇಳಿವೆ.

ಲಿಖಿತ ಹೇಳಿಕೆ ದಾಖಲು: ಮಹಜರು ನಡೆಸಿದ ಬಳಿಕ ಸಿಐಡಿ ಕಚೇರಿಗೆ ಸಂತ್ರಸ್ತೆಯನ್ನು ಕರೆದೊಯ್ದ ತನಿಖಾಧಿಕಾರಿಗಳು, ಲಿಖಿತ ಹೇಳಿಕೆ ದಾಖಲಿಸಿಕೊಂಡರು. ಕೆಲವು ಪ್ರಶ್ನೆಗಳು ಕೇಳಿ ಆ ಹೇಳಿಕೆಯನ್ನು ವಿಡಿಯೊ ರೆಕಾರ್ಡ್‌ ಮಾಡಿಕೊಂಡರು.

ಈ ಹಿಂದೆ ಸಂತ್ರಸ್ತೆ ಕಗ್ಗಲೀಪುರ ಠಾಣೆಯಲ್ಲಿ ದೂರು ನೀಡುವಾಗ, ‘ಶಾಸಕ ಮುನಿರತ್ನ ಸಚಿವರಾಗಿದ್ದಾಗ ವಿಕಾಸಸೌಧದಲ್ಲಿ ನೀಡಲಾಗಿದ್ದ ಅವರ ಕೊಠಡಿಯಲ್ಲೂ ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದರು. ಅಲ್ಲಿಂದಲೇ ವಿಡಿಯೊ ಕರೆ ಮಾಡಿ ನಗ್ನ ಆಗುವಂತೆ ಪೀಡಿಸುತ್ತಿದ್ದರು’ ಎಂದು ಆರೋಪಿಸಿದ್ದರು. ಈ ಸಂಬಂಧ ದಾಖಲಾದ ಪ್ರಕರಣದಲ್ಲಿ ಮುನಿರತ್ನ ಅವರನ್ನು ಬಂಧಿಸಲಾಗಿತ್ತು. ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಮುನಿರತ್ನ ಅವರು ಇತ್ತೀಚೆಗೆ ಜಾಮೀನಿನ ಮೇಲೆ ಬಿಡುಗಡೆ ಆಗಿದ್ದಾರೆ.

‘ಪ್ರಕರಣದ ಸಂಬಂಧ ಸಂತ್ರಸ್ತೆ, ಆರೋಪಿಯ ಮೊಬೈಲ್‌ ಜಪ್ತಿ ಮಾಡಿಕೊಂಡು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ (ಎಫ್‌ಎಸ್‌ಎಲ್‌) ರವಾನೆ ಮಾಡಲಾಗಿತ್ತು. ಎಫ್‌ಎಸ್‌ಎಲ್‌ ಹಾಗೂ ವೈದ್ಯಕೀಯ ವರದಿಗಳು ಬಂದಿವೆ. ಮುನಿರತ್ನ ಹಾಗೂ ಸಹಚರರು ಹನಿಟ್ರ್ಯಾಪ್‌ ಮಾಡುತ್ತಿದ್ದರು ಎಂಬುದಾಗಿ ಆರೋಪಿಸಿ ಮಹಿಳೆ ದೂರು ನೀಡಿದ್ದರು. ಹನಿಟ್ರ್ಯಾಪ್‌ ಆರೋಪದ ಸಂಬಂಧವೂ ತನಿಖೆ ನಡೆಸಲಾಗಿದೆ. ರಹಸ್ಯ ಕ್ಯಾಮೆರಾ ಇಡು‌ತ್ತಿದ್ದ ಸ್ಥಳದ ಮಾಹಿತಿ ಪಡೆಯಲಾಗಿದೆ. ತನಿಖೆ ಭಾಗಶಃ ಪೂರ್ಣಗೊಂಡಿದ್ದು, 60ಕ್ಕೂ ಹೆಚ್ಚು ಸಾಕ್ಷಿಗಳ ಹೇಳಿಕೆ, 40ಕ್ಕೂ ಹೆಚ್ಚು ಸಾಕ್ಷ್ಯಾಧಾರ ಸಹಿತ 900ಕ್ಕೂ ಹೆಚ್ಚು ಪುಟಗಳ ದೋಷಾರೋಪಪಟ್ಟಿಯನ್ನು ಶೀಘ್ರವೇ ನ್ಯಾಯಾಲಯಕ್ಕೆ ಸಲ್ಲಿಸಲು ಸಿದ್ಧತೆ ನಡೆದಿದೆ’ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.