ಬೆಂಗಳೂರು: ಫುಡ್ ಪಾಯಸನ್ ಆಗಿ ಮುಂಬೈನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇನೆ ಎಂದು ವಿಡಿಯೊ ಬಿಡುಗಡೆ ಮಾಡಿರುವ ಕೆ.ಆರ್. ಪೇಟೆ ಕ್ಷೇತ್ರದ ಶಾಸಕ ನಾರಾಯಣಗೌಡ ಬಿಜೆಪಿ ನಾಯಕರ ಬಂಧನದಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ.
ರಮೇಶ ಜಾರಕಿಹೊಳಿ ನೇತೃತ್ವದ ಅತೃಪ್ತ ಕಾಂಗ್ರೆಸ್ ಶಾಸಕರ ಗುಂಪು ಸೇರಿಕೊಂಡಿದ್ದ ನಾರಾಯಣಗೌಡ, ಬದಲಾದ ರಾಜಕೀಯ ಬೆಳವಣಿಗೆಯಿಂದಾಗಿ ಆ ಗುಂಪು ತೊರೆದು ವಾಪಾಸು ಬರಲು ಮುಂದಾಗಿದ್ದರು. ಆದರೆ, ಅವರನ್ನು ಅಲ್ಲಿಯೇ ಹಿಡಿದಿಟ್ಟುಕೊಳ್ಳಲು ಬಿಜೆಪಿ ನಾಯಕರು ತಂತ್ರ ರೂಪಿಸಿದರು ಎಂದು ಹೇಳಲಾಗಿದೆ.
ಮುಂಬೈನಲ್ಲಿ ಹೋಟೆಲ್ ಉದ್ಯಮ ನಡೆಸುತ್ತಿರುವ ಗೌಡರು, ಅಲ್ಲಿ ದೊಡ್ಡಮಟ್ಟದ ವ್ಯವಹಾರವನ್ನೂ ಇಟ್ಟುಕೊಂಡಿದ್ದಾರೆ. ಈ ವ್ಯವಹಾರಿಕ ನಂಟು ಹಾಗೂ ಅದರಲ್ಲಿರುವ ಲೋಪಗಳ ಎಳೆ ಹಿಡಿದ ಬಿಜೆಪಿ ನಾಯಕರು ಮಹಾರಾಷ್ಟ್ರ ಸರ್ಕಾರದ ನೆರವು ಪಡೆದಿದ್ದಾರೆ. ಗೌಡರ ಸುತ್ತ ಮಹಾರಾಷ್ಟ್ರ ಪೊಲೀಸರ ಸರ್ಪಗಾವಲು ಹಾಕಲಾಗಿದೆ ಎನ್ನಲಾಗಿದೆ.
ನಾರಾಯಣಗೌಡರಿಗೆ ನಿಜಕ್ಕೂ ಆರೋಗ್ಯ ಹದ ತಪ್ಪಿದೆಯೆ ಅಥವಾ ಬಿಜೆಪಿ ಪಾಳಯದಲ್ಲಿದ್ದಾರೆಯೇ ಎಂಬುದನ್ನು ಪತ್ತೆ ಹಚ್ಚಲು ಕೆ.ಆರ್. ಕ್ಷೇತ್ರದ ಜೆಡಿಎಸ್ ಪ್ರಮುಖರ ಗುಂಪು ಮುಂಬೈಗೆ ತೆರಳಿತ್ತು. ಆ ಹೊತ್ತಿನಲ್ಲಿ ಗೌಡರು ಪೊಲೀಸ್ ಕಾವಲಿನಲ್ಲಿ ಬಿಜೆಪಿ ಬಂಧನದಲ್ಲಿ ಇರುವುದು ಗೊತ್ತಾಗಿದೆ.ಯಾರನ್ನೂ ಸಂಪರ್ಕಿಸಲು ಅವಕಾಶವನ್ನು ಅಲ್ಲಿನ ಪೊಲೀಸರು ನೀಡುತ್ತಿಲ್ಲ ಎಂದು ಮುಂಬೈಗೆ ತೆರಳಿದ್ದ ಗುಂಪಿನ ನೇತೃತ್ವ ವಹಿಸಿದವರೊಬ್ಬರು ತಿಳಿಸಿದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.