ಬೆಂಗಳೂರು: ನಗರಸಭೆಗೆ ಮಂಜೂರಾದ ಒಂದು ಕೋಟಿ ರೂಪಾಯಿ ಅನುದಾನದ ಹಂಚಿಕೆಯಲ್ಲಿ ಸ್ವಜನ ಪಕ್ಷಪಾತ ಹಾಗೂ ಭ್ರಷ್ಟಾಚಾರ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಹಾವೇರಿ ವಿಧಾನಸಭೆ ಕ್ಷೇತ್ರದ ಬಿಜೆಪಿ ಶಾಸಕ ನೆಹರೂ ಓಲೇಕಾರ್ ಮತ್ತು ಅವರ ಇಬ್ಬರು ಪುತ್ರರನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ದೋಷಿ ಎಂದು ತೀರ್ಮಾನಿಸಿ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
ಈ ಸಂಬಂಧ ಹಾವೇರಿಯ ಶಶಿಧರ ಮಹಾದೇವಪ್ಪ ಹಳ್ಳಿಕೇರಿ ಎಂಬುವರು ಸಲ್ಲಿಸಿದ್ದ ಖಾಸಗಿ ದೂರಿನ ವಿಚಾರಣೆ ನಡೆಸಿದ, ‘ಶಾಸಕರು–ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆಯ ವಿಶೇಷ ನ್ಯಾಯಾಲಯ‘ದ ನ್ಯಾಯಾಧೀಶ ಬಿ.ಜಯಂತ್ ಕುಮಾರ್ ಶಿಕ್ಷೆ ವಿಧಿಸಿ ಸೋಮವಾರ ಆದೇಶಿಸಿದ್ದಾರೆ.
ಪ್ರಕರಣದ ಆರೋಪಿಗಳಾದ ನೆಹರೂ ಓಲೇಕಾರ್, ಅವರ ಪುತ್ರರಾದ ಮಂಜುನಾಥ ಸಿ. ಓಲೇಕಾರ್ ಮತ್ತು ದೇವರಾಜ ಎನ್. ಓಲೇಕಾರ್ ಸೇರಿದಂತೆ ಒಟ್ಟು ಒಂಬತ್ತು
ಜನ ಆರೋಪಿಗಳಿಗೆ ಶಿಕ್ಷೆ ವಿಧಿಸಲಾಗಿದೆ. ಶಿಕ್ಷೆ ಮೂರು ವರ್ಷಗಳಿಗಿಂತ ಕಡಿಮೆ ಇದ್ದು ಎರಡು ವರ್ಷಗಳಿರುವ ಕಾರಣ ಇದೇ ನ್ಯಾಯಾಲಯ ನೆಹರೂ ಓಲೇಕಾರ್ ಅವರಿಗೆ ಜಾಮೀನು ಮಂಜೂರು ಮಾಡಿ ಆದೇಶಿಸಿದೆ.
ಭ್ರಷ್ಟಾಚಾರ ನಿಗ್ರಹ ಕಾಯ್ದೆ–1988ರ ಕಲಂ 13 (2) ಮತ್ತು ಭಾರತೀಯ ದಂಡ ಸಂಹಿತೆಯ ಕಲಂ 420, 197,198 ಮತ್ತು 409ರ ಅನ್ವಯ ಶಿಕ್ಷೆ ಘೋಷಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.