ADVERTISEMENT

ಹಲ್ಲುನೋವಿನ ಚಿಕಿತ್ಸೆಗಾಗಿ ಶಾಸಕ ಪುಟ್ಟರಾಜು ಇಂಗ್ಲೆಂಡ್‌ಗೆ

ಅನುಮತಿ ನೀಡಿದ ಜನಪ್ರತಿನಿಧಿಗಳ ನ್ಯಾಯಾಲಯ

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2022, 21:46 IST
Last Updated 25 ಆಗಸ್ಟ್ 2022, 21:46 IST
ಪುಟ್ಟರಾಜು
ಪುಟ್ಟರಾಜು   

ಬೆಂಗಳೂರು:ಭ್ರಷ್ಟಾಚಾರ ನಿಗ್ರಹ ಕಾಯ್ದೆ ಅಡಿಯಲ್ಲಿನ ಪ್ರಕರಣದ ಆರೋಪ ಎದುರಿಸುತ್ತಿರುವ ಮೇಲುಕೋಟೆ ಶಾಸಕ ಸಿ.ಎಸ್.ಪುಟ್ಟರಾಜು ಹಲ್ಲು ನೋವಿಗೆ ಚಿಕಿತ್ಸೆ ಪಡೆಯಲು ವಿದೇಶ ಪ್ರವಾಸಕ್ಕೆ ತೆರಳಲು ಅನುಮತಿ ನೀಡುವಂತೆ ಕೋರಿ ಸಲ್ಲಿಸಿದ್ದ ಮನವಿಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಮಾನ್ಯ ಮಾಡಿದೆ.

ಶಾಸಕರು- ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶ
ಬಿ. ಜಯಂತ್ ಕುಮಾರ್ ಅವರು ಈ ಮನವಿ ಪುರಸ್ಕರಿಸಿದ್ದಾರೆ.

‘ಅರ್ಜಿದಾರರು ಕೋರ್ಟ್ ವಿಧಿಸುವ ಷರತ್ತುಗಳಿಗೆ ಅನ್ವಯವಾಗಿ ಇದೇ 20ರಿಂದ ಸೆಪ್ಟೆಂಬರ್‌ 20ರವರೆಗಿನ ನಿಗದಿತ ಅವಧಿಗೆ ವಿದೇಶ ಪ್ರವಾಸಕ್ಕೆ ತೆರಳಬಹುದು’ ಎಂದು ನ್ಯಾಯಾಧೀಶರು ಆದೇಶಿಸಿದ್ದಾರೆ.

ADVERTISEMENT

‘ನಾನು ಗಂಭೀರವಾದ ಹಲ್ಲು ನೋವಿನಿಂದ ನರಳುತ್ತಿದ್ದು, ಅದಕ್ಕಾಗಿ ಇಂಗ್ಲೆಂಡಿನ ಹ್ಯಾಮ್ ಸ್ಟ್ರೀಟ್ ಡೆಂಟಲ್ ಕ್ಲಿನಿಕ್‌ನಲ್ಲಿ ಚಿಕಿತ್ಸೆ ಪಡೆಯಬೇಕಿದೆ. ಅಂತೆಯೇ, ಅಮೆರಿಕದ ವಾಷಿಂಗ್ಟನ್ ಡಿ.ಸಿಯಲ್ಲಿ ಕಾವೇರಿ ಕನ್ನಡ ಸಂಘದ ಕಾರ್ಯಕ್ರಮದಲ್ಲಿ ಸರ್ಕಾರದ ಪ್ರತಿನಿಧಿಯಾಗಿ ಭಾಗವಹಿಸಬೇಕಿದೆ. ಕೋವಿಡ್ ಕಾರಣದಿಂದ ನಿಗದಿತ ಚಿಕಿತ್ಸೆ ಪಡೆಯಲು ಸಾಧ್ಯವಾಗಿಲ್ಲ. ಆದ್ದರಿಂದ, ಅನುಮತಿ ನೀಡಬೇಕು’ ಎಂದು ಪುಟ್ಟರಾಜು ಕೋರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.