ಬೆಂಗಳೂರು: ಐಎಂಎ ಸಮೂಹ ಕಂಪನಿ ವಿರುದ್ಧ ದಾಖಲಾಗಿರುವ ವಂಚನೆ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ಐಟಿ ಅಧಿಕಾರಿಗಳು, ಶಿವಾಜಿನಗರ ಶಾಸಕ ರೋಷನ್ ಬೇಗ್ ಅವರನ್ನು ಸೋಮವಾರ ರಾತ್ರಿ ವಶಕ್ಕೆ ಪಡೆದಿದ್ದಾರೆ.
ಕಂಪನಿ ಮಾಲೀಕ ಮನ್ಸೂರ್ ಖಾನ್ ಅವರಿಂದ ಹಣ ಪಡೆದ ಆರೋಪ ಎದುರಿಸುತ್ತಿದ್ದ ರೋಷನ್ ಬೇಗ್ ಅವರಿಗೆ ಜುಲೈ 19ರಂದು ವಿಚಾರಣೆಗೆ ಬರುವಂತೆ ಎಸ್ಐಟಿ ನೋಟಿಸ್ ನೀಡಿತ್ತು.
ಆ ಸಂಗತಿ ತಿಳಿಯುತ್ತಿದ್ದಂತೆ ರೋಷನ್ ಬೇಗ್, ಮುಂಬೈಗೆ ಹೋಗಲು ನಗರದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸೋಮವಾರ ರಾತ್ರಿ ಹೋಗಿದ್ದರು. ಆ ಬಗ್ಗೆ ಮಾಹಿತಿ ಬರುತ್ತಿದ್ದಂತೆ ನಿಲ್ದಾಣಕ್ಕೆ ಹೋದ ಎಸ್ಐಟಿ ಅಧಿಕಾರಿಗಳ ತಂಡ, ರೋಷನ್ ಬೇಗ್ ಅವರನ್ನು ವಶಕ್ಕೆ ಪಡೆದು ಅಜ್ಞಾತ ಸ್ಥಳಕ್ಕೆ ಕರೆದೊಯ್ದಿದೆ.
“ವಿಚಾರಣೆಗೆ ಹಾಜರಾಗುವಂತೆ ಎರಡನೇ ಬಾರಿ ನೋಟಿಸ್ ಜಾರಿ ಮಾಡಲಾಗಿತ್ತು. ವಿಚಾರಣೆಗೆ ಗೈರಾಗುವ ಉದ್ದೇಶದಿಂದಲೇ ಅವರು ಹೊರ ರಾಜ್ಯಕ್ಕೆ ವಿಮಾನ ಮೂಲಕ ಹೊರಟಿದ್ದರು. ಹೀಗಾಗಿ, ವಶಕ್ಕೆ ಪಡೆಯಲಾಗಿದೆ’ ಎಂದು ಎಸ್ಐಟಿ ತಂಡದ ಅಧಿಕಾರಿಯೊಬ್ಬರು “ಪ್ರಜಾವಾಣಿ”ಗೆ ತಿಳಿಸಿದರು.
“ಕಂಪನಿಯ ಮಾಲೀಕ ಮನ್ಸೂರ್ ಖಾನ್ ಅವರಿಂದ ರೋಷನ್ ಬೇಗ್ ಸಾಲ ಪಡೆದಿದ್ದರು ಎಂಬುದಕ್ಕೆ ಕೆಲ ಪುರಾವೆಗಳು ಸಿಕ್ಕಿವೆ. ಅವುಗಳ ಬಗ್ಗೆ ಕೆಲ ಮಾಹಿತಿಗಳು ಬೇಕಾಗಿದ್ದು, ಹೀಗಾಗಿಯೇ ವಿಚಾರಣೆಗೆ ಬರುವಂತೆ ನೋಟಿಸ್ ನೀಡಲಾಗಿತ್ತು. ಆದರೆ, ಅವರು ದೇಶ ಬಿಟ್ಟು ಹೋಗಲು ಯೋಚಿಸಿದ್ದರು ಎಂಬುದು ಮೇಲ್ನೋಟಕ್ಕೆ ಗೊತ್ತಾಯಿತು. ಅದೇ ಕಾರಣಕ್ಕೆ ಇದೀಗ ಅವರನ್ನು ವಶಕ್ಕೆ ಪಡೆಯಲಾಗಿದೆ. ಅವರನ್ನು ವಿಚಾರಣೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.