ಬೆಂಗಳೂರು: ‘ಪರವಾನಗಿ ನವೀಕರಿ ಸದೆ ರಿವಾಲ್ವರ್ ಹೊಂದಿದ್ದಾರೆ’ ಎಂಬ ಆರೋಪದಡಿ ಬಳ್ಳಾರಿಯ ಬಿಜೆಪಿ ಶಾಸಕ ಜಿ.ಸೋಮಶೇಖರ ರೆಡ್ಡಿ ಅವ ರನ್ನು ಶಸ್ತ್ರಾಸ್ತ್ರ ಕಾಯ್ದೆ ಉಲ್ಲಂಘನೆ ಅನ್ವಯ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದೋಷಿ ಎಂದು ಪರಿಗಣಿಸಿದೆ.
ಪ್ರಕರಣದ ವಿಚಾರಣೆ ನಡೆಸಿದ, ‘ಶಾಸಕರು–ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆ’ಯ ವಿಶೇಷ ನ್ಯಾಯಾಲಯದ ನ್ಯಾಯಾಧೀಶೆ ಜೆ.ಪ್ರೀತ್, ಷರತ್ತುಗಳ ಆಧಾರದಲ್ಲಿ ರೆಡ್ಡಿ ಅವರನ್ನು ಬಿಡುಗಡೆ ಮಾಡಿ ಆದೇಶಿಸಿದ್ದಾರೆ.
‘ಆರೋಪಿಯು ತಾವು ಎಸಗಿರುವ ಅಪರಾಧಕ್ಕೆ ವಿಷಾದ ವ್ಯಕ್ತಪಡಿಸಿದ್ದಾರೆ. ಈ ಅಪರಾಧಕ್ಕೆ 1 ರಿಂದ 3 ವರ್ಷಗಳವರೆಗೆ ಶಿಕ್ಷೆ ಮತ್ತು ದಂಡ ವಿಧಿಸಬಹುದಾಗಿದೆ. ಆದರೆ, ಇದು ಜೀವಾವಧಿ ಅಥವಾ ಮರಣ ದಂಡನೆ ವಿಧಿಸಬಹುದಾದ ಪ್ರಕರಣವಲ್ಲ. ಹೀಗಾಗಿ, ದೋಷಿಯನ್ನು ಬಿಡುಗಡೆ ಮಾಡುವುದರಿಂದ ಸಮಾಜದ ಮೇಲೆ ಯಾವುದೇ ದುಷ್ಪರಿಣಾಮ ಆಗುವುದಿಲ್ಲ’ ಎಂದು ಆದೇಶದಲ್ಲಿ ವಿವರಿಸಲಾಗಿದೆ.
‘ಸೋಮಶೇಖರ ರೆಡ್ಡಿ ಕಾನೂನುಬದ್ಧವಾಗಿ ನಂ.32 ಎನ್.ಪಿ.ಬೋರ್ ರಿವಾಲ್ವರ್ (ನಂ.752708) ಹೊಂದಿದ್ದಾರೆ. ಆದರೆ ಪರವಾನಗಿ ನವೀಕರಿಸದೆ, 2010ರ ಜನವರಿ 1ರಿಂದ 2011ರ ನವೆಂಬರ್ 9ವರೆಗೆ ತಮ್ಮ ಸ್ವಾಧೀನದಲ್ಲೇ ಇರಿಸಿಕೊಂಡಿದ್ದಾರೆ. ಇದು ಶಸ್ತ್ರಾಸ್ತ್ರ ಕಾಯ್ದೆಯ ಕಲಂ 25 (1–ಬಿ) (ಎಚ್)ಕ್ಕೆ ವಿರುದ್ಧವಾಗಿದೆ’ ಎಂದು ಬ್ರೂಸ್‌ಪೇಟೆ ಪೊಲೀಸರು ಪ್ರಕರಣ ದಾಖಲಿಸಿದ್ದರು.
‘ಕಾರ್ಯಭಾರದ ಒತ್ತಡ ಮತ್ತು ಮನೆಯ ನವೀಕರಣದ ವೇಳೆ ಪರವಾನಗಿ ಪುಸ್ತಕ ಕಳೆದು ಹೋಗಿತ್ತು. ಪರವಾನಗಿ ಯಾವ ದಿನಾಂಕದಂದು ಮುಗಿಯುತ್ತದೆ ಎಂಬುದು ತಿಳಿದಿರಲಿಲ್ಲ’ ಎಂದು ಸೋಮಶೇಖರ ರೆಡ್ಡಿ ನ್ಯಾಯಾಲಯಕ್ಕೆ ಸಮಜಾಯಿಷಿ ನೀಡಿದ್ದರು.
ಆದರೆ ನ್ಯಾಯಾಲಯ, ‘ಆರೋಪಿಯ ಬಳಿ ಇರುವ ರಿವಾಲ್ವರ್ ಸಾಮಾನ್ಯ ಅಸ್ತ್ರವಲ್ಲ. ಮನೆಯ ನವೀಕರಣ ಸಂದರ್ಭದಲ್ಲಿ ಪರವಾನಗಿ ಪುಸ್ತಕ ಕಳೆದು ಹೋಗಿದೆ ಎಂಬುದನ್ನು ನಂಬಲಾಗದು. ಪುಸ್ತಕ ಕಳೆದು ಹೋಗಿದ್ದರೆ ದೂರು ದಾಖಲಿಸದಂತೆ ಆರೋಪಿಯನ್ನು ಯಾರೂ ತಡೆದಿರಲಿಲ್ಲ. ಜನಪ್ರತಿನಿಧಿಯಾಗಿ ಅವರು ತಾವು ಹೊಂದಿದ ರಿವಾಲ್ವರ್ ಬಗ್ಗೆ ಉಡಾಫೆ ಧೋರಣೆ ತೋರುವುದನ್ನು ಪರಿಗಣಿಸಲು ಆಗದು’ ಎಂದು ಹೇಳಿದೆ.
‘ಸೋಮಶೇಖರ ರೆಡ್ಡಿ ಘೋರ ಅಪರಾಧವನ್ನೇನೂ ಎಸಗಿಲ್ಲ. ಅವರ ವಿರುದ್ಧ ಹಾಲಿ ಪ್ರಕರಣ
ಹೊರತುಪಡಿಸಿದಂತೆ ಬೇರಾವುದೇ ಕ್ರಿಮಿನಲ್ ಪ್ರಕರಣ ಇಲ್ಲ’ ಎಂಬ ಅಭಿಪ್ರಾಯದೊಂದಿಗೆ ಷರತ್ತುಗಳ ಮೇಲೆ ಬಿಡುಗಡೆಗೆ ಆದೇಶಿಸಲಾಗಿದೆ.
‘ಶಸ್ತ್ರಾಸ್ತ್ರ ಕಾಯ್ದೆ–1959ರ ಅಡಿ ಆರೋಪಿಯು ₹ 50 ಸಾವಿರ ಮೊತ್ತದ ವೈಯಕ್ತಿಕ ಬಾಂಡ್ ನೀಡಬೇಕು. ಒಂದು ವರ್ಷಕಾಲ ಸೋಮಶೇಖರ ರೆಡ್ಡಿ ಈ ನ್ಯಾಯಾಲಯದ ನಿಗಾದಲ್ಲಿ ಇರುತ್ತಾರೆ. ಅವರು ಶಾಂತಿ ಕಾಪಾಡಬೇಕು. ಉತ್ತಮ
ನಡವಳಿಕೆ ತೋರಬೇಕು. ಯಾವುದೇ ಕ್ರಿಮಿನಲ್ ಚಟುವಟಿಕೆಯಲ್ಲಿ ತೊಡಗಬಾರದು. ನ್ಯಾಯಾಲಯದ ಅನುಮತಿ ಇಲ್ಲದೇ ವಿದೇಶ ಪ್ರಯಾಣ ಮಾಡುವಂತಿಲ್ಲ. ಮೂರು ತಿಂಗಳಲ್ಲಿ ಒಂದು ಬಾರಿಯಂತೆ ಅವರು ಒಂದು ವರ್ಷ ಕಾಲ ನ್ಯಾಯಾಲಯದ ಮುಂದೆ ಹಾಜರಾಗಬೇಕು‘ ಎಂದು ಷರತ್ತಿನಲ್ಲಿ ವಿವರಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.