ಬೆಂಗಳೂರು: ಚಿಕನ್ ಗುನ್ಯಾದಿಂದ ಗುಣಮುಖರಾಗಿರುವ ಶಾಸಕ ಎಸ್.ಸುರೇಶ್ ಕುಮಾರ್ ಅವರು ತಮ್ಮ ಆರೋಗ್ಯದ ಕುರಿತು ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಜತೆಗೆ, ಹಿತೈಷಿಗಳಿಗೆ ಧನ್ಯವಾದ ಹೇಳಿದ್ದಾರೆ.
'ನನ್ನ ಎಲ್ಲಾ ಗೆಳೆಯರಿಗೆ, ಹಿತೈಷಿಗಳಿಗೆ ನಿಮ್ಮ ಸುರೇಶ್ ಕುಮಾರ್ ಮಾಡುವ ಹೃದಯಪೂರ್ವಕ ನಮಸ್ಕಾರಗಳು. ನಿನ್ನೆ ರಾತ್ರಿಯಿಂದ ನನ್ನ ಆರೋಗ್ಯದ ಕುರಿತು ಮಾಧ್ಯಮಗಳಲ್ಲಿ ಬಂದ ಕೆಲವು ಸುದ್ಧಿಯ ಹಿನ್ನೆಲೆಯಲ್ಲಿ ಬಹಳಷ್ಟು ಜನ ತಮ್ಮ ಆತಂಕ ವ್ಯಕ್ತಪಡಿಸಿ ನನ್ನ ಆರೋಗ್ಯ ಸುಧಾರಿಸಲೆಂದು ಹಾರೈಸಿದ್ದಾರೆ. ಅವರೆಲ್ಲರಿಗೂ ನನ್ನ ಕೃತಜ್ಞತೆಗಳು' ಎಂದು ಸುರೇಶ್ ಕುಮಾರ್ ಅವರು ಫೇಸ್‌ಬುಕ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
'ನನ್ನ ಆರೋಗ್ಯ ಕಳೆದ ಆಗಸ್ಟ್ 20ರಿಂದ ತೀವ್ರ ಸಮಸ್ಯೆಗೆ ಒಳಗಾಗಿತ್ತು. ಆಗಸ್ಟ್ 15 ರವರೆಗೆ ನಮ್ಮ ಕ್ಷೇತ್ರದಲ್ಲಿ ಸುಮಾರು 3 ಕಡೆ ಜನಸ್ಪಂದನ, ಆಗಸ್ಟ್ 14ರಂದು ಮಧ್ಯರಾತ್ರಿ ರಾಷ್ಟ್ರಧ್ವಜ ಹಾರಿಸುವ ಭರ್ಜರಿ ಕಾರ್ಯಕ್ರಮ, ನಮ್ಮ ಕ್ಷೇತ್ರದ ಪ್ರೌಢಶಾಲಾ ಮಕ್ಕಳಿಗಾಗಿ ಆಯೋಜಿಸಿದ ಅತ್ಯಂತ ಯಶಸ್ವಿ ಆಶು ಭಾಷಣ ಸ್ಪರ್ಧೆ, ಆಗಸ್ಟ್ 15ರಂದು ಬೆಳಿಗ್ಗೆಯಿಂದ ಸಂಜೆಯವರೆಗೂ ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮಗಳು, ಆಗಸ್ಟ್ 16 ರಂದು ಕ್ಷೇತ್ರದ ರಾಮ ಮಂದಿರ ವಾರ್ಡಿನಲ್ಲಿ ಕೈಗೊಂಡ ಜನ ಸ್ಪಂದನ ಕಾರ್ಯಕ್ರಮ.... ಹೀಗೆ ಸಂಪೂರ್ಣವಾಗಿ ಕ್ಷೇತ್ರದ ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದೆ.
ಆಗಸ್ಟ್ 16, ವರಮಹಾಲಕ್ಷ್ಮಿ ಹಬ್ಬದಂದು ರಾಮಮಂದಿರ 4ನೇ ಬ್ಲಾಕ್‌ನ ಎಬಿಸಿ ಪಾರ್ಕ್‌ನಲ್ಲಿ ಮುಂಜಾನೆ ಜನಸ್ಪಂದನ ಕಾರ್ಯಕ್ರಮ ಯೋಜಿಸಲಾಗಿತ್ತು. ಅಂದು ಸಂಜೆ 5 ಗಂಟೆಯ ವೇಳೆಗೆ ನನ್ನ ಆರೋಗ್ಯ ಸ್ವಲ್ಪ ಹೆಚ್ಚೇ ಹದಗೆಟ್ಟಿತು. ಸಂಜೆ ವೇಳೆಗೆ ಎರಡು ಕಾಲುಗಳು ತುಂಬಾ ನೋಯಲು ಪ್ರಾರಂಭಿಸಿದವು. ಮಾರನೆಯ ದಿನ ಇಡೀ ದೇಹದಲ್ಲಿ ಒಂದಿಂಚು ಸಹ ನೋವು ಇಲ್ಲದ ಜಾಗ ನನಗೆ ಲಭ್ಯವಿರಲಿಲ್ಲ. ಅದರ ಮಾರನೆಯ ದಿನ ನನ್ನ ರಕ್ತ ಪರೀಕ್ಷೆ ಮಾಡಲಾಯಿತು. ಅದರಲ್ಲೂ ಯಾವುದೇ ಚಿನ್ಹೆ ಗೊತ್ತಾಗಲಿಲ್ಲ. ಸೋಮವಾರ(ಆ,19) ನೋವು ತಡೆಯಲಾರದೆ, ಬಾಧೆ ಎದುರಿಸಲಾಗದೆ ಆಸ್ಪತ್ರೆಗೆ ಸೇರಲೇಬೇಕಾಯಿತು. ಆಸ್ಪತ್ರೆಯಲ್ಲಿ ಅಗತ್ಯ ಚಿಕಿತ್ಸೆ ಕೊಟ್ಟು ಬುಧವಾರ ಅಂದರೆ ಆಗಸ್ಟ್ 23ರಂದು ನನ್ನ ಡಿಸ್ಚಾರ್ಜ್ ಮಾಡಲಾಯಿತು'.
ಆದರೆ ಮಾರನೆಯ ದಿನ ಮತ್ತೆ ದೇಹದಲ್ಲಿ ವಿಪರೀತ ಅಸ್ತವ್ಯಸ್ತ ಉಂಟಾಯಿತು. ಆಗ ವೈದ್ಯರು ತಪಾಸಣೆ ಮಾಡಿದ ಮೇಲೆ ನನಗೆ ಚಿಕನ್ ಗುನ್ಯಾ ಸಮಸ್ಯೆ ಗಂಭೀರ ಸ್ವರೂಪ ತಾಳಿದ್ದು ತಿಳಿಯಿತು.
ಅಲ್ಲಿಂದ ಪ್ರಾರಂಭವಾದ ನನ್ನ ಚಿಕನ್ ಗುನ್ಯಾ ವಿರುದ್ಧದ ಹೋರಾಟ ಬುಧವಾರ(ಸೆ.4) ಬೆಳಗ್ಗೆ ಒಂದು ಹಂತ ತಲುಪಿ, ಎಲ್ಲಾ ವೈದ್ಯರ ಉತ್ತಮ ಆರೈಕೆ, ಅಗತ್ಯ ಚಿಕಿತ್ಸೆ ಮೂಲಕ, ಆಸ್ಪತ್ರೆಯ ನರ್ಸ್‌ಗಳ ಕಾಳಜಿಯಿಂದ ಕೂಡಿದ ಸೇವೆಯ ಪರಿಣಾಮವಾಗಿ ನಾನು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದೇನೆ.
ತಮಗೆಲ್ಲ ಗೊತ್ತು ಚಿಕನ್ ಗುನ್ಯಾ ನಂತರದ ಪರಿಣಾಮ ಸುಧಾರಿಸಲು ಕನಿಷ್ಠ 3 ವಾರಗಳು ಬೇಕು. ವೈದ್ಯರುಗಳ ಸಲಹೆಯ ಮೇರೆಗೆ ನಾನು ಸುಧಾರಣೆಗಾಗಿ ನನ್ನ ಸಂಬಂಧಿಕರ ಮನೆಯಲ್ಲಿ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದೇನೆ. ಗುಣಮುಖವಾಗುವ ಹಾದಿಯಲ್ಲಿ ನನಗೆ ಮತ್ತೊಮ್ಮೆ ತಮ್ಮೆಲ್ಲರ ಆಶೀರ್ವಾದ ಹಾರೈಕೆ ಅಗತ್ಯವಿದೆ. ಎಲ್ಲರಿಗೂ ನಮಸ್ಕಾರ.
ಅನೇಕ ಗೆಳೆಯರು ಕುಕ್ಕೆ ಸುಬ್ರಹ್ಮಣ್ಯದಿಂದ ಹಿಡಿದು ಅಂಗಾಳ ಪರಮೇಶ್ವರಿ ದೇವಿಯವರೆಗೂ ವಿವಿಧ ಪೂಜೆ ಸಲ್ಲಿಸಿ ನನ್ನ ಆರೋಗ್ಯ ಸುಧಾರಿಸಲೆಂದು ಹಾರೈಸಿರುವುದು ನನ್ನ ಮನ ತುಂಬಿ ಬಂದಿದೆ ಎಂದು ಸುರೇಶ್ ಕುಮಾರ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.