ದಾವಣಗೆರೆ: ಉಗ್ರರ ಮೇಲಿನ ನಿರ್ದಿಷ್ಟ ದಾಳಿ ಪ್ರಕರಣವನ್ನು ಬಿಜೆಪ ಚುನಾವಣೆಯ ದಾಳವನ್ನಾಗಿ ಮಾಡಿಕೊಳ್ಳುವುದಿಲ್ಲ ಎಂದು ರಾಜಾಜಿನಗರದ ಶಾಸಕ ಸುರೇಶ ಕುಮಾರ್ ಸ್ಪಷ್ಟಪಡಿಸಿದರು.
ವಿರೋಧ ಪಕ್ಷಗಳ ಆರೋಪಕ್ಕೆ ಗುರುವಾರ ಇಲ್ಲಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ, ‘ನಮಗೆ ವ್ಯಕ್ತಿಗಿಂತ ಪಕ್ಷ ಮುಖ್ಯ. ಪಕ್ಷಕ್ಕಿಂತ ದೇಶ ಮುಖ್ಯ. ಬಿಜೆಪಿಯ ಯಾವುದೇ ನಾಯಕರು ಈ ವಿಚಾರವನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದಿಲ್ಲ ಎಂದು ಹೇಳಿದರು. ಜಿನೇವಾ ಒಪ್ಪಂದದಂತೆ ಪಾಕಿಸ್ತಾನವು ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ಅಭಿನವ್ ಅವರನ್ನು ಗೌರವಯುತವಾಗಿ ದೇಶಕ್ಕೆ ವಾಪಸ್ ಕಳುಹಿಸಿಕೊಡಬೇಕು. ಪಾಕಿಸ್ತಾನದ ಸೈನಿಕರ ಬಂಧನದಲ್ಲಿದ್ದರೂ ಅಭಿನವ್ ತೋರಿದ ಶೌರ್ಯಕ್ಕೆ ದೇಶದ ಜನ ಅವರಿಗೆ ಸಲಾಮು ಹೊಡೆಯುತ್ತಾರೆ’ಎಂದು ತಿಳಿಸಿದರು.
ಉಗ್ರರ ಮೇಲೆ ನಿರ್ದಿಷ್ಟ ದಾಳಿ ನಡೆಸಿದ್ದು ಮಾನವೀಯತೆಯ ಲಕ್ಷಣವಲ್ಲ ಎಂದು ತೋಟಗಾರಿಕೆ ಸಚಿವ ಎಂ.ಸಿ. ಮನಗೂಳಿ ನೀಡಿದ ಹೇಳಿಕೆಗೆ, ‘ಪ್ರಾಯಶಃ ಮನಗೂಳಿ ಅವರಿಗೆ ಮರೆಗುಳಿ ರೋಗ ಇರಬೇಕು. ದೇಶದ ಸಾಮಾನ್ಯ ಜನರ ಭಾವನೆ ಅವರಿಗೆ ಅರ್ಥವಾಗುತ್ತಿಲ್ಲ. ಉಗ್ರರ ಮೂಲವನ್ನೇ ನಿರ್ಮೂಲನೆ ಮಾಡಬೇಕು ಎಂದು ಬಯಸುತ್ತಿದ್ದಾರೆ. ಧಾರಾವಾಹಿಯಂತೆ ಕಂತಿನ ಮೇಲೆ ಕಾರ್ಯಾಚರಣೆ ನಡೆಸಬೇಕಿತ್ತೇ’ ಎಂದು ಮರು ಪ್ರಶ್ನೆ ಹಾಕಿದರು.
ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಸರ್ಕಾರದ ಅಭ್ಯರ್ಥಿಗಳನ್ನು ಬೆಂಬಲಿಸಿದರೆ ಸಂಸತ್ತಿನಲ್ಲಿ ಕನ್ನಡಿಗರ ಧ್ವನಿ ಕೇಳಿಸಲಿದೆ ಎಂಬ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿಕೆ ಕುರಿತ ಪ್ರಶ್ನೆಗೆ, ‘ಭಾಷೆಯನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ಸರಿಯಲ್ಲ. ಬಿಜೆಪಿಯ 17 ಸಂಸದರೂ ಕನ್ನಡಿಗರೇ ಆಗಿದ್ದಾರೆ. ಮುಂದಿನ ಚುನಾವಣೆಯಲ್ಲೂ ನೂರಕ್ಕೆ ನೂರರಷ್ಟು ಕನ್ನಡಿಗ ಅಭ್ಯರ್ಥಿಗಳನ್ನೇ ನಿಲ್ಲಿಸಲಾಗುವುದು. ಎಲ್ಲರೂ ರಾಜ್ಯದ ನೆಲ, ಜಲ ಸಂರಕ್ಷಣೆಗೆ ಬದ್ಧರಾಗಿರುತ್ತಾರೆ’ ಎಂದರು.
ಇದನ್ನೂ ಓದಿ...ಬಿಜೆಪಿಗೆ ನಾಯಕರಿಗೆ ಆತಂಕ ತಂದ ಸಮೀಕ್ಷೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.