ADVERTISEMENT

ಧಾರ್ಮಿಕ ಸಭೆಯಲ್ಲಿ ವಕ್ಫ್ ವಿರುದ್ಧ ಯತ್ನಾಳ ಭಾಷಣ: ಬೇಡ ಎಂದ ಭಕ್ತರು

ಭಾಷಣಕ್ಕೆ ಬ್ರೇಕ್: ಧಾರ್ಮಿಕ ಸಮಾವೇಷದಿಂದ ನಿರ್ಗಮನ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2024, 23:11 IST
Last Updated 11 ನವೆಂಬರ್ 2024, 23:11 IST
ಬಸನಗೌಡ ಪಾಟೀಲ ಯತ್ನಾಳ
ಬಸನಗೌಡ ಪಾಟೀಲ ಯತ್ನಾಳ   

ತೇರದಾಳ (ಬಾಗಲಕೋಟೆ ಜಿಲ್ಲೆ): ಇಲ್ಲಿ ಸೋಮವಾರ ನಡೆದ ಧಾರ್ಮಿಕ ಸಭೆಯಲ್ಲಿ ವಕ್ಫ್‌ ವಿರುದ್ಧ ಮಾತನಾಡಿದ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರಿಗೆ ಭಕ್ತರು ತಡೆಯೊಡ್ಡಿದರು. ಭಾಷಣ ಮೊಟಕುಗೊಳಿಸಿ, ಅವರು ನಿರ್ಗಮಿಸಿದರು.

ಅಲ್ಲಮಪ್ರಭು ದೇವರ ನೂತನ ದೇವಾಲಯದ ಲೋಕಾರ್ಪಣೆ ಬಳಿಕ ನಡೆದ ಧರ್ಮಸಭೆಯಲ್ಲಿ ಯತ್ನಾಳ, ‘ಹಿಂದೂ ದೇವಸ್ಥಾನಗಳು ವಕ್ಫ್ ಆಸ್ತಿಗಳಾಗುತ್ತಿವೆ. ವಕ್ಫ್‌ ಕಾಯ್ದೆ ಬ್ರಿಟಿಷರಿಗಿಂತ ಅಪಾಯಕಾರಿ ಆಗಿದೆ. ಈ ಕಾಯ್ದೆಗೆ ತಿದ್ದುಪಡಿ ತರಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಈ ದೇಶದಲ್ಲಿ ಮಿನಿ ಪಾಕಿಸ್ತಾನ ತಯಾರು
ಆಗುತ್ತಿರುವಂತಿದೆ’ ಎಂದರು.

ಧರ್ಮಸಭೆಯಲ್ಲಿ ಪಾಲ್ಗೊಂಡ ಭಕ್ತರು, ‘ಇದು ಧರ್ಮಸಭೆ. ಆದ್ದರಿಂದ ಅನ್ಯ ಧರ್ಮೀಯರ ವಿರುದ್ಧ ಇಲ್ಲಿ ಮಾತನಾಡಬೇಡಿ. ಈಗಷ್ಟೇ ಅನ್ನಪ್ರಸಾದ ಸೇವೆಗೆ ₹6 ಲಕ್ಷ ದೇಣಿಗೆ ನೀಡಿದ ಮುಸ್ಲಿಮರನ್ನು ಸತ್ಕರಿಸಲಾಗಿದೆ. ಇಲ್ಲಿ ಯಾವುದೇ ಧರ್ಮ, ಜಾತಿಯಿಲ್ಲ. ರಾಜಕೀಯ ಭಾಷಣ ಇಲ್ಲಿ ಬೇಡ’ ಎಂದರು.

ADVERTISEMENT

‘ಇದು ರಾಜಕೀಯ ಭಾಷಣವಲ್ಲ’ ಎಂದು ಯತ್ನಾಳ ಹೇಳಲು ಮುಂದಾದರು. ಆಗ, ಅಲ್ಲಿದ್ದವರು ಆಕ್ಷೇಪ ವ್ಯಕ್ತಪಡಿಸಿದರು. ಆಗ ‘ಸರಿ ಆಯಿತು’ ಎಂದು ಯತ್ನಾಳ ವೇದಿಕೆಯಿಂದ ನಿರ್ಗಮಿಸಿದರು

ಸ್ಮಶಾನ ಭೂಮಿ ದಾಖಲೆಗಳಲ್ಲೂ ವಕ್ಫ್ ಆಸ್ತಿ ನಮೂದು:

(ಬೆಳಗಾವಿ ವರದಿ)ಜಿಲ್ಲೆಯ ಬೈಲಹೊಂಗಲ ತಾಲ್ಲೂಕಿನ ರಾಯಣ್ಣನ ಸಂಗೊಳ್ಳಿ ಗ್ರಾಮದ ಸ್ಮಶಾನ ಭೂಮಿಯ ದಾಖಲೆಗಳಲ್ಲೂ ವಕ್ಫ್ ಆಸ್ತಿ ಎಂದು ನಮೂದಾಗಿದೆ.

ಗ್ರಾಮ ಪಂಚಾಯಿತಿಗೆ ಸೇರಿದ 128ರ ಸರ್ವೆ ನಂಬರ್‌ನಲ್ಲಿ ಇರುವ 8 ಎಕರೆ 27 ಗುಂಟೆ ಜಮೀನಿನ ಪಹಣಿಯಲ್ಲಿ ವಕ್ಫ್‌ ಮಂಡಳಿ ಎಂದು ಕಾಣಿಸಿಕೊಂಡಿದೆ.

‘ಅಧಿಕಾರಿಗಳು ತಕ್ಷಣ ಕ್ರಮ ವಹಿಸಿ, ಈ ಸಮಸ್ಯೆ ಬಗೆಹರಿಸಬೇಕು’ ಎಂದು ಗ್ರಾಮಸ್ಥರು ಕೋರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.