ADVERTISEMENT

ಜಮೀರ್‌ ಅಹಮ್ಮದ್‌ ಖಾನ್‌ ಬಳಿ ₹87 ಕೋಟಿ ಅಕ್ರಮ ಆಸ್ತಿ?

ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಆರೋಪ: ಎಸಿಬಿ ಲೆಕ್ಕಾಚಾರ ಶುರು

​ಪ್ರಜಾವಾಣಿ ವಾರ್ತೆ
Published 6 ಜುಲೈ 2022, 18:45 IST
Last Updated 6 ಜುಲೈ 2022, 18:45 IST
ಜಮೀರ್‌ ಅಹಮ್ಮದ್‌ ಖಾನ್‌
ಜಮೀರ್‌ ಅಹಮ್ಮದ್‌ ಖಾನ್‌   

ಬೆಂಗಳೂರು: ಕಾಂಗ್ರೆಸ್‌ ಶಾಸಕ ಬಿ.ಜೆಡ್‌. ಜಮೀರ್‌ ಅಹಮ್ಮದ್‌ ಖಾನ್‌ ಅಧಿಕೃತ ಆದಾಯಕ್ಕೆ ಹೋಲಿಸಿದರೆ ₹ 87 ಕೋಟಿ ಹೆಚ್ಚಿನ ಆಸ್ತಿ ಹೊಂದಿದ್ದಾರೆ ಎಂದು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ದಾಖಲಿಸಿರುವ ಎಫ್‌ಐಆರ್‌ನಲ್ಲಿ ಆರೋಪಿಸಲಾಗಿದೆ.

ಜಾರಿ ನಿರ್ದೇಶನಾಲಯ (ಇ.ಡಿ) ಸಲ್ಲಿಸಿರುವ ವರದಿ ಆಧಾರದಲ್ಲಿ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಅಡಿಯಲ್ಲಿ ಜಮೀರ್‌ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದು, ಮಂಗಳವಾರ ಐದು ಸ್ಥಳಗಳಲ್ಲಿ ಶೋಧ ನಡೆಸಲಾಗಿತ್ತು. 2016ರಿಂದ ಈವರೆಗೆ ಶಾಸಕರ ಕುಟುಂಬದ ಸಂಪಾದನೆ, ವೆಚ್ಚ ಮತ್ತು ಈಗ ಹೊಂದಿರುವ ಆಸ್ತಿಯ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ ಎಂದು ಮೂಲಗಳು ಹೇಳಿವೆ.

‘ಕಂಟೋನ್ಮೆಂಟ್‌ ರೈಲ್ವೆ ನಿಲ್ದಾಣದ ಬಳಿ ಇರುವ ಬೃಹತ್‌ ಬಂಗಲೆ, ಸದಾಶಿವನಗರದ ಅತಿಥಿಗೃಹ, ಸಿಲ್ವರ್‌ ಓಕ್‌ ಅಪಾರ್ಟ್‌ಮೆಂಟ್‌ನಲ್ಲಿರುವ ಫ್ಲ್ಯಾಟ್‌ ಸೇರಿದಂತೆ ನಾಲ್ಕು ಸ್ಥಿರಾಸ್ತಿಗಳು ಮಾತ್ರ ಶೋಧ ಕಾರ್ಯಾಚರಣೆ ವೇಳೆ ಪತ್ತೆಯಾಗಿವೆ. ಅವುಗಳ ಮೌಲ್ಯಮಾಪನ ಮಾಡಬೇಕಿದೆ. ಅಧಿಕೃತ ಆದಾಯಕ್ಕೆ ಹೋಲಿಸಿದರೆ ಜಮೀರ್‌ ಬಳಿ ಶೇಕಡ 2031ರಷ್ಟು ಅಕ್ರಮ ಆಸ್ತಿ ಇರುವ ಮಾಹಿತಿ ಪ್ರಾಥಮಿಕ ತನಿಖೆಯಲ್ಲಿ ಲಭ್ಯವಾಗಿದೆ’ ಎಂದು ತನಿಖಾ ಸಂಸ್ಥೆಯ ಮೂಲಗಳು ತಿಳಿಸಿವೆ.

ADVERTISEMENT

ಜಮೀರ್‌ ಅಹಮ್ಮದ್ ಒಡೆತನದ ನ್ಯಾಷನಲ್‌ ಟ್ರಾವೆಲ್ಸ್‌ 16 ವರ್ಷಗಳಿಂದ ಈಚೆಗೆ ನಡೆಸಿರುವ ವಹಿವಾಟಿನ ಬಗ್ಗೆಯೂ ತನಿಖಾ ತಂಡ ಮಾಹಿತಿ ಸಂಗ್ರಹಿಸುತ್ತಿದೆ. ಶೋಧ ಕಾರ್ಯಾಚರಣೆ ವೇಳೆ ಲಭ್ಯವಾಗಿರುವ ದಾಖಲೆಗಳು, ಸಂಗ್ರಹಿಸಿದ ಮಾಹಿತಿ ಕುರಿತು ತನಿಖಾ ತಂಡವು ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಪ್ರಕರಣಗಳ ವಿಶೇಷ ನ್ಯಾಯಾಲಯಕ್ಕೆ ಬುಧವಾರ ಪ್ರಾಥಮಿಕ ವರದಿ ಸಲ್ಲಿಸಿದೆ.

ದಾಖಲೆ ಸಲ್ಲಿಸಲು ಸೂಚನೆ: ‘ತಮ್ಮ ಬಳಿ ಇರುವ ಎಲ್ಲ ಆಸ್ತಿಗಳನ್ನೂ ಅಧಿಕೃತವಾಗಿ ಘೋಷಿಸಿಕೊಂಡಿದ್ದು, ಸಂಪೂರ್ಣ ಆದಾಯಕ್ಕೆ ತೆರಿಗೆ ಪಾವತಿಸಲಾಗಿದೆ ಎಂದು ಜಮೀರ್‌ ತಿಳಿಸಿದ್ದಾರೆ. ಈ ಕುರಿತು ಅವರ ಬಳಿ ಇರುವ ದಾಖಲೆಗಳನ್ನು ಸಲ್ಲಿಸುವಂತೆ ಸೂಚಿಸಲಾಗಿದೆ. ದಾಖಲೆ ಪರಿಶೀಲನೆ ಬಳಿಕ ತನಿಖೆ ಮುಂದುವರಿಯಲಿದೆ’ ಎಂದು ಎಸಿಬಿ ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.