ADVERTISEMENT

ಶಾಸಕರ ನಿಧಿ: ಒಂದೇ ತಿಂಗಳಲ್ಲಿ ₹ 150 ಕೋಟಿ ಬಳಕೆ

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2021, 19:49 IST
Last Updated 25 ಮಾರ್ಚ್ 2021, 19:49 IST
ಕೆ.ಸಿ. ನಾರಾಯಣ ಗೌಡ
ಕೆ.ಸಿ. ನಾರಾಯಣ ಗೌಡ   

ಬೆಂಗಳೂರು: ‘ಜಿಲ್ಲಾಧಿಕಾರಿಗಳ ಪಿ.ಡಿ (ವೈಯಕ್ತಿಕ ಠೇವಣಿ) ಖಾತೆಯಲ್ಲಿದ್ದ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಲ್ಲಿ ಕಳೆದೊಂದು ತಿಂಗಳ ಅವಧಿಯಲ್ಲಿ ₹ 150 ಕೋಟಿ ವೆಚ್ಚವಾಗಿದೆ. ಅಧಿಕಾರಿಗಳು ಚುರುಕಿನಿಂದ ಕೆಲಸ ಮಾಡಿದ್ದರಿಂದ ಇದು ಸಾಧ್ಯವಾಗಿದೆ’ ಎಂದು ಯೋಜನೆ ಮತ್ತು ಸಾಂಖ್ಯಿಕ ಸಚಿವ ಕೆ.ಸಿ. ನಾರಾಯಣಗೌಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ತಿಂಗಳ ಹಿಂದೆ ಪ್ರಗತಿ ಪರಿಶೀಲನಾ ಸಭೆ ನಡೆಸಿದಾಗ ₹ 1,150 ಕೋಟಿ ಅನುದಾನ ಪಿ.ಡಿ ಖಾತೆಯಲ್ಲಿರುವುದು ಗಮನಕ್ಕೆ ಬಂದಿತ್ತು. ಅನುದಾನ ಬಳಕೆಯಾಗದೆ ಇರುವುದಕ್ಕೆ ಗರಂ ಆಗಿದ್ದ ಸಚಿವರು, ತಿಂಗಳ ಗಡವು ನೀಡಿದ್ದರು.

ವಿಕಾಸಸೌಧದಲ್ಲಿ ಗುರುವಾರ ವಿಡಿಯೊ ಸಂವಾದದ ಮೂಲಕ ಜಿಲ್ಲಾಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನೆ ನಡೆಸಿದ ಸಚಿವರು, ‘ಕೆಲವು ಜಿಲ್ಲೆಗಳಲ್ಲಿ ಪ್ರಗತಿ ಇನ್ನೂ ವೇಗ ಪಡೆಯಬೇಕು. ಮೈಸೂರು ಸೇರಿದಂತೆ ಕೆಲವು ಜಿಲ್ಲೆಯ ಜಿಲ್ಲಾಧಿಕಾರಿಗಳು ಸ್ಪಷ್ಟ ಮಾಹಿತಿಯೊಂದಿಗೆ ಸಭೆಗೆ ಬಂದಿಲ್ಲ. ಹೀಗಾಗದಂತೆ ನೋಡಿಕೊಳ್ಳಬೇಕು’ ಎಂದರು.

ADVERTISEMENT

ಜಿಲ್ಲಾಧಿಕಾರಿಗಳು ನೀಡಿರುವ ಮಾಹಿತಿ ಅನ್ವಯ 2019-20ನೇ ಸಾಲಿನಲ್ಲಿ 45 ಶಾಸಕರು ಮತ್ತು ವಿಧಾನಪರಿಷತ್‌ನಆರು ಸದಸ್ಯರು ಕ್ರಿಯಾಯೋಜನೆ ಕೊಟ್ಟಿದ್ದಾರೆ. 2020- 21ನೇ ಸಾಲಿನಲ್ಲಿ 53 ಶಾಸಕರು, ಪರಿಷತ್‌ ಎಂಟು ಸದಸ್ಯರು ಮಾತ್ರ ಕ್ರಿಯಾಯೋಜನೆ ಸಲ್ಲಿಸಿದ್ದಾರೆ. ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಲ್ಲಿ ಕೇವಲ ಶೇ 32 ರಷ್ಟು ಮಾತ್ರ ಬಳಕೆಯಾಗಿದೆ. ಏಪ್ರಿಲ್ ಅಂತ್ಯದೊಳಗೆ ಪ್ರಗತಿಯಲ್ಲಿರುವ ಎಲ್ಲ ಕಾಮಗಾರಿ ಮುಗಿಸಿ ವರದಿ ನೀಡಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.

ಹಣ ವಾಪಸ್- ಎಚ್ಚರಿಕೆ: ‘ಶಾಸಕರ ಸ್ಥಳೀಯ ಪ್ರದೇಶಾಭಿವೃದ್ದಿ ಅನುದಾನದ ಅಡಿ ಕಾಮಗಾರಿಗಳು ಎರಡು ವರ್ಷವಾದರೂ ಆರಂಭಿಸದಿದ್ದರೆ ಅವುಗಳನ್ನು ರದ್ದುಪಡಿಸಿ, ಹಣ ವಾಪಸ್ ಪಡೆಯಲಾಗುವುದು. ಜಿಲ್ಲಾಧಿಕಾರಿಗಳು ಕಾಮಗಾರಿಗಳಿಗೆ ಅನುಮೋದನೆ ನೀಡುವಾಗ ಸರ್ಕಾರದ ಮಾರ್ಗಸೂಚಿ ಪಾಲಿಸಬೇಕು. 2019-20ನೇ ಸಾಲಿಗೆ ಪ್ರತಿ ಶಾಸಕರ ಅನುದಾನದಲ್ಲಿ ₹ 2 ಕೋಟಿಗೆ ಮಾತ್ರ ಅನುಮೋದನೆ ನೀಡ
ಬೇಕು. ಪ್ರಸಕ್ತ ಸಾಲಿಗೆ ₹ 1 ಕೋಟಿಗೆ ಮಾತ್ರ ಅನುಮೋದನೆ ನೀಡಬೇಕು’ ಎಂದು ಸಚಿವರು ಸೂಚನೆ ನೀಡಿದರು.

ಹಾಸನ ಪ್ರಥಮ: ಹಾಸನ ಜಿಲ್ಲೆಯಲ್ಲಿ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನದಲ್ಲಿ ಶೇ 68ರಷ್ಟು ಬಳಕೆಯಾಗಿದ್ದು ಮೊದಲ ಸ್ಥಾನದಲ್ಲಿದೆ. ಉಡುಪಿ ಹಾಗೂ ಚಿಕ್ಕಮಗಳೂರು ಶೇ 61ರಷ್ಟು ಬಳಕೆ ಮಾಡಿ ನಂತರದ ಸ್ಥಾನಗಳಲ್ಲಿವೆ’ ಎಂದು ಸಚಿವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.