ಮಂಗಳೂರು: 'ಸರ್ಕಾರದ ಖರ್ಚಿನಲ್ಲಿ ಯಾವುದೇ ಶಾಸಕರು ವಿದೇಶ ಪ್ರವಾಸ ಕೈಗೊಳ್ಳುತ್ತಿಲ್ಲ. ಅದಕ್ಕೆ ನಿಯಮದಲ್ಲಿ ಅವಕಾಶವೂ ಇಲ್ಲ. ಆದ್ದರಿಂದ ನಾವು ಕಳುಹಿಸುವುದೂ ಇಲ್ಲ' ಎಂದು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ತಿಳಿಸಿದರು.
ಸರ್ಕಾರ ಬರ ಪರಿಹಾರ ಬಿಡುಗಡೆ ಮಾಡದೇ ಇದ್ದರೂ ಶಾಸಕರು ವಿದೇಶಿ ಪ್ರವಾಸ ಮಾಡುತ್ತಿದ್ದಾರೆ ಎಂಬ ಟೀಕೆ ವ್ಯಕ್ತವಾಗಿರುವ ಕುರಿತ ಸುದ್ದಿಗಾರರ ಪ್ರಶ್ನೆಗೆ ಇಲ್ಲಿ ಶನಿವಾರ ಪ್ರತಿಕ್ರಿಯಿಸಿದ ಅವರು,
'ಶಾಸಕರ ವಿವಿಧ ಸಮಿತಿಗಳು ಅಧ್ಯಯನಕ್ಕೆ ದೇಶದ ವಿವಿಧ ರಾಜ್ಯಗಳಿಗೆ ಅಧ್ಯಯನ ಪ್ರವಾಸ ಮಾಡಬಹುದು. ಅಂತಹ ರಾಜ್ಯ ಪ್ರವಾಸಗಳಿಗೆ ಸಂಬಂಧಿಸಿದ ಮನವಿಗಳು ಬಂದಾಗ ಒಪ್ಪಿಗೆ ಕೊಟ್ಟಿದ್ದೇನೆ' ಎಂದು ಅವರು ಸ್ಪಷ್ಟಪಡಿಸಿದರು.
'ಶಾಸಕರು ಪ್ರವಾಸಕ್ಕೆ ತೆರಳಿದರೆ ಎಲ್ಲರಿಗೂ ನೋವು ಉಂಟಾಗುತ್ತದೆ. ಆಗಮಾತ್ರ ದೇಶಕ್ಕೆ, ರಾಜ್ಯಕ್ಕೆ ಕಷ್ಟಗಳು ಬರುತ್ತವೆ. ಶಾಸಕರು ಬೆಳಿಗ್ಗೆಯಿಂದ ಸಂಜೆ ತನಕ ಜನರ ಮಧ್ಯೆ ಕೆಲಸ ಮಾಡುತ್ತಾರೆ. ಅವರಿಗೂ ಸಮಸ್ಯೆ ಇರುತ್ತದೆ. ಜನಸೇವೆ ಮಾಡುವಾಗ ಸವಲತ್ತು ಬಳಸಿಕೊಳ್ಳಬಾರದು ಎಂದರೆ ಆಗುತ್ತದೆಯೇ' ಎಂದು ಪ್ರಶ್ನಿಸಿದರು.
'ಯಾರೂ ಯಾವತ್ತೂ ಶಾಸಕರನ್ನು ವೈರಿಗಳೆಂದು ಭಾವಿಸದೆ, ಸಹೋದರರು ಹಾಗೂ ಮಿತ್ರರಂತೆ ಕಾಣಬೇಕು' ಎಂದರು.
'ಅಧಿಕಾರದಲ್ಲಿ ಇದ್ದಾಗ ಬೇರೆ ವಿಚಾರ. ಆದರೆ ಅಧಿಕಾರ ಇಲ್ಲದೇ ಇದ್ದಾಗ ಕೆಲವು ರಾಜಕಾರಣಿಗಳ ಬಳಿ ಏನೂ ಇಲ್ಲದ ಉದಾಹರಣೆಗಳಿವೆ. ಕೆಲವರಿಗೆ ಆಸ್ಪತ್ರೆಯಿಂದ ಬಿಡುಗಡೆಯಾಗಲು ಶುಲ್ಕ ಕಟ್ಟಲೂ ಹಣ ಇರುವುದಿಲ್ಲ. ಎಷ್ಟೋ ಮಾಜಿ ಸಚಿವರು ಹಾಗೂ ಮಾಜಿ ಶಾಸಕರು ಹಣ ಇಲ್ಲದೇ ಈ ಸಮಸ್ಯೆ ಎದುರಿಸಿದ್ದಾರೆ. ಮಾಜಿ ಶಾಸಕರು ಜನಸೇವೆ ಮಾಡುವಾಗ ಬಸ್ಸಿನಲ್ಲಿ ಪ್ರಯಾಣಿಸುವಾಗ ತೀರಿ ಹೋದ ಉದಾಹರಣೆಯೂ ಇದೆ' ಎಂದರು.
'ಶಾಸಕರಿಗೆ ಏನು ಸಿಗುತ್ತದೆ. ಅವರಿಗೆ ಸಿಗುವ ಭತ್ಯೆ ಡೀಸೆಲ್ ಖರ್ಚಿಗೂ ಸಾಕಾಗದು. ತಮ್ಮ ಜೊತೆ ಬರುವ ಬೆಂಬಲಿಗರಿಗೆ ಕಾಫಿ ಕೊಡಿಸುವುದಕ್ಕೂ ಸಾಲದು. ಮಗಳ ಮದುವೆ, ಮಕ್ಕಳ ಶುಲ್ಕಕ್ಕೆ ನೆರವು ಯಾಚಿಸಿ ಬರುವವರಿಗೂ ಅವರು ನೆರವಾಗಬೇಕು' ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.