ADVERTISEMENT

ವಿಧಾನಪರಿಷತ್ ಚುನಾವಣೆ: 2 ಸ್ಥಾನ ಕಳೆದುಕೊಂಡ ಬಿಜೆಪಿ; ಮೂರಕ್ಕೆ ಜಿಗಿದ ಕಾಂಗ್ರೆಸ್

ಕಮಲ ಕಲಿಗಳ ದಶಕಗಳ ಆಧಿಪತ್ಯಕ್ಕೆ ‘ಕೈ’ ಪೆಟ್ಟು

ಚಂದ್ರಹಾಸ ಹಿರೇಮಳಲಿ
Published 8 ಜೂನ್ 2024, 0:25 IST
Last Updated 8 ಜೂನ್ 2024, 0:25 IST
ಡಾ.ಧನಂಜಯ ಸರ್ಜಿ
ಡಾ.ಧನಂಜಯ ಸರ್ಜಿ   

ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಎಂಟು ಸ್ಥಾನಗಳ ಹಿನ್ನಡೆ ಅನುಭವಿಸಿದ್ದ ಬಿಜೆಪಿ, ಪದವೀಧರ ಹಾಗೂ ಶಿಕ್ಷಕರ ಆರು ಕ್ಷೇತ್ರಗಳಿಂದ ವಿಧಾನ ಪರಿಷತ್‌ಗೆ ನಡೆದ ಚುನಾವಣೆಯಲ್ಲೂ ತಾನು ಆಧಿ‍ಪತ್ಯ ಹೊಂದಿದ್ದ ಎರಡು ಭದ್ರಕೋಟೆಗಳನ್ನು ಕಳೆದುಕೊಂಡಿದೆ.

ಪ್ರತಿನಿಧಿಸಿದ್ದ ಒಂದು ಸ್ಥಾನವನ್ನು ಉಳಿಸಿಕೊಂಡ ಕಾಂಗ್ರೆಸ್‌, ಬಿಜೆಪಿಯ ಮತಬ್ಯಾಂಕ್ ಎಂದೇ ಪರಿಭಾವಿಸಲಾದ ಮಧ್ಯಮ ವರ್ಗ ಮತ್ತು ಶಿಕ್ಷಿತ ಮತದಾರರನ್ನೇ ಹೊಂದಿರುವ ಎರಡು ಕ್ಷೇತ್ರಗಳನ್ನು ಆ ಪಕ್ಷದಿಂದ ಕಿತ್ತುಕೊಂಡಿದೆ. ಲೋಕಸಭೆಯಲ್ಲಿ ‘ಕೈ’ ಹಿಡಿದಿದ್ದ ಕಲ್ಯಾಣ ಕರ್ನಾಟಕ ವಿಧಾನ ಪರಿಷತ್‌ ಚುನಾವಣೆಯಲ್ಲೂ ಬೆಂಬಲಕ್ಕೆ ಬಂದಿದೆ. ಜೆಡಿಎಸ್‌ ಹಿಂದೆ ಗೆದ್ದಿದ್ದ ಎರಡು ಕ್ಷೇತ್ರಗಳನ್ನು ಉಳಿಸಿಕೊಳ್ಳುವಲ್ಲಿ ಸಫಲವಾಗಿದೆ. 

ಬೆಂಗಳೂರು ಪದವೀಧರ ಕ್ಷೇತ್ರ 36 ವರ್ಷಗಳಿಂದ ಹಾಗೂ ಆಗ್ನೇಯ ಶಿಕ್ಷಕರ ಕ್ಷೇತ್ರ 18 ವರ್ಷಗಳಿಂದ ಬಿಜೆಪಿ ಹಿಡಿತದಲ್ಲಿತ್ತು. ಹಿಂದೆಲ್ಲ ಸಾಂಪ್ರದಾಯಿಕ ಎದುರಾಳಿಯಾಗುತ್ತಿದ್ದ ಜೆಡಿಎಸ್‌ ಜತೆ ಈ ಬಾರಿ ಮೈತ್ರಿ ಕುದುರಿಸಿಕೊಂಡರೂ ಮೂರರಲ್ಲಿ ಎರಡೂ ಕ್ಷೇತ್ರಗಳು ಕೈತಪ್ಪಿವೆ.

ADVERTISEMENT

‘ಕೈ’ ಹಿಡಿದ ‘ಗೌಡರ’ ಕೋಟೆ:

ಬೆಂಗಳೂರು ಪದವೀಧರ ಕ್ಷೇತ್ರವನ್ನು ಸತತ ಐದು ಅವಧಿಗೆ ಪ್ರತಿನಿಧಿಸಿದ್ದ ಬಿಜೆಪಿಯ ರಾಮಚಂದ್ರೇಗೌಡ ಅವರು 2018ರ ಚುನಾವಣೆಯಲ್ಲಿ ನಿವೃತ್ತಿ ಘೋಷಿಸಿದ್ದರು.  ರಾಮಚಂದ್ರೇಗೌಡರ ಎದುರಾಳಿಯಾಗಿದ್ದ ಅ.ದೇವೇಗೌಡರನ್ನು ಸೆಳೆದಿದ್ದ ಬಿಜೆಪಿ, 2018ರ ಚುನಾವಣೆಯಲ್ಲಿ ಕಣಕ್ಕಿಳಿಸಿತ್ತು. ಆಗಲೂ ಗೆಲುವು ಸಾಧಿಸುವುದರೊಂದಿಗೆ ಬಿಜೆಪಿಯ ಆಧಿಪತ್ಯ ಕ್ಷೇತ್ರದಲ್ಲಿ ಮುಂದುವರಿದಿತ್ತು. ಬಿಜೆಪಿ ಕೋಟೆಯನ್ನು ಮೂರನೇ ಪ್ರಯತ್ನದಲ್ಲಿ ಮುರಿದು ಒಳ ನುಗ್ಗಿರುವ ಕಾಂಗ್ರೆಸ್‌ನ ರಾಮೋಜಿ ಗೌಡ ಈ ಬಾರಿ ಯಶ ಕಂಡಿದ್ದಾರೆ. 

18 ವರ್ಷಗಳ ಬಳಿಕ ನಾರಾಯಣಸ್ವಾಮಿಗೆ ಸೋಲು:

ಆಗ್ನೇಯ ಶಿಕ್ಷಕರ ಕ್ಷೇತ್ರವನ್ನು 18 ವರ್ಷಗಳಿಂದ ಪ್ರತಿನಿಧಿಸಿದ್ದ ಬಿಜೆಪಿಯ ವೈ.ಎ. ನಾರಾಯಣಸ್ವಾಮಿ ಮೊದಲ ಬಾರಿ ಸೋಲು ಕಂಡಿದ್ದಾರೆ. ಹೆಬ್ಬಾಳ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ಗೆದ್ದಿದ್ದ ನಾರಾಯಣಸ್ವಾಮಿ, ಮೇಲ್ಮನೆ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು. ಈ ಅಲ್ಪಾವಧಿಯಲ್ಲಿ ಅಂದು ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ರಮೇಶಬಾಬು ಗೆದ್ದಿದ್ದರು. ನಾರಾಯಣಸ್ವಾಮಿ ಈ ಬಾರಿ ಬಿಜೆಪಿ– ಜೆಡಿಎಸ್‌ ಮೈತ್ರಿ ಅಭ್ಯರ್ಥಿ ಆಗಿದ್ದರೂ, ಕಾಂಗ್ರೆಸ್‌ನ ಡಿ.ಟಿ ಶ್ರೀನಿವಾಸ್‌ ಬಿಜೆಪಿ ಕೋಟೆಯಲ್ಲಿ ವಿಜಯ ಪತಾಕೆ ಹಾರಿಸಿದ್ದಾರೆ.

ಬಿಜೆಪಿ ಆಧಿಪತ್ಯ ಮುಂದುವರಿಕೆ:

ಈಶಾನ್ಯ ಪದವೀಧರರ ಕ್ಷೇತ್ರದಲ್ಲಿ ಬಿಜೆಪಿ ತನ್ನ ಮೂರೂವರೆಗೆ ದಶಕಗಳ ಆಧಿ‍ಪತ್ಯ ಮುಂದುವರಿಸಿದೆ. 1988–2018ರವರೆಗೂ ಬಿಜೆಪಿಯ ಡಿ.ಎಚ್. ಶಂಕರಮೂರ್ತಿ ನಿರಂತರ ಗೆಲುವು ದಾಖಲಿಸಿದ್ದರು. 2018ರಲ್ಲಿ ಆಯನೂರು ಮಂಜುನಾಥ್ ಬಿಜೆಪಿಯಿಂದ ಗೆಲುವು ಕಂಡಿದ್ದರು. ಕಳೆದ ವರ್ಷ ವಿಧಾನ ಪರಿಷತ್‌ ಸ್ಥಾನಕ್ಕೆ ಆಯನೂರು ರಾಜೀನಾಮೆ ನೀಡಿದ ನಂತರ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದರು. ಬಿಜೆಪಿ ಅಭ್ಯರ್ಥಿ ಡಾ.ಧನಂಜಯ ಸರ್ಜಿ ಗೆಲುವು ಸಾಧಿಸುವ ಮೂಲಕ ಕ್ಷೇತ್ರ ಬಿಜೆಪಿ ‘ಭದ್ರಕೋಟೆ’ ಎನ್ನುವುದನ್ನು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ. 

ಕ್ಷೇತ್ರ ಉಳಿಸಿಕೊಂಡ ಕಾಂಗ್ರೆಸ್‌:

ಈಶಾನ್ಯ ಕರ್ನಾಟಕ ಪದವೀಧರ ಕ್ಷೇತ್ರವನ್ನು ಉಳಿಸಿಕೊಳ್ಳುವಲ್ಲಿ ಕಾಂಗ್ರೆಸ್‌ ಯಶ ಕಂಡಿದೆ. ಬಿಜೆಪಿಯ ಭದ್ರಕೋಟೆಯಾಗಿದ್ದ ಈ ಕ್ಷೇತ್ರ 2018ರಲ್ಲಿ ಕಾಂಗ್ರೆಸ್ ತೆಕ್ಕೆಗೆ ಜಾರಿತ್ತು. ಕಾಂಗ್ರೆಸ್‌ನ ಚಂದ್ರಶೇಖರ ಪಾಟೀಲ ಎರಡನೇ ಬಾರಿ ಗೆಲುವು ಕಂಡಿದ್ದಾರೆ.  ಬಿಜೆಪಿಯ ಅಮರನಾಥ ಪಾಟೀಲ ಸೋಲು ಅನುಭವಿಸಿದ್ದಾರೆ.  

ಚಂದ್ರಶೇಖರ ಪಾಟೀಲ
ಮೈಸೂರಿನ ವಿಧಾನಪರಿಷತ್ ದಕ್ಷಿಣ ಶಿಕ್ಷಕರ ಕ್ಷೇತ್ರದ ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿ ಕೆ.ವಿವೇಕಾನಂದ. ಪ್ರಜಾವಾಣಿ ಚಿತ್ರ/ಅನೂಪ್ ರಾಘ.ಟಿ.
ಎಸ್‌.ಎಲ್‌.ಭೋಜೇಗೌಡ
ರಾಮೋಜಿ ಗೌಡ ಕಾಂಗ್ರೆಸ್ ಅಭ್ಯರ್ಥಿ
ಡಿ.ಟಿ.ಶ್ರೀನಿವಾಸ್‌
ಫಲಿಸದ ಸಿದ್ದರಾಮಯ್ಯ ತಂತ್ರ
ತವರು ಜಿಲ್ಲೆಯ ವ್ಯಾಪ್ತಿಯ ದಕ್ಷಿಣ ಶಿಕ್ಷಕರ ಕ್ಷೇತ್ರದಲ್ಲಿ ಗೆಲುವು ಸಾಧಿಸಲು ವರ್ಷದ ಹಿಂದೆಯೇ ಯೋಜನೆ ಸಿದ್ಧಪಡಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಸತತ ನಾಲ್ಕು ಬಾರಿ ಜೆಡಿಎಸ್‌ನಿಂದ ಗೆಲುವು ಕಂಡಿದ್ದ ಮರಿತಿಬ್ಬೇಗೌಡ ಅವರನ್ನು ಸೆಳೆದು ಕಾಂಗ್ರೆಸ್‌ನಿಂದ ಕಣಕ್ಕೆ ಇಳಿಸಿದ್ದರು. ಸಿದ್ದರಾಮಯ್ಯ ತಂತ್ರಕ್ಕೆ ಪ್ರತಿತಂತ್ರ ಹೂಡಿದ್ದ ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಬಿಜೆಪಿ ಜತೆಗಿನ ಮೈತ್ರಿಯ ಬಲದಿಂದ ರಿಯಲ್‌ ಎಸ್ಟೇಟ್‌ ಉದ್ಯಮಿ ಕೆ.ವಿವೇಕಾನಂದ ಅವರನ್ನು ಕಣಕ್ಕೆ ಇಳಿಸಿದ್ದರು. ಅಂತಿಮವಾಗಿ ವಿವೇಕಾನಂದ ಗೆಲ್ಲುವ ಮೂಲಕ ಜೆಡಿಎಸ್‌ ಕ್ಷೇತ್ರವನ್ನು ಮತ್ತೆ ಗಟ್ಟಿಗೊಳಿಸಿದ್ದಾರೆ. 1988ರಲ್ಲಿ ಅಸ್ತಿತ್ವಕ್ಕೆ ಬಂದಿದ್ದ ಈ ಕ್ಷೇತ್ರದಲ್ಲಿ ಮೊದಲ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಫೆರ್ನಾಂಡಿಸ್‌ ಗೆಲುವು ಸಾಧಿಸಿದ್ದರು. ಆ ನಂತರ ಈ ಕ್ಷೇತ್ರ ಬಿಜೆಪಿ ತೆಕ್ಕೆಗೆ ಜಾರಿತ್ತು. ಬಾಲಕೃಷ್ಣ ಭಟ್ ಮತ್ತು ಕ್ಯಾ.ಗಣೇಶ್‌ ಕಾರ್ಣಿಕ್ ಕ್ರಮವಾಗಿ ತಲಾ ಎರಡು ಬಾರಿ ಗೆಲುವು ಸಾಧಿಸಿದ್ದರು. ಕಳೆದ ಚುನಾವಣೆಯಲ್ಲಿ ಬಿಜೆಪಿಯ ಕ್ಯಾ.ಗಣೇಶ್‌ ಕಾರ್ಣಿಕ್‌ ಅವರನ್ನು ಮಣಿಸಿ ಜೆಡಿಎಸ್‌ನ ಎಸ್‌.ಎಲ್‌. ಬೋಜೇಗೌಡ ಮೊದಲ ಬಾರಿ ವಿಜಯ ಸಾಧಿಸಿದ್ದರು. ಈ ಬಾರಿ ಬಿಜೆಪಿ ಬಲವೂ ಸೇರಿ ಜೆಡಿಎಸ್‌ ಭರ್ಜರಿ ಗೆಲುವು ದಾಖಲಿಸಿದೆ. ಆ ಮೂಲಕ ಜೆಡಿಎಸ್‌ ತನ್ನ ಎರಡೂ ಕ್ಷೇತ್ರ ಉಳಿಸಿಕೊಂಡಿದೆ.
  • ನೈರುತ್ಯ ಪದವೀಧರ ಕ್ಷೇತ್ರ ಗೆದ್ದವರು: ಡಾ.ಧನಂಜಯ ಸರ್ಜಿ (ಬಿಜೆಪಿ) ಪಡೆದ ಮತ: 37627  ಸಮೀಪದ ಸ್ಪರ್ಧಿ: ಆಯನೂರು ಮಂಜುನಾಥ್ (ಕಾಂಗ್ರೆಸ್‌) ಪಡೆದ ಮತ: 13516

  • ನೈರುತ್ಯ ಶಿಕ್ಷಕರ ಕ್ಷೇತ್ರ ಗೆದ್ದವರು: ಎಸ್‌.ಎಲ್‌. ಬೋಜೇಗೌಡ (ಜೆಡಿಎಸ್) ಪಡೆದ ಮತ: 9829 ಸಮೀಪದ ಸ್ಪರ್ಧಿ: ಕೆ.ಕೆ. ಮಂಜುನಾಥ್ ಕುಮಾರ್ (ಕಾಂಗ್ರೆಸ್‌) ಪಡೆದ ಮತ: 4562

  • ಬೆಂಗಳೂರು ಪದವೀಧರರ ಕ್ಷೇತ್ರ ಗೆದ್ದ ಅಭ್ಯರ್ಥಿ: ರಾಮೋಜಿ ಗೌಡ (ಕಾಂಗ್ರೆಸ್‌) ಪಡೆದ ಮತ: 36729 ಸಮೀಪದ ಸ್ಪರ್ಧಿ: ಅ. ದೇವೇಗೌಡ (ಬಿಜೆಪಿ) ಪಡೆದ ಮತ: 24888

  • ಶಿಕ್ಷಕರ ಕ್ಷೇತ್ರ ಗೆದ್ದ ಅಭ್ಯರ್ಥಿ: ಕೆ. ವಿವೇಕಾನಂದ (ಜೆಡಿಎಸ್‌) ಪಡೆದ ಮತ: 10823 ಸಮೀಪದ ಸ್ಪರ್ಧಿ: ಮರಿತಿಬ್ಬೇಗೌಡ (ಕಾಂಗ್ರೆಸ್‌) ಪಡೆದ ಮತ: 6201

  • ಈಶಾನ್ಯ ಪದವೀಧರರ ಕ್ಷೇತ್ರ ಗೆದ್ದ ಅಭ್ಯರ್ಥಿ: ಚಂದ್ರಶೇಖರ ಪಾಟೀಲ (ಕಾಂಗ್ರೆಸ್‌) ಪಡೆದ ಮತ: 39496 ಸಮೀಪದ ಸ್ಪರ್ಧಿ: ಅಮರನಾಥ ಪಾಟೀಲ (ಬಿಜೆಪಿ) ಪಡೆದ ಮತ: 35050

  • ಆಗ್ನೇಯ ಶಿಕ್ಷಕರ ಕ್ಷೇತ್ರ ಗೆದ್ದ ಅಭ್ಯರ್ಥಿ: ಡಿ.ಟಿ. ಶ್ರೀನಿವಾಸ್‌ (ಕಾಂಗ್ರೆಸ್‌) ಪಡೆದ ಮತ: 8909 ಸಮೀಪದ ಸ್ಪರ್ಧಿ: ವೈ.ಎ. ನಾರಾಯಣಸ್ವಾಮಿ (ಬಿಜೆಪಿ) ಪಡೆದ ಮತ: 7142

ಡಾ.ಧನಂಜಯ ಸರ್ಜಿ (ಬಿಜೆಪಿ) ಪಡೆದ ಮತ: 37627  ಸಮೀಪದ ಸ್ಪರ್ಧಿ: ಆಯನೂರು ಮಂಜುನಾಥ್ (ಕಾಂಗ್ರೆಸ್‌) ಪಡೆದ ಮತ: 13516 ––––––––– ನೈರುತ್ಯ ಶಿಕ್ಷಕರ ಕ್ಷೇತ್ರ ಗೆದ್ದವರು: ಎಸ್‌.ಎಲ್‌. ಬೋಜೇಗೌಡ (ಜೆಡಿಎಸ್) ಪಡೆದ ಮತ: 9829 ಸಮೀಪದ ಸ್ಪರ್ಧಿ: ಕೆ.ಕೆ. ಮಂಜುನಾಥ್ ಕುಮಾರ್ (ಕಾಂಗ್ರೆಸ್‌) ಪಡೆದ ಮತ: 4562 –––––––– ಬೆಂಗಳೂರು ಪದವೀಧರರ ಕ್ಷೇತ್ರ ಗೆದ್ದ ಅಭ್ಯರ್ಥಿ: ರಾಮೋಜಿ ಗೌಡ (ಕಾಂಗ್ರೆಸ್‌) ಪಡೆದ ಮತ: 36729 ಸಮೀಪದ ಸ್ಪರ್ಧಿ: ಅ. ದೇವೇಗೌಡ (ಬಿಜೆಪಿ) ಪಡೆದ ಮತ: 24888 ––––––––– ದಕ್ಷಿಣ ಶಿಕ್ಷಕರ ಕ್ಷೇತ್ರ ಗೆದ್ದ ಅಭ್ಯರ್ಥಿ: ಕೆ. ವಿವೇಕಾನಂದ (ಜೆಡಿಎಸ್‌) ಪಡೆದ ಮತ: 10823 ಸಮೀಪದ ಸ್ಪರ್ಧಿ: ಮರಿತಿಬ್ಬೇಗೌಡ (ಕಾಂಗ್ರೆಸ್‌) ಪಡೆದ ಮತ: 6201 ––––––––––––– ಈಶಾನ್ಯ ಪದವೀಧರರ ಕ್ಷೇತ್ರ ಗೆದ್ದ ಅಭ್ಯರ್ಥಿ: ಚಂದ್ರಶೇಖರ ಪಾಟೀಲ (ಕಾಂಗ್ರೆಸ್‌) ಪಡೆದ ಮತ: 39496 ಸಮೀಪದ ಸ್ಪರ್ಧಿ: ಅಮರನಾಥ ಪಾಟೀಲ (ಬಿಜೆಪಿ) ಪಡೆದ ಮತ: 35050 ––––––––––––– ಆಗ್ನೇಯ ಶಿಕ್ಷಕರ ಕ್ಷೇತ್ರ ಗೆದ್ದ ಅಭ್ಯರ್ಥಿ: ಡಿ.ಟಿ. ಶ್ರೀನಿವಾಸ್‌ (ಕಾಂಗ್ರೆಸ್‌) ಪಡೆದ ಮತ: 8909 ಸಮೀಪದ ಸ್ಪರ್ಧಿ: ವೈ.ಎ. ನಾರಾಯಣಸ್ವಾಮಿ (ಬಿಜೆಪಿ) ಪಡೆದ ಮತ: 7142
ತಿರಸ್ಕೃತವಾದ ಮತಗಳ ಸಂಖ್ಯೆ 28684!
ವಿದ್ಯಾವಂತರೇ ಮತದಾರರಾಗಿರುವ ಆರು ಕ್ಷೇತ್ರಗಳಲ್ಲಿ 28684 ಮತಗಳು ತಿರಸ್ಕೃತವಾಗಿವೆ. ಶಿಕ್ಷಕರ ಕ್ಷೇತ್ರದಲ್ಲಿ ಪ್ರೌಢಶಾಲೆ ಹಾಗೂ ಅದಕ್ಕಿಂತ ಮೇಲ್ಪಟ್ಟ ವಿದ್ಯಾಸಂಸ್ಥೆಗಳ ಶಿಕ್ಷಕರು ಮತದಾರರು. ಪದವೀಧರರ ಕ್ಷೇತ್ರದಲ್ಲಿ ಯಾವುದೇ ವಿಷಯದಲ್ಲಿ ಪದವಿ ಪಡೆದವರು ಮತದಾರಾಗಿರುತ್ತಾರೆ. ಇಂತಹ ಸುಶಿಕ್ಷಿತ ಮತದಾರರು ಕ್ರಮಬದ್ಧವಾಗಿ ಮತಚಲಾಯಿಸಲು ವಿಫಲರಾಗಿರುವುದು ಮತದಾನ ಪ್ರಕ್ರಿಯೆಯನ್ನೇ ಅಣಕಿಸುವಂತಿದೆ. ಈ ತಿರಸ್ಕೃತ ಮತಗಳು ಕ್ರಮ ಬದ್ಧವಾಗಿದ್ದಿದ್ದರೆ ಕೆಲ ಕ್ಷೇತ್ರಗಳ ಫಲಿತಾಂಶಗಳಲ್ಲಿ ವ್ಯತ್ಯಾಸವಾಗುವ ಸಾಧ್ಯತೆ ಇತ್ತು. ಈಶಾನ್ಯ ಪದವೀಧರ ಕ್ಷೇತ್ರದಲ್ಲಿ ಗೆದ್ದ ಕಾಂಗ್ರೆಸ್‌ ಅಭ್ಯರ್ಥಿ ಚಂದ್ರಶೇಖರ ಪಾಟೀಲ  39496 ಮತ ಸೋತ ಅಭ್ಯರ್ಥಿ ಬಿಜೆಪಿಯ ಅಮರನಾಥ ಪಾಟೀಲ 35050 ಮತಗಳನ್ನು ಪಡೆದಿದ್ದಾರೆ. ತಿರಸ್ಕೃತಗೊಂಡ 12513 ಮತಗಳು ಸರಿಯಾಗಿ ಚಲಾವಣೆಯಾಗಿದ್ದರೆ ಫಲಿತಾಂಶ ಭಿನ್ನವಾಗುವ ಸಾಧ್ಯತೆ ಇತ್ತು. 

Cut-off box -

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.