ಬೆಂಗಳೂರು: ‘ನನ್ನ ಅನರ್ಹತೆ ಬಗ್ಗೆ ಹೈಕೋರ್ಟ್ ನೀಡಿದ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುತ್ತೇನೆ’ ಎಂದು ವಿಧಾನಪರಿಷತ್ ಸದಸ್ಯ, ಬಿಜೆಪಿಯ ಎಚ್. ವಿಶ್ವನಾಥ್ ಹೇಳಿದರು.
ಮಾಧ್ಯಮ ಪ್ರತಿನಿಧಿಗಳ ಜೊತೆ ಮಂಗಳವಾರ ಮಾತನಾಡಿದ ಅವರು, ‘ನಾನು ಹೋರಾಟದಿಂದ ಬಂದವನು. ಸಮ್ಮಿಶ್ರ ಸರ್ಕಾದ ಪತನಕ್ಕೆ ಸಿದ್ದರಾಮಯ್ಯ ಕಾರಣ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಕರ್ನಾಟಕದಲ್ಲಿ ಇರುವ ರಾಕ್ಷಸ ರಾಜಕಾರಣ ಪತನವಾಗಬೇಕಿತ್ತು. ಅದು ಆಗಿದೆ ಅಷ್ಟೇ. ಅಂದು ಕ್ಷಿಪ್ರ ಕ್ರಾಂತಿಯಾಯಿತು. ನಾವು ಸಚಿವರಾಗಬೇಕೆಂಬ ಆಸೆಯಿಂದ ಅಲ್ಲ. ಕೆಲವರು ಅನಾವಶ್ಯಕವಾಗಿ ಮಾತನಾಡುತ್ತಿದ್ದಾರೆ’ ಎಂದರು.
‘ನಮ್ಮಿಂದ ಸರ್ಕಾರ ರಚನೆ ಆಯಿತು. ಆದರೆ, ಅವರು (ಬಿಜೆಪಿಯವರು) ನಮ್ಮ ಕಷ್ಟ ಕಾಲದಲ್ಲಿ ಬರಲಿಲ್ಲ. ನನ್ನನ್ನು ಯಾಕೆ ಬಳಸಿಕೊಳ್ಳಲು ಹಿಂಜರಿತ. ಎಲ್ಲವನ್ನೂ ಎದುರಿಸಿ ನಿಲ್ಲುತ್ತೇನೆ. ನಲ್ವತ್ತು ವರ್ಷಗಳ ರಾಜಕೀಯ ಜೀವನದಲ್ಲಿ ಎಲ್ಲವನ್ನೂ ಎದುರಿಸಿದ್ದೇನೆ’ ಎಂದರು.
‘ನನ್ನ ವಕೀಲರ ಜೊತೆ ಚರ್ಚೆ ನಡೆಸುತ್ತೇನೆ. ಬಿಜೆಪಿ ಬಗ್ಗೆ ನನಗೆ ಅಭಿಮಾನ ಇದೆ. ಸಂಘ ಪರಿವಾರ, ಬಿಜೆಪಿಯಲ್ಲಿ ನನ್ನ ಬಗ್ಗೆ ಅಭಿಮಾನ ಇದೆ’ ಎಂದೂ ಹೇಳಿದರು.
‘ನಾನು ರಾಜಕಾರಣವನ್ನು ಲಾಭ, ನಷ್ಟ, ಸೋಲು, ವ್ಯವಹಾರವಾಗಿ ತೆಗೆದುಕೊಂಡಿಲ್ಲ. ರಾಜಕೀಯ ನನಗೆ ಸಾಂಸ್ಕ್ರತಿಕವಾಗಿ ಸಮವಾಗಿದೆ. ಏನೋ ದೊಡ್ಡ ದುರಂತ ಆಗಿದೆ ಅಂತ ಭಾವಿಸಿಲ್ಲ. ಬಿಜೆಪಿ ಕೋರ್ ಕಮಿಟಿ ಜೂನ್‌ನಲ್ಲಿ ಪರಿಷತ್‌ಗೆ ನನ್ನ ಹೆಸರೂ ಸೇರಿಸಿ ನಾಲ್ವರ ಹೆಸರು ಕಳುಹಿಸಿತ್ತು. ಪಟ್ಟಿ ಬರುವಾಗ ನನ್ನ ಹೆಸರು ಇರಲಿಲ್ಲ. ಯಾಕೆ ಎಂದು ನಾನು ಬಿಜೆಪಿ ನಾಯಕರಲ್ಲಿ ಕೇಳಿದೆ. ನಿಮ್ಮನ್ನು ನಾಮನಿರ್ದೇಶನ ಮಾಡ್ತೇವೆ ಅಂದರು. ಪರಿಷತ್ ಚುನಾವಣೆ ವೇಳೆ ನನ್ನ ಹೆಸರು ಯಾಕೆ ತೆಗೆದರು ಎಂದು ಗೊತ್ತಿಲ್ಲ’ ಎಂದರು.
‘ನನಗೂ ಪರಿಷತ್ ಚುನಾವಣೆಗೆ ಟಿಕೆಟ್ ಕೊಟ್ಟಿದ್ದರೆ ನಾನು ಮಂತ್ರಿ ಆಗುತ್ತಿದ್ದೆ. ಮುಖ್ಯಮಂತ್ರಿಯನ್ನು ಭೇಟಿ ಮಾಡಿ ಮಾತನಾಡುತ್ತೇನೆ. ಹಲವರು ನಿನ್ನೆ ದೂರವಾಣಿ ಕರೆ ಮಾಡಿ ಮಾತನಾಡಿದರು. ಮಿತ್ರ ಮಂಡಳಿಯ ಎಲ್ಲಾ ಸದಸ್ಯರು ನನ್ನ ಜೊತೆ ಇದ್ದಾರೆ. ನಮ್ಮಲ್ಲಿ ಯಾವುದೇ ಭಿನ್ನಮತ ಇಲ್ಲ’ ಎಂದೂ ವಿಶ್ವನಾಥ್ ಹೇಳಿದರು.
‘ಸಾ.ರಾ. ಮಹೇಶ್ ಬಗ್ಗೆ ಮಾತನಾಡುವುದಿಲ್ಲ. ಕೊಚ್ಚೆಗೆ ಪದೇ ಪದೇ ಕಲ್ಲೆಸೆಯುವುದಿಲ್ಲ. ನನ್ನ ಬಿಳಿ ವಸ್ತ್ರವನ್ನು ಕೊಳೆ ಮಾಡಿಕೊಳ್ಳುವುದಿಲ್ಲ. ಅವನ್ಯಾರ್‍ರೀ ಸಾರಾ ಮಹೇಶ? ಬಾಯಿಗೆ ಬಂದಂತೆ ಮಾತನಾಡುತ್ತಾನೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ನನ್ನ ಬಗ್ಗೆ ಅಡ್ವೊಕೇಟ್ ಜನರಲ್‌ಗೆ ನಿರ್ಲಕ್ಷ್ಯ ಯಾಕೆ ಗೊತ್ತಿಲ್ಲ. ಅಡ್ವೊಕೇಟ್ ಜನರಲ್ ನನ್ನ ಜೊತೆ ಮಾತಾಡಲಿಲ್ಲ. ನಾಮನಿರ್ದೇಶನ ಬಗ್ಗೆ ಸ್ಪಷ್ಟವಾಗಿ ಹೇಳಲಿಲ್ಲ’ ಎಂದು ಅಡ್ವೊಕೇಟ್ ಜನರಲ್ ವಿರುದ್ಧವೂ ವಿಶ್ವನಾಥ್ ಅಸಮಾಧಾನ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.