ಬೆಂಗಳೂರು: ‘ನಾನು ಶಾಸಕನಾದ 23 ವರ್ಷದಲ್ಲಿ ಇದೇ ಮೊದಲ ಬಾರಿಗೆ ಒಂದು ವಿಭಿನ್ನ ಬಜೆಟ್ ಮಂಡನೆಯನ್ನು ಈ ವರ್ಷ ನೋಡಿದ್ದೇನೆ’ ಎಂದು ಜೆಡಿಎಸ್‌ನ ಮರಿತಿಬ್ಬೇಗೌಡ ಬಣ್ಣಿಸಿದರು.
ವಿಧಾನ ಪರಿಷತ್‌ನಲ್ಲಿ ಬಜೆಟ್ ಮೇಲೆ ಮಾತನಾಡಿದ ಅವರು, ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಹೊಗಳಿದರು. ಅಹಿಂಸಾ ತತ್ವದ ಮೇಲೆ ಎಲ್ಲ ಸಿದ್ಧಾಂತಕ್ಕೆ ಮೆಚ್ಚುಗೆಯಾಗುವ ಬಜೆಟ್ ಎಂದೂ ಹೇಳಿದರು.
‘ಶಿಕ್ಷಣ ಸಂಸ್ಥೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕು. ರೈತರು, ಕಾರ್ಮಿಕರ ಮಕ್ಕಳಿಗಾಗಿ ಹಿಂದಿನ ಬಿಜೆಪಿ ಸರ್ಕಾರ ನೀಡುತ್ತಿದ್ದ ವಿದ್ಯಾರ್ಥಿ ವೇತನವನ್ನು ಮುಂದುವರಿಸಬೇಕು. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಯುಜಿಸಿ ಅಡಿ ಹಣ ಬರುತ್ತಿಲ್ಲ. ರಾಜ್ಯ ಸರ್ಕಾರ ಕೂಡಾ ಅನುದಾನ ಬಿಡುಗಡೆ ಮಾಡುತ್ತಿಲ್ಲ. ಈ ಬಗ್ಗೆ ಗಮನಹರಿಸಬೇಕು’ ಎಂದು ಆಗ್ರಹಿಸಿದರು.
ಈ ವೇಳೆ ಮಧ್ಯಪ್ರವೇಶಿಸಿದ ಸಚಿವ ಪ್ರಿಯಾಂಕ್ ಖರ್ಗೆ, ಯು.ಬಿ. ವೆಂಕಟೇಶ್, ಮಂಜುನಾಥ ಭಂಡಾರಿ ಕೇಂದ್ರ ಸರ್ಕಾರದ ಕೆಲವು ನೀತಿಗಳನ್ನು ಟೀಕಿಸಿದರು.
ಬಜೆಟ್ ಮೇಲೆ ಸರ್ಕಾರದ ಮುಖ್ಯಸಚೇತಕ ಸಲೀಂ ಅಹ್ಮದ್, ಅರವಿಂದಕುಮಾರ್ ಅರಳಿ, ಹರೀಶ್‌ಕುಮಾರ್, ಮಧು ಮಾದೇಗೌಡ, ಎಸ್. ರವಿ, ನಜೀರ್ ಅಹ್ಮದ್, ಅನಿಲ್‌ಕುಮಾರ್ ಕೂಡಾ ಮಾತನಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.