ADVERTISEMENT

371–ಜೆ ಸ್ಥಳೀಯ ವೃಂದ ರಚನೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2021, 18:47 IST
Last Updated 15 ಮಾರ್ಚ್ 2021, 18:47 IST
ಕಲ್ಯಾಣ ಕರ್ನಾಟಕ
ಕಲ್ಯಾಣ ಕರ್ನಾಟಕ   

ಬೆಂಗಳೂರು: ಸಂವಿಧಾನದ ಪರಿಚ್ಛೇದ 371–ಜೆ ಅಡಿಯಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಎಲ್ಲ ಇಲಾಖೆಗಳಲ್ಲೂ ಸ್ಥಳೀಯ ಮೀಸಲಾತಿ ವೃಂದ ರಚಿಸುವ ಪ್ರಕ್ರಿಯೆಯನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಬಿಜೆಪಿ ಸದಸ್ಯ ಶಶೀಲ್‌ ಜಿ. ನಮೋಶಿ ವಿಧಾನ ಪರಿಷತ್‌ನಲ್ಲಿ ಸೋಮವಾರ ಆಗ್ರಹಿಸಿದರು.

ಗಮನ ಸೆಳೆಯುವ ಸೂಚನೆ ಮಂಡಿಸಿ ಮಾತನಾಡಿದ ಅವರು, ‘371ಜೆ ಪ್ರಕಾರ ಎಲ್ಲ ಇಲಾಖೆಗಳಲ್ಲೂ ಎಲ್ಲ ಹಂತದ ಸಿಬ್ಬಂದಿಯಲ್ಲಿ ಸ್ಥಳೀಯ ವೃಂದದ ಮೀಸಲಾತಿ ಕಲ್ಪಿಸಬೇಕು. ಆದರೆ, ಯಾವುದೇ ಇಲಾಖೆಗಳಲ್ಲೂ ಈ ಪ್ರಕ್ರಿಯೆ ಪೂರ್ಣಗೊಳಿಸಿಲ್ಲ. ಹೊರಗಿನ ಪ್ರದೇಶದ ನೌಕರರ ಅನುಕೂಲಕ್ಕಾಗಿ ಮಾತ್ರ ಈ ಪ್ರಕ್ರಿಯೆ ನಡೆಸಲಾಗುತ್ತಿದೆ’ ಎಂದು ದೂರಿದರು.

ವಿಳಂಬ ಧೋರಣೆಯಿಂದ ಕಲ್ಯಾಣ ಕರ್ನಾಟಕದ ನಿವಾಸಿಗಳಿಗೆ ಅನ್ಯಾಯವಾಗುತ್ತಿದೆ. ಸಕಾಲಕ್ಕೆ ಬಡ್ತಿ ದೊರೆಯದೇ ನೌಕರರು ಸಂಕಷ್ಟ ಅನುಭವಿಸುತ್ತಿದ್ದಾರೆ. ಇತರ ವೃಂದದಲ್ಲಿ ಸ್ಥಳೀಯ ವ್ಯಕ್ತಿಗಳನ್ನು ಆಯ್ಕೆಗೆ ಪರಿಗಣಿಸುತ್ತಿಲ್ಲ. ಈ ಎಲ್ಲ ಸಮಸ್ಯೆಗಳಿಗೂ ಪರಿಹಾರ ದೊರಕಿಸಬೇಕು. ನಿರ್ದಿಷ್ಟ ಕಾಲಮಿತಿಯೊಳಗೆ ಸ್ಥಳೀಯ ವೃಂದ ರಚನೆ ಪ್ರಕ್ರಿಯೆ ಪೂರ್ಣಗೊಳಿಸಲು ವಿಶೇಷ ಅಭಿಯಾನ ನಡೆಸಬೇಕು ಎಂದು ಆಗ್ರಹಿಸಿದರು.

ADVERTISEMENT

ಮುಖ್ಯಮಂತ್ರಿಯವರ ಪರವಾಗಿ ಉತ್ತರ ನೀಡಿದ ಸಭಾ ನಾಯಕ ಕೋಟ ಶ್ರೀನಿವಾಸ ಪೂಜಾರಿ, ‘371ಜೆ ಅನುಷ್ಠಾನದ ಮೇಲುಸ್ತುವಾರಿಯನ್ನು ಸಚಿವ ಸಂಪುಟ ಉಪ ಸಮಿತಿ ನಿರ್ವಹಿಸುತ್ತಿದೆ. ಸ್ಥಳೀಯ ವೃಂದ ರಚನೆಯನ್ನೂ ಸಮಿತಿ ಕಾಲಕಾಲಕ್ಕೆ ಪರಿಶೀಲಿಸುತ್ತಿದೆ. ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳು, ವೃಂದ ಮತ್ತು ನೇಮಕಾತಿ ನಿಯಮಗಳನ್ನು ರಚಿಸದಿರುವ ಕಾರಣ ಸ್ಥಳೀಯ ವೃಂದ ರಚನೆ ತಡವಾಗುತ್ತಿದೆ. ಸಮಸ್ಯೆ ಪರಿಹಾರಕ್ಕೆ ಮುಖ್ಯಮಂತ್ರಿಯವರ ಜತೆ ಸಮಾಲೋಚಿಸಿ ಉನ್ನತ ಮಟ್ಟದ ಸಭೆ ನಿಗದಿಪಡಿಸಲಾಗುವುದು’ ಎಂದು ಭರವಸೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.