ADVERTISEMENT

ಎಂ.ಎಂ.ಕಲಬುರ್ಗಿ ಹತ್ಯೆ ಪ್ರಕರಣ| ಜಾಮೀನು ಅರ್ಜಿ: ಸರ್ಕಾರಕ್ಕೆ ಹೈಕೋರ್ಟ್‌ ನೋಟಿಸ್

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2024, 15:49 IST
Last Updated 9 ಅಕ್ಟೋಬರ್ 2024, 15:49 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ಸಂಶೋಧಕ ಎಂ.ಎಂ.ಕಲಬುರ್ಗಿ ಕೊಲೆ ಪ್ರಕರಣದ ಮೂರನೇ ಆರೋಪಿ ಪ್ರವೀಣ್‌ ಅಲಿಯಾಸ್‌ ಮಸಾಲಾ ವಾಲಾ ಸಲ್ಲಿಸಿರುವ ಜಾಮೀನು ಅರ್ಜಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ನೋಟಿಸ್‌ ಜಾರಿಗೊಳಿಸಲು ಹೈಕೋರ್ಟ್‌ ಆದೇಶಿಸಿದೆ.

ಈ ಸಂಬಂಧ ಬೆಳಗಾವಿಯ ಪ್ರವೀಣ್‌ ಸಲ್ಲಿಸಿರುವ ಜಾಮೀನು ಅರ್ಜಿಯನ್ನು ಧಾರವಾಡ ಪೀಠದ ನ್ಯಾಯಮೂರ್ತಿ ಎಂ.ಜಿ.ಉಮಾ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿ ಪ್ರಕರಣದ ಎಲ್ಲ ಪ್ರತಿವಾದಿಗಳಿಗೆ ನೋಟಿಸ್‌ ಜಾರಿಗೊಳಿಸಲು ಆದೇಶಿಸಿದೆ. ಅಂತೆಯೇ, ಆಕ್ಷೇಪಣೆ ಸಲ್ಲಿಸುವಂತೆ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಐಟಿಗೆ ನಿರ್ದೇಶಿಸಿ ವಿಚಾರಣೆ ಮುಂದೂಡಿದೆ. ಜಾಮೀನು ಕೋರಿ ಪ್ರವೀಣ್‌ ಸಲ್ಲಿಸಿದ್ದ ಈ ಮೊದಲಿನ ಎರಡು ಅರ್ಜಿಗಳನ್ನು ಹೈಕೋರ್ಟ್‌ ವಜಾಗೊಳಿಸಿತ್ತು.

ಪ್ರಕರಣದ ನಾಲ್ಕನೇ ಆರೋಪಿಯಾದ ವಾಸುದೇವ ಭಗವಾನ್‌ ಸೂರ್ಯವಂಶಿ ಅಲಿಯಾಸ್‌ ವಾಸು ಅಲಿಯಾಸ್‌ ಮೆಕ್ಯಾನಿಕ್‌ ಹಾಗೂ ಆರನೇ ಆರೋಪಿ ಅಮಿತ್‌ ಬಡ್ಡಿ ಅಲಿಯಾಸ್‌ ಅಮಿತ್‌ ಅಲಿಯಾಸ್‌ ಗೋವಿಂದ್‌ಗೆ 2024ರ ಜುಲೈ 23 ರಂದು ಹೈಕೋರ್ಟ್‌ ಜಾಮೀನು ಮಂಜೂರು ಮಾಡಿದೆ.

ADVERTISEMENT

ಕಲಬುರ್ಗಿ ಅವರನ್ನು ಧಾರವಾಡದ ಅವರ ನಿವಾಸದಲ್ಲಿ 2015ರ ಆಗಸ್ಟ್‌ನಲ್ಲಿ ಹತ್ಯೆ ಮಾಡಲಾಗಿತ್ತು. 2018-2019ರಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣಾ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ. ಮೊದಲನೇ ಆರೋಪಿ ಅಮೋಲ್‌ ಕಾಳೆ, ಕಲಬುರ್ಗಿ ಅವರನ್ನು ಶೂಟ್‌ ಮಾಡಿ ಹತ್ಯೆಗೈದ ಆರೋಪ ಎದುರಿಸುತ್ತಿದ್ದಾರೆ. ಕಾಳೆಯನ್ನು ಕಲಬುರ್ಗಿ ಅವರ ಮನೆಗೆ ಬೈಕ್‌ನಲ್ಲಿ ಕರೆದೊಯ್ದು, ಕಲ್ಬುರ್ಗಿ ಅವರ ಹತ್ಯೆ ಮಾಡಿದ ನಂತರ ಕಾಳೆಯನ್ನು ವಾಪಸ್‌ ಕರೆದೊಯ್ದ ಆರೋಪ ಪ್ರವೀಣ್‌ ಮೇಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.