ADVERTISEMENT

ಕಲಬುರ್ಗಿ ಹಂತಕ ಗಣೇಶ?

ದೋಷಾರೋಪ ಪಟ್ಟಿ ಸಿದ್ಧ : ‘ದೇವರ ಮೂರ್ತಿ’ ಹೇಳಿಕೆಯೇ ಕೊಲೆಗೆ ಕಾರಣ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2019, 20:45 IST
Last Updated 16 ಆಗಸ್ಟ್ 2019, 20:45 IST
ಎಂ.ಎಂ. ಕಲಬುರ್ಗಿ
ಎಂ.ಎಂ. ಕಲಬುರ್ಗಿ   

ಬೆಂಗಳೂರು: ಹಿರಿಯ ಸಂಶೋಧಕ ಎಂ.ಎಂ. ಕಲಬುರ್ಗಿ ಅವರ ಹತ್ಯೆ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿರುವ ವಿಶೇಷ ತನಿಖಾ ದಳದ (ಎಸ್‌ಐಟಿ) ಅಧಿಕಾರಿಗಳು, ಅಂತಿಮವಾಗಿ ಆರು ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿ ಸಿದ್ಧಪಡಿಸಿದ್ದಾರೆ.

‘ಬೆಂಗಳೂರಿನ ವಿಜ್ಞಾನ ಪರಿಷತ್‌ನಲ್ಲಿ 2014ರಲ್ಲಿ ನಡೆದಿದ್ದ ಕಾರ್ಯಕ್ರಮದಲ್ಲಿ ಕಲಬುರ್ಗಿಯವರು ಭಾಷಣ ಮಾಡಿದ್ದರು. ಅವರ ಹೇಳಿಕೆ ಧರ್ಮ ವಿರೋಧಿ ಎಂದು ಭಾವಿಸಿದ್ದ ಆರೋಪಿಗಳು, ಹುಬ್ಬಳ್ಳಿಯಲ್ಲಿ ಸಭೆ ಸೇರಿ ಕಲಬುರ್ಗಿಯವರ ಹತ್ಯೆಗೆ ಸಂಚು ರೂಪಿಸಿದ್ದರು. ಈ ಬಗ್ಗೆ ಆರೋಪಿಗಳು ಹೇಳಿಕೆ ನೀಡಿದ್ದಾರೆ’ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ.

‘ಮಹಾರಾಷ್ಟ್ರದ ಅಮೋಲ್ ಕಾಳೆಯೇ ಹತ್ಯೆ ಪ್ರಕರಣದ ಪ್ರಮುಖ ಆರೋಪಿ. ಆತನ ಸಂಚಿನಂತೆ 2015ರ ಆಗಸ್ಟ್‌ 30ರಂದು ವಿದ್ಯಾರ್ಥಿಗಳ ಸೋಗಿನಲ್ಲಿ ಕಲಬುರ್ಗಿಯವರ ಮನೆಗೆ ಹೋಗಿ ಹತ್ಯೆ ಮಾಡಲಾಗಿದೆ. ಗುಂಡು ಹೊಡೆದಿದ್ದು ಆರೋಪಿ ಹುಬ್ಬಳ್ಳಿಯ ಗಣೇಶ್ ಮಿಸ್ಕಿನ್ ಹಾಗೂ ಬೈಕ್ ಚಲಾಯಿಸಿದ್ದು ಬೆಳಗಾವಿಯ ಪ್ರವೀಣ್ ಚತುರ್ ಎಂಬುದಕ್ಕೆ ಪುರಾವೆಗಳು ಸಿಕ್ಕಿವೆ.’

ADVERTISEMENT

ಆರೋಪಿಗಳ ಗುರುತು ಪತ್ತೆ: ‘ಅಮೋಲ್ ಕಾಳೆ ಹಾಗೂ ಇತರೆ ಆರೋಪಿಗಳು, ಹತ್ಯೆ ದಿನಕ್ಕೂ ಮುನ್ನ ಕಲಬುರ್ಗಿಯವರ ಮನೆ ಬಳಿ ಹಲವು ಬಾರಿ ಓಡಾಡಿದ್ದರು. ಗಣೇಶ್ ಮಿಸ್ಕಿನ್ ಹಾಗೂ ಪ್ರವೀಣ್ ಚತುರ್‌ ಮನೆಗೆ ಬಂದು ಕೃತ್ಯ ಎಸಗಿ ಬೈಕ್‌ನಲ್ಲಿ ಪರಾರಿಯಾಗಿದ್ದರು’ ಎಂದು ಮೂಲಗಳು ಹೇಳಿವೆ.

‘ಆರೋಪಿಗಳನ್ನು ಕಂಡ ಸಾಕ್ಷಿಗಳು ಇದ್ದಾರೆ. ಆರೋಪಿಗಳ ಬಂಧನದ ನಂತರ ಜೈಲಿನಲ್ಲೇ ಗುರುತು ಪತ್ತೆ ಪರೇಡ್ ನಡೆಸಲಾಗಿತ್ತು. ಎಲ್ಲ ಆರೋಪಿಗಳನ್ನು ಸಾಕ್ಷಿದಾರರು ಗುರುತು ಹಿಡಿದಿದ್ದಾರೆ. ತಹಶೀಲ್ದಾರ್ ಸಮ್ಮುಖದಲ್ಲಿ ನಡೆದ ಪರೇಡ್‌ನ ದಾಖಲೆಗಳನ್ನೂ ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗುವುದು’ ಎಂದು ಮೂಲಗಳು ಹೇಳಿವೆ.

ಗನ್‌ ನಾಶಪಡಿಸಿದ್ದು ಕಳಾಸ್ಕರ್: ಕಲಬುರ್ಗಿ ಹತ್ಯೆಗೆ ಬಳಸಿದ್ದ ಪಿಸ್ತೂಲ್‌ನ್ನು ಇನ್ನೊಬ್ಬ ಆರೋಪಿ ಶರದ್‌ ಕಳಾಸ್ಕರ್‌ ನಾಶಪಡಿಸಿದ್ದಾನೆ. ಗೌರಿ ಲಂಕೇಶ್ ಹತ್ಯೆ ಆರೋಪಿಯಾಗಿರುವ ಆತನನ್ನು ಕಲಬುರ್ಗಿ ಹತ್ಯೆ ಪ್ರಕರಣದಲ್ಲೂ ಬಂಧಿಸಲಾಗಿದೆ.

ಗೌರಿ ಲಂಕೇಶ್ ಹತ್ಯೆಯಲ್ಲೂ ಭಾಗಿ: ‘ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆ ನಡೆಸುವಾಗಲೇ ಕಲಬುರ್ಗಿ ಹತ್ಯೆಯ ಸುಳಿವು ಸಿಕ್ಕಿತ್ತು. ಕಲಬುರ್ಗಿ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿದ್ದ ಸಿಐಡಿ ತಂಡಕ್ಕೆ ಮಾಹಿತಿ ಹಂಚಿಕೊಳ್ಳಲಾಗಿತ್ತು. ಪ್ರಕರಣವನ್ನು ಎಸ್‌ಐಟಿಗೆ ವಹಿಸುತ್ತಿದ್ದಂತೆ ನಾವೇ ತನಿಖೆ ಮುಂದುವರಿಸಿ ಆರೋಪಿಗಳನ್ನು ಬಂಧಿಸಲಾಯಿತು’ ಎಂದು ಎಸ್‌ಐಟಿ ಮೂಲಗಳು ಹೇಳಿವೆ.

ಸೋಮವಾರ ಸಲ್ಲಿಕೆ ಸಾಧ್ಯತೆ

ಹಿರಿಯ ಐಪಿಎಸ್ ಅಧಿಕಾರಿ ಬಿ.ಕೆ. ಸಿಂಗ್ ನೇತೃತ್ವದ ಎಸ್‌ಐಟಿ ತಂಡ ದೋಷಾರೋಪ ಪಟ್ಟಿಯನ್ನು ಅಂತಿಮಗೊಳಿಸಲಾಗಿದೆ. ಅದನ್ನೇ ಧಾರವಾಡದ ನ್ಯಾಯಾಲಯಕ್ಕೆ ಸೋಮವಾರವೇ ಸಲ್ಲಿಸುವ ಸಾಧ್ಯತೆ ಇದೆ.

‘ಸಾಕ್ಷಿದಾರರ ಹೇಳಿಕೆ ಸೇರಿದಂತೆ ಎಲ್ಲ ಪುರಾವೆಗಳ ಸಮೇತ 6 ಸಾವಿರ ಹೆಚ್ಚು ಪುಟಗಳ ದೋಷಾರೋಪ ಪಟ್ಟಿ ಸಿದ್ಧಪಡಿಸಲಾಗಿದೆ. ಧಾರವಾಡಕ್ಕೆ ಹೋಗಲಿರುವ ವಿಶೇಷ ತಂಡ, ನ್ಯಾಯಾಲಯಕ್ಕೆ ಕೊಟ್ಟು ಬರಲಿದೆ’ ಎಂದು ಎಸ್‌ಐಟಿ ಮೂಲಗಳು ಹೇಳಿವೆ.

ಆರು ಆರೋಪಿಗಳು

ಮಹಾರಾಷ್ಟ್ರದ ಅಮೋಲ್ ಕಾಳೆ, ವಾಸುದೇವ್ ಸೂರ್ಯವಂಶಿ ಅಲಿಯಾಸ್ ಮೆಕ್ಯಾನಿಕ್, ಶರದ್ ಕಳಾಸ್ಕರ್.

ಹುಬ್ಬಳ್ಳಿಯ ಗಣೇಶ್ ಮಿಸ್ಕಿನ್, ಅಮಿತ್ ಬದ್ದಿ ಬೆಳಗಾವಿಯ ಪ್ರವೀಣ್ ಚತುರ್.


ವಿಜ್ಞಾನ ಪರಿಷತ್‌ನಲ್ಲಿ ಕಲಬುರ್ಗಿ ಹೇಳಿದ್ದು

‘ದೇವರನ್ನು ನಂಬುವ ಆಸ್ತಿಕನಾಗಿರುವ ನಾನು, ಮೂತ್ರ ವಿಸರ್ಜನೆಯಂತಹ ಪ್ರಯೋಗಗಳನ್ನು ಒಪ್ಪುವುದಿಲ್ಲ’ ಎಂದು ಕಲಬುರ್ಗಿಯವರು ತಮ್ಮ ಭಾಷಣದಲ್ಲಿ ಹೇಳಿದ್ದರು.

‘ಸಾಕಾರ ದೇವತೆಗಳಿಗೆ ಕಾಡುವ-ಕಾಯುವ ಶಕ್ತಿ ಇರುವುದನ್ನು ಪರೀಕ್ಷಿಸಲು ಅನಂತಮೂರ್ತಿ ಅವರು ಗುಟ್ಟಾಗಿ ಹೋಗಿ ತಮ್ಮ ಊರಿನ ಮರದ ಕೆಳಗಿನ ಕಲ್ಲು ದೇವರ ಮೇಲೆ ಮೂತ್ರ ವಿಸರ್ಜನೆ ಮಾಡಿದರಂತೆ. ನಂತರ ಆ ದೇವತೆ ತಮ್ಮನ್ನು ಕಾಡಬಹುದೇ ಎಂದು 3–4 ದಿನ ಕಾದರು. ಆ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ’ ಎಂದು ‘ಬೆತ್ತಲೆ ಪೂಜೆ ಯಾಕೆ ಕೂಡದು?’ ಪುಸ್ತಕದಲ್ಲಿ ಅನಂತಮೂರ್ತಿ ಅವರೇ ಬರೆದುಕೊಂಡಿದ್ದಾರೆ. ಇಂತಹ ಪ್ರಯೋಗ ಬೇಕೇ’ ಎಂದು ಕಲಬುರ್ಗಿಯವರು ಪ್ರಶ್ನಿಸಿದ್ದರು.

* ಇದುವರೆಗೂ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿಲ್ಲ. ಸಲ್ಲಿಸಿದ ಬಳಿಕ ಪತ್ರಿಕಾ ಪ್ರಕಟಣೆ ನೀಡಲಾಗುವುದು

- ಎಂ.ಎನ್. ಅನುಚೇತ್, ಡಿಸಿಪಿ, ಎಸ್‌ಐಟಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.