ಹಾವೇರಿ: ಸಂಶೋಧಕ ಎಂ.ಎಂ.ಕಲಬುರ್ಗಿ ಅವರನ್ನು ಸ್ವಾತಂತ್ರ್ಯ ದಿನಾಚರಣೆಯಂದೇ (ಆ.15) ಕೊಲ್ಲಲು ಸಂಚು ಸಿದ್ಧವಾಗಿತ್ತು. ಆದರೆ, ಆ ದಿನ ಅನಾರೋಗ್ಯದಿಂದ ಕಲಬುರ್ಗಿ ಅವರು ಮನೆಯಿಂದ ಆಚೆ ಬಂದಿರಲಿಲ್ಲ. ಹೀಗಾಗಿ, ಗಣೇಶ್ ಮಿಸ್ಕಿನ್ ವಿದ್ಯಾರ್ಥಿಯ ಸೋಗಿನಲ್ಲಿ ಅವರ ಮನೆಗೂ ಹೋಗಿ ಬಂದಿದ್ದ!
ನ್ಯಾಯಾಲಯಕ್ಕೆ ಸಲ್ಲಿಕೆಯಾಗಿರುವ ದೋಷಾರೋಪಪಟ್ಟಿಯಲ್ಲಿ ಈ ಅಂಶ ತಿಳಿಸಿರುವ ಎಸ್‌ಐಟಿ ಪೊಲೀಸರು, ‘2015ರ ಆ.15ರಂದು ಕಲಬುರ್ಗಿ ಹಾಸಿಗೆ ಹಿಡಿದಿದ್ದರು. ಇಲ್ಲದಿದ್ದರೇ, ಹಂತಕರು ಅದೇ ದಿನ ಅವರನ್ನು ಮುಗಿಸುತ್ತಿದ್ದರು’ ಎಂದೂ ಹೇಳಿದ್ದಾರೆ. ಆರೋಪಿ ಮಿಸ್ಕಿನ್‌ನ ಹೇಳಿಕೆಯಲ್ಲೂ ಈ ಸಂಗತಿ ಇದೆ.
ಪಟ್ಟು ಹಿಡಿದ ಕಾಳೆ: ‘ಮನೋಹರ್ ಯಡವೆ (ಆರೋಪಿ) 2014ರ ಕೊನೆಯಲ್ಲಿ ಹುಬ್ಬಳ್ಳಿಯ ಗ್ಲಾಸ್ ಹೌಸ್ ಪಾರ್ಕಿನಲ್ಲಿ ಅಮೋಲ್ ಕಾಳೆಯನ್ನು ಭೇಟಿ ಮಾಡಿಸಿದ್ದ. 2015ರ ಏಪ್ರಿಲ್‌ನಲ್ಲಿ ನನ್ನನ್ನು ಯಲ್ಲಾಪುರದ ತೋಟಕ್ಕೆ ಕರೆಸಿಕೊಂಡ ಕಾಳೆ, ‘ದುರ್ಜನರ ಸಮಾಪ್ತಿ’ಗೆ ಸಿದ್ಧನಾಗುವಂತೆ ಹೇಳಿದ್ದ. ಅಂತೆಯೇ ರಾಜೇಶ್ ಬಂಗೇರನಿಂದ ಶಸ್ತ್ರಾಸ್ತ್ರ ತರಬೇತಿ ಕೊಡಿಸಿದ್ದ. ಜುಲೈನಲ್ಲಿ ಮತ್ತೆ ಗ್ಲಾಸ್ ಹೌಸ್‌ಗೆ ಕರೆಸಿಕೊಂಡ ಆತ, ‘ಕಲಬುರ್ಗಿ ಮನೆ ಸರ್ವೇ ಮಾಡು’ ಎಂದಿದ್ದ. ಆ ದಿನದಿಂದಲೇ ಅವರನ್ನು ಹಿಂಬಾಲಿಸಲು ಶುರು ಮಾಡಿದ್ದೆ’ ಎಂದು ಮಿಸ್ಕಿನ್ ಸಂಚಿನ ಬಗ್ಗೆ ವಿವರಿಸಿದ್ದಾನೆ.
‘ಆಗಸ್ಟ್ ಮೊದಲ ವಾರದಿಂದ ಕಲಬುರ್ಗಿ ಹೆಚ್ಚಾಗಿ ಹೊರಬರುತ್ತಿರಲಿಲ್ಲ. ಯೂನಿವರ್ಸಿಟಿಯಲ್ಲೂ ಕಾಣಿಸುತ್ತಿರಲಿಲ್ಲ. ಆದರೆ ಕಾಳೆ, ‘ಆ.15ರಂದೇ ಕಲಬುರ್ಗಿ ಸಮಾಪ್ತಿ (ಹತ್ಯೆ) ಆಗಬೇಕು’ ಎಂದು ಪಟ್ಟು ಹಿಡಿದಿದ್ದ. ಅಲ್ಲದೇ, ಧಾರವಾಡದ ಕಲ್ಯಾಣನಗರದಲ್ಲಿರುವ ಕಲಬುರ್ಗಿ ಮನೆ ಹಾಗೂ ಸುತ್ತಮುತ್ತಲ ರಸ್ತೆಗಳಲ್ಲೆಲ್ಲ ನನ್ನ ಜತೆ ಓಡಾಡಿ ‘ಬಲ್ಬ್’ (ಸಿ.ಸಿ ಟಿ.ವಿ ಕ್ಯಾಮೆರಾಗೆ ಕೋಡ್‌ವರ್ಡ್) ಇವೆಯೇ ಎಂಬುದನ್ನೂ ಪರಿಶೀಲಿಸಿದ್ದ.’
‘ವಾಸುದೇವ್ ಸೂರ್ಯವಂಶಿಯು (ಆರೋಪಿ) ಹುಬ್ಬಳ್ಳಿಯಲ್ಲೇ ಬಜಾಜ್ ಪಲ್ಸರ್ ಬೈಕ್ ಕದ್ದು ತಂದಿದ್ದ. ಅದನ್ನು ನೇಕಾರ ನಗರದಲ್ಲಿರುವ ನನ್ನ ಊದುಬತ್ತಿ ಅಂಗಡಿ ಸಮೀಪವೇ ನಿಲ್ಲಿಸಿದ್ದೆ. ಸಮಾಪ್ತಿಗೆ ಅದೇ ವಾಹನ ಬಳಸುವಂತೆ ಸೂಚಿಸಿದ ಕಾಳೆ, ಪಿಸ್ತೂಲನ್ನೂ ಕೈಗಿಟ್ಟು ಹೋಗಿದ್ದ. ಬೈಕ್ ಮೇಲಿದ್ದಎಲ್ಲ ಸ್ಟಿಕ್ಕರ್‌ಗಳನ್ನು ಕಿತ್ತು ಬಿಸಾಡಿದ ನಾನು, ನೋಂದಣಿ ಸಂಖ್ಯೆಯನ್ನೂ ಕಲ್ಲಿನಿಂದ ಉಜ್ಜಿ ಅಳಿಸಿದ್ದೆ’ ಎಂದೂ ಹೇಳಿದ್ದಾನೆ.
ಏನ್ ಸರ್ ಕಾಣಿಸ್ತಿಲ್ಲ...
‘ಸ್ವಾತಂತ್ರ್ಯ ದಿನಾಚರಣೆ ದಿನ ‘ಸಮಾಪ್ತಿ’ಗೆಂದು ಮನೆ ಹತ್ತಿರ ಹೋದರೆ ಕಲಬುರ್ಗಿ ಹೊರಗೆ ಬರಲೇ ಇಲ್ಲ. ಏನಾಗಿದೆ ಎಂದು ತಿಳಿಯಲು ನಾನೇ ವಿದ್ಯಾರ್ಥಿಯಂತೆ ಕಲಬುರ್ಗಿ ಮನೆಗೆ ತೆರಳಿದೆ. ‘ಯಾಕ್ ಸರ್, ತುಂಬ ದಿನಗಳಿಂದ ಯೂನಿವರ್ಸಿಟಿ ಕಡೆ ಕಾಣಿಸ್ತಿಲ್ಲ’ ಎಂದು ಪ್ರಶ್ನಿಸಿದ್ದೆ. ‘ಮೈಗೆ ಹುಷಾರಿಲ್ಲ. ಒಬ್ಬರೇ ಓಡಾಡಲು ಆಗುತ್ತಿಲ್ಲ’ ಎಂದಿದ್ದರು. ಹೀಗೆ, 15 ನಿಮಿಷ ಮಾತನಾಡಿಸಿ ಬಂದಿದ್ದೆ. ಕೊನೆಗೆ ಕಾಳೆ ಸೂಚನೆಯಂತೆ ಆ.30ರಂದು ಹಣೆಗೇ ಗುಂಡು ಹೊಡೆದು ಸಮಾಪ್ತಿ ಮಾಡಿದ್ದೆವು’ ಎಂದು ಮಿಸ್ಕಿನ್ ನೀಡಿದ್ದಾನೆ ಎನ್ನಲಾದ ಹೇಳಿಕೆ ದೋಷಾರೋಪ ಪಟ್ಟಿಯಲ್ಲಿದೆ.
ಹುಬ್ಬಳ್ಳಿಯಲ್ಲೇ ‘ಸಂಗಮ’
‘ಏಳೆಂಟು ವರ್ಷಗಳ ಹಿಂದೆ ಹುಬ್ಬಳ್ಳಿಯಲ್ಲಿ ‘ಹಿಂದೂ ಶಕ್ತಿ ಸಂಗಮ’ ಕಾರ್ಯಕ್ರಮವಿತ್ತು. ಅಲ್ಲಿ ನನಗೆ ಯಡವೆ ಸಿಕ್ಕ. ಹಳೆಹುಬ್ಬಳ್ಳಿಯ ಮನೆಯೊಂದರಲ್ಲಿ 20–25 ಹಿಂದೂ ಹುಡುಗರನ್ನು ಒಟ್ಟುಗೂಡಿಸಿದ್ದ ಆತ, ಲವ್ ಜಿಹಾದ್, ಮತಾಂತರ, ಗೋಹತ್ಯೆ ಕುರಿತಾದ ಸಿ.ಡಿ ಹಾಕಿ ಅವರಿಗೆ ತೋರಿಸುತ್ತಿದ್ದ. ಅದರಿಂದ ಪ್ರಚೋದನೆಗೊಂಡು ನಾನೂ ‘ದುರ್ಜನರ ಸಮಾಪ್ತಿ’ಯ ಜಾಲವನ್ನು ಸೇರಿಕೊಂಡೆ’ಎಂದು ಮಿಸ್ಕಿನ್ ಹೇಳಿದ್ದಾನೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.