ADVERTISEMENT

ಹಲೋ.... ಇವರಿಗೆ ಮತ ಕೊಡಿ!

ಮತದಾರರ ಮೊಬೈಲ್‌ಗೆ ಕರೆ; ಕ್ಷೇತ್ರ– ಮೊಬೈಲ್‌ ಸಂಖ್ಯೆ ದೊರೆತಿದ್ದು ಹೇಗೆ?

ಪ್ರಜಾವಾಣಿ ವಿಶೇಷ
Published 1 ಮೇ 2023, 22:14 IST
Last Updated 1 ಮೇ 2023, 22:14 IST
   

ಆರ್‌. ಮಂಜುನಾಥ್‌

ಬೆಂಗಳೂರು: ಹಲೋ... ನಾವು ....‌ಕ್ಷೇತ್ರದ ಅಭ್ಯರ್ಥಿ ಕಚೇರಿಯಿಂದ ಮಾತನಾಡುತ್ತಿದ್ದೇವೆ. ....‌ಇವರಿಗೆ ಮತ ನೀಡಿ. ದಯವಿಟ್ಟು ಅವರಿಗೆ ಜಯ ತಂದು ಕೊಡಿ...

ಬೆಂಗಳೂರಿನ ಬಹುತೇಕ ಎಲ್ಲ ವಿಧಾನಸಭೆ ಕ್ಷೇತ್ರಗಳಲ್ಲಿನ ಮತದಾರರ ಮೊಬೈಲ್‌ಗಳಿಗೆ ಇಂತಹ ಕರೆಗಳು ಬರುತ್ತಿವೆ. ಮನೆಯಲ್ಲಿರುವ ಎಲ್ಲರ ಮೊಬೈಲ್‌ ಸಂಖ್ಯೆಗೂ ಅದೇ ಕ್ಷೇತ್ರದ ಅಭ್ಯರ್ಥಿಗಳ ಕಡೆಯವರು ಕರೆ ಮಾಡುತ್ತಿದ್ದಾರೆ. ಮತದಾರರ ಪಟ್ಟಿಯಿಂದ ಮತದಾರರ ಕ್ಷೇತ್ರ ಗೊತ್ತಾಗುತ್ತದೆ ನಿಜ. ಆದರೆ, ಅವರ ಮೊಬೈಲ್‌ ಸಂಖ್ಯೆ ಸಿಕ್ಕಿರುವುದಾದರೂ ಹೇಗೆ? ಈ ಪ್ರಶ್ನೆಗೆ, ಮತದಾರರ ಮಾಹಿತಿ  ಸಂಗ್ರಹಿಸಿಟ್ಟುಕೊಂಡಿರುವ ಚುನಾವಣೆ ಆಯೋಗದಲ್ಲೂ ಉತ್ತರವಿಲ್ಲ.

ADVERTISEMENT

ಮತದಾರರ ಗುರುತಿನ ಚೀಟಿಯಲ್ಲಿ (ಎಪಿಕ್‌) ಹೆಸರು, ಜನ್ಮ ದಿನಾಂಕ, ವಿಳಾಸ ಇರುತ್ತದೆ. ಮೊಬೈಲ್‌ ಸಂಖ್ಯೆ ಇರುವುದಿಲ್ಲ. ಇಷ್ಟಾದರೂ ಅಭ್ಯರ್ಥಿಗಳ ಕಡೆಯವರಿಗೆ ಮೊಬೈಲ್‌ ಸಂಖ್ಯೆ ದೊರೆತಿರುವುದಾದರೂ ಹೇಗೆ? ಆಧಾರ್‌ ಲಿಂಕ್‌ ಮಾಡಲಾಗಿರುವುದರಿಂದ ಮೊಬೈಲ್‌ ಸಂಖ್ಯೆ ಸಂಗ್ರಹವಾಗುತ್ತಿದೆ. ಆದರೆ ಚುನಾವಣೆ ಆಯೋಗದಲ್ಲಿ ಗೋಪ್ಯವಾಗಿ ಇರಬೇಕಾದ ಈ ಮಾಹಿತಿ ಅಭ್ಯರ್ಥಿಗಳ ಕೈಗೆ ಸಿಕ್ಕಿದ್ದು ಹೇಗೆ ಎಂಬುದರ ತನಿಖೆಯೂ ಆರಂಭವಾಗಿದೆ ಎಂದು ಚುನಾವಣೆ ಆಯೋಗದ ಮೂಲಗಳು ತಿಳಿಸಿವೆ. ಆದರೆ, ಚುನಾವಣೆ ಮುಗಿಯುವವರೆಗೆ ತನಿಖೆ ಮುಗಿಯುವ ಲಕ್ಷಣವಿಲ್ಲ. ನಂತರ ಮುಂದುವರಿಯುವ ಭರವಸೆ ಇಲ್ಲ ಎನ್ನಲಾಗುತ್ತಿದೆ.

‘ಕರೆ ಮಾಡಿದ ವ್ಯಕ್ತಿ ನಾನು –––ಪಕ್ಷದ ಅಭ್ಯರ್ಥಿ ಕಡೆಯವನು. ನೀವು –––ಕ್ಷೇತ್ರದ ಈ ಅಭ್ಯರ್ಥಿಗೆ ಮತ ಹಾಕಬೇಕು ಎಂದು ಮನವಿ ಮಾಡಿಕೊಂಡನು. ನನ್ನ ಮಾಹಿತಿ ನಿಮಗೆಲ್ಲಿ ಸಿಕ್ಕಿತ್ತು ಎಂದರೆ ನಮ್ಮಲ್ಲಿ ಡೇಟಾ ಸಂಗ್ರಹ ಇದೆ ಸರ್‌, ಅದನ್ನು ಪಡೆದುಕೊಂಡಿದ್ದೇವೆ ಎನ್ನುತ್ತಾರೆ’ ಎಂದು ರಾಜರಾಜೇಶ್ವರಿನಗರದ ನಿವಾಸಿ ಶ್ರೀನಿವಾಸ್‌ ಹೇಳಿದರು.

‘ನನ್ನ ಮೊಬೈಲ್‌ ಸಂಖ್ಯೆ ನಿಮಗೆ ಹೇಗೆ ಸಿಕ್ಕಿತು? ಮಾಹಿತಿ ಕಳವು ಮಾಡಿದ್ದೀರಲ್ಲ ಎಂದು ದಬಾಯಿಸಿದರೆ, ಸರ್ಕಾರವೇ ಮಾಹಿತಿ ಕೊಟ್ಟಿದೆ ಎಂದರು. ಅದ್ಹೇಗೆ, ಯಾರು ಕೊಟ್ಟರು ಹೇಳಿ ಎಂದಾಗ, ತಬ್ಬಿಬ್ಬಾದ ಆ ಕರೆ ಮಾಡಿದ ಯುವತಿ, ನಾನು ಅಭ್ಯರ್ಥಿ ಕಚೇರಿಯಿಂದ ಕರೆ ಮಾಡುತ್ತಿದ್ದೇವೆ ಎಂದು ಕರೆ ಕಟ್‌ ಮಾಡಿದರು’ ಎಂದು ಕೆ.ಆರ್‌. ಪುರದ ಮಹೇಶ್ವರಿ ತಿಳಿಸಿದರು.

‘ನಮಸ್ಕಾರ, ನಿಮ್ಮ –––ಕ್ಷೇತ್ರದ ಅಭ್ಯರ್ಥಿ ಮಾತನಾಡುತ್ತಾರೆ ಇರಿ. ನಮಸ್ಕಾರ –––ನನಗೆ ಮತ ನೀಡಿ’ ಎಂದೂ ಕರೆಗಳು ಬರುತ್ತಿವೆ. ಇವೆಲ್ಲ ಕಾಲ್‌ ಸೆಂಟರ್‌ಗಳ ಸೃಷ್ಟಿ. ಅಭ್ಯರ್ಥಿಗಳು ನೇರವಾಗಿ ಮಾತಾಡುವುದಿಲ್ಲ. ರೆಕಾರ್ಡ್‌ ಮಾಡಿರುವ ಧ್ವನಿಯನ್ನು ಕೇಳಿಸಲಾಗುತ್ತಿದೆ.

ಹೀಗೆ ಇಂತಹ ಕರೆಗಳು ಒಂದೆರಡು ಕ್ಷೇತ್ರಗಳಿಗೆ, ಒಂದೇ ಪಕ್ಷದ ಅಭ್ಯರ್ಥಿಗಳಿಗೆ ಸೀಮಿತವಾಗಿಲ್ಲ. ಎಲ್ಲ ಪ್ರಮುಖ ಪಕ್ಷಗಳ ಅಭ್ಯರ್ಥಿಗಳಿಂದಲೂ ಆಯಾ ಕ್ಷೇತ್ರ ಮತದಾರರ ಮೊಬೈಲ್‌ಗೆ ಕರೆಗಳು ಹೋಗುತ್ತಿವೆ. ಚುನಾವಣೆ ಆಯೋಗದಲ್ಲಿ ಗೋಪ್ಯವಾಗಿರಬೇಕಾದ ಮಾಹಿತಿಗಳೂ ಬಹಿರಂಗವಾಗಿವೆ. ಇದು ಮಾಹಿತಿ ಕಳವು ಅಲ್ಲದೆ ಮತ್ತೇನು ಅಲ್ಲ ಎಂದು ದೂರಲಾಗುತ್ತಿದೆ.

‘ಅಭ್ಯರ್ಥಿಗಳ ಕಡೆಯವರು ಅಥವಾ ಕೆಲವು ಖಾಸಗಿ ಸಂಸ್ಥೆಯವರು ಅಭ್ಯರ್ಥಿಗಳಿಗಾಗಿ ಮನೆ ಮನೆಗೆ ತೆರಳಿ ಮಾಹಿತಿ ಸಂಗ್ರಹಿಸಿದ್ದಾರೆ. ಅವರ ಮೊಬೈಲ್‌ ಸಂಖ್ಯೆ ಆಗ ದೊರೆತಿರಬಹುದು’ ಎಂದು ಕೆಲವರು ಹೇಳುತ್ತಾರೆ. ಮನೆಗೆ ಮಾಹಿತಿ ಸಂಗ್ರಹಿಸಿದಾಗ ಒಬ್ಬರ ಮೊಬೈಲ್‌ ಸಂಖ್ಯೆ ತೆಗೆದುಕೊಳ್ಳುತ್ತಾರೆ. ಆದರೆ, ಇದೀಗ ಮನೆಯಲ್ಲಿರುವ ನಾಲ್ಕಾರು ಜನಕ್ಕೂ ಪ್ರತ್ಯೇಕವಾಗಿ ಅವರ ಮೊಬೈಲ್‌ ಸಂಖ್ಯೆಗೇ ಕರೆ ಬರುತ್ತಿರುವುದು ಹೇಗೆ ಎಂಬುದರ ಬಗ್ಗೆ ವಿವರಣೆ ಸಿಗುತ್ತಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.