ADVERTISEMENT

ರೇಣುಕಾಸ್ವಾಮಿಗೆ ಸಾವು ತಂದ ಮೊಬೈಲ್‌ ಗೀಳು

ಅತಿಯಾದ ಅಭಿಮಾನ, ಮೆಸೇಜ್‌ ಕಳುಹಿಸುವ ಅಭ್ಯಾಸ; ಬೆಚ್ಚಿಬೀಳಿಸಿದ ಘಟನೆ

​ಪ್ರಜಾವಾಣಿ ವಾರ್ತೆ
Published 12 ಜೂನ್ 2024, 7:00 IST
Last Updated 12 ಜೂನ್ 2024, 7:00 IST
ಕೊಲೆಯಾದ ರೇಣುಕಾಸ್ವಾಮಿ
ಕೊಲೆಯಾದ ರೇಣುಕಾಸ್ವಾಮಿ   

ಚಿತ್ರದುರ್ಗ: ಖಾಸಗಿ ಫಾರ್ಮಾದಲ್ಲಿ ಕೆಲಸ ಮಾಡುತ್ತಿದ್ದ ರೇಣುಕಾಸ್ವಾಮಿ ಕೊಲೆ ಪ್ರಕರಣ ನಗರದ ಜನರನ್ನು ಬೆಚ್ಚಿ ಬೀಳಿಸಿದೆ. ಚಿತ್ರನಟ ದರ್ಶನ್‌ ಮೇಲಿನ ಅತಿಯಾದ ಅಭಿಮಾನ, ತೀವ್ರವಾದ ಮೊಬೈಲ್‌ ಗೀಳು, ಕೆಟ್ಟ ಸಂದೇಶ ಕಳುಹಿಸುವ ಚಾಳಿ ರೇಣುಕಾಸ್ವಾಮಿಗೆ ಸಾವು ತಂದಿಟ್ಟಿದೆ.

ತಾನು ಮೆಚ್ಚಿಕೊಂಡಿದ್ದ ನಟ ಹಾಗೂ ಅವರ ಸಹಚರರಿಂದಲೇ ಕೊಲೆಯಾಗಿದೆ ಎಂಬ ಆರೋಪ ಬಂದಿರುವುದು ವಿಪ‍ರ್ಯಾಸ. ದರ್ಶನ್‌ ಹಾಗೂ ಪವಿತ್ರಾ ಗೌಡ ಅವರ ಗೆಳೆತನದ ವಿಷಯ ಹಲವು ತಿಂಗಳುಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿತ್ತು. ಈ ವಿಷಯ ಪವಿತ್ರಾ ಗೌಡ ಹಾಗೂ ದರ್ಶನ್‌ ಪತ್ನಿ ವಿಜಯಲಕ್ಷ್ಮಿ ನಡುವೆ ಜಟಾ‍ಪಟಿಗೂ ಕಾರಣವಾಗಿತ್ತು.

ಸದಾ ಮೊಬೈಲ್‌ ಫೋನ್‌ ಸಹವಾಸ, ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯನಾಗಿದ್ದ ರೇಣುಕಾಸ್ವಾಮಿ ಜಾಲತಾಣಗಳಲ್ಲಿ ಪವಿತ್ರಾಗೌಡ ಅವರಿಗೆ ಕೀಳುಮಟ್ಟದ ಸಂದೇಶ ಕಳುಹಿಸುತ್ತಿದ್ದರು ಎಂಬ ಆರೋಪ ಕೇಳಿಬಂದಿದೆ. ಏಕಾಂಗಿಯಾಗಿ ಇರುತ್ತಿದ್ದ ಅವರು ಸಂಬಂಧವೇ ಇಲ್ಲದವರಿಗೆ ಪ್ರತಿಕ್ರಿಯಿಸಿ ಅಮಾನವೀಯವಾಗಿ ಕೊಲೆಯಾದ ಘಟನೆ ಸ್ಥಳೀಯರಲ್ಲಿ ಆಶ್ಚರ್ಯ ಸೃಷ್ಟಿಸಿದೆ.

ADVERTISEMENT

ಸಮಾಜದ ಖಂಡನೆ:

ರೇಣುಕಾಸ್ವಾಮಿ ಕೊಲೆಗೆ ವೀರಶೈವ ಲಿಂಗಾಯತ ಹಾಗೂ ಜಂಗಮ ಸಮಾಜದ ಮುಖಂಡರು ತೀವ್ರ ನೋವು ವ್ಯಕ್ತಪಡಿಸಿದ್ದಾರೆ. ಸಮಾಜದ ಮುಖಂಡರಾದ ಎಸ್.ಷಣ್ಮುಖಪ್ಪ ಮಾತನಾಡಿ ‘ರೇಣುಕಾಸ್ವಾಮಿ ಹಾಗೂ ಅವರ ತಂದೆ ಇಬ್ಬರೂ ಸೌಮ್ಯ ಸ್ವಭಾವದವರು. ಅವರ ಮನೆಗೆ ಪಂಚಪೀಠಗಳ ಮಠಾಧೀಶರು ಆಗಾಗ ಬಂದು ಹೋಗುತ್ತಿದ್ದರು. ಅವರ ಮನೆಯ ಮೊದಲ ಮಹಡಿ ಮಠಾಧೀಶರ ವಾಸ್ತವ್ಯಕ್ಕೆ ಸೀಮಿತವಾಗಿತ್ತು‘ ಎಂದು ಸ್ಮರಿಸಿದರು.

‘ರೇಣುಕಾಸ್ವಾಮಿಯನ್ನು ಚಿಕ್ಕ ಮಗುವಿನಿಂದಲೂ ನೋಡಿದ್ದೇನೆ. ಇತ್ತೀಚೆಗೆ ಆತನ ಪತ್ನಿಯ ಸೀಮಂತ ಕಾರ್ಯ ಆಗಿದೆ. ಯಾರೇ ಈ ಕೊಲೆ ಮಾಡಿದ್ದರೂ ಶಿಕ್ಷೆ ಆಗಬೇಕು. ಸಮಗ್ರ ತನಿಖೆ ನಡೆಯಬೇಕು’ ಎಂದು ಒತ್ತಾಯಿಸಿದ್ದಾರೆ.

ಜಂಗಮ ಸಮಾಜದ ಮುಖಂಡರಾದ ಷಡಾಕ್ಷರಯ್ಯ ಮಾತನಾಡಿ, ‘ರೇಣುಕಾಸ್ವಾಮಿಯನ್ನು ಶನಿವಾರದಿಂದಲೇ ಎಲ್ಲ ಕಡೆ ಹುಡುಕಾಡಿದ್ದೇವೆ. ಆದರೆ, ಕೊಲೆಯಾಗಿರುವುದು ದುರ್ದೈವ. ಸಾತ್ವಿಕ ಸ್ವಭಾವದ ವ್ಯಕ್ತಿ. ಮದುವೆಯಾಗಿ ಒಂದು ವರ್ಷ ಆಗಿದೆ. ಪತ್ನಿ ಐದು ತಿಂಗಳ ಗರ್ಭಿಣಿ. ಯಾರೇ ಹತ್ಯೆ ಮಾಡಿದ್ದರೂ ಜಂಗಮ ಸಮಾಜ ಇದನ್ನು ಖಂಡಿಸುತ್ತದೆ. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು’ ಎಂದರು.

‘ರೇಣುಕಾಸ್ವಾಮಿ ಅಶ್ಲೀಲ ಸಂದೇಶಗಳನ್ನು ಕಳಿಸಿದ್ದರೆ ಕರೆದು ಬೈದು ಬುದ್ದಿ ಹೇಳಬಹುದಿತ್ತು. ಅವರ ತಂದೆ– ತಾಯಿಗೆ ಈ ವಿಚಾರ ಹೇಳಬಹುದಿತ್ತು. ಕಾನೂನು ಕ್ರಮ ತೆಗೆದುಕೊಳ್ಳಲು ಅವಕಾಶವಿತ್ತು. ಆದರೆ, ಕೊಲೆ ಮಾಡಿರುವುದು ಅನ್ಯಾಯ’ ಎಂದು ಬೇಸರ ವ್ಯಕ್ತಪಡಿಸಿದರು.

ಆರೋಪಿ ರಘು ಪತ್ನಿ ಪ್ರತಿಕ್ರಿಯೆ:

ರೇಣುಕಾಸ್ವಾಮಿಯನ್ನು ಅಪಹರಿಸಿದ್ದಾರೆ ಎಂಬ ಆರೋಪ ಹೊತ್ತಿರುವ ಹಾಗೂ ಕೊಲೆ ಪ್ರಕರಣದ ಆರೋಪಿಯೂ ಆಗಿರುವ ಅಖಿಲ ಕರ್ನಾಟಕ ದರ್ಶನ್‌ ತೂಗುದೀಪ ಸೇನಾ ಜಿಲ್ಲಾ ಘಟಕದ ಅಧ್ಯಕ್ಷ ರಘು ಪತ್ನಿ ಘಟನೆ ಕುರಿತು ಮಾತನಾಡಿದ್ದಾರೆ.

‘ವಾರದ ಹಿಂದೆ ಫೋನ್‌ನಲ್ಲಿ ದರ್ಶನ್‌ ಅವರ ಜೊತೆ ನನ್ನ ಪತಿ ಮಾತನಾಡುತ್ತಿದ್ದರು. ಅಣ್ಣ ಆ ಕೆಲಸ ನನ್ನ ಕೈಯಲ್ಲಿ ಆಗದು ಎನ್ನುತ್ತಿದ್ದರು. ಅದರೆ ಅದು ಯಾವ ಕೆಲಸ ಎಂಬ ಬಗ್ಗೆ ಅನುಮಾನ ಕಾಡುತ್ತಿದೆ. ಮಗಳ ಮೂರನೇ ವರ್ಷದ ಜನ್ಮ ದಿನದಂದು ದರ್ಶನ್ ನಮ್ಮನ್ನು ಬೆಂಗಳೂರಿಗೆ ಕರೆಸಿಕೊಂಡಿದ್ದರು, ಬಳಿಕ ನಾವು ಭೇಟಿಯಾಗಿಲ್ಲ. ನಮ್ಮ ಪತಿಗೆ ಕರೆ ಮಾಡಿ ಮಾತನಾಡುತ್ತಿದ್ದರು. ಈಚೆಗೆ ಅವರ ಬಾಡಿಗಾರ್ಡ್‌ ಕರೆ ಮಾಡಿ ಮಾತನಾಡಿದ್ದರು’ ಎಂದರು.

‘ಶನಿವಾರ ಮಧ್ಯಾಹ್ನ ಕರೆ ಮಾಡಿದಾಗ ಬೆಂಗಳೂರಿಗೆ ದರ್ಶನ್ ಮನೆಗೆ ಹೋಗುತ್ತಿದ್ದೇನೆ ಎಂದು ಹೇಳಿದ್ದರು. ಪುನಃ ಸಂಜೆ ಕರೆ ಮಾಡಿದಾಗ ನಾನು ಕೆಲಸದಲ್ಲಿ ಇದ್ದೇನೆ ಎಂದು ಕರೆ ಸ್ಥಗಿತಗೊಳಿಸಿದರು. ನಂತರ ಅವರ ಫೋನ್‌ ಸ್ಥಗಿತಗೊಂಡಿತ್ತು’ ಎಂದರು. ನಗರದ ತಮಟಕಲ್ಲು ರಸ್ತೆಯ ನಿವಾಸದಲ್ಲಿ ಆತಂಕದ ಛಾಯೆ ಮೂಡಿತ್ತು.

ಘಟನೆ ಖಂಡಿಸಿ ಇಂದು ಪ್ರತಿಭಟನೆ

ರೇಣುಕಾಸ್ವಾಮಿ ಕೊಲೆ ಖಂಡಿಸಿ‌ ವಿವಿಧ ಸಂಘಟನೆಗಳು ಬುಧವಾರ ಬೆಳಿಗ್ಗೆ 11 ಗಂಟೆಗೆ ನಗರದಲ್ಲಿ ಪ್ರತಿಭಟನೆಗೆ ಕರೆ ಕೊಟ್ಟಿವೆ.

ನಗರದ ನೀಲಕಂಠೇಶ್ವರ ಸ್ವಾಮಿ ದೇವಸ್ಥಾನದ ಆವರಣದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನೆ ಸಾಗಲಿದೆ. ವೀರಶೈವ ಸಮಾಜ, ವೀರಶೈವ ಲಿಂಗಾಯತ ಮಹಾಸಭಾ, ಜಂಗಮ ಸಮುದಾಯ ಸೇರಿದಂತೆ ಹಲವು ಸಮುದಾಯಗಳು ಪ್ರತಿಭಟನೆಯಲ್ಲಿ ಭಾಗಿಯಾಗುತ್ತಿವೆ.

‘ರೇಣುಕಾಸ್ವಾಮಿ ಮುಗ್ಧನಾಗಿದ್ದು, ಅವರ ಕೊಲೆಗೆ ನ್ಯಾಯ ಸಿಗಬೇಕು. ಮುಂದೆ ಇಂತಹ ಘಟನೆಗಳು ನಡೆಯಬಾರದು. ಕೊಲೆ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು’ ಎಂದು ಸಂಘಟನೆಗಳ ಮುಖಂಡರು ಒತ್ತಾಯಿಸಿದ್ದಾರೆ.

ಮನುಷ್ಯತ್ವದ ಕೊಲೆ:

ಇದು ಕೇವಲ ಒಬ್ಬ ವ್ಯಕ್ತಿಯ ಕೊಲೆಯಲ್ಲ. ಬದಲಿಗೆ, ಮಾನವೀಯತೆ, ಮನುಷ್ಯತ್ವದ ಕೊಲೆ. ಕಾನೂನು ಕೈಗೆತ್ತಿಕೊಂಡು ಕೃತ್ಯ ಎಸಗಿದ್ದಾರೆ. ಪ್ರಕರಣದಲ್ಲಿ ಭಾಗಿಯಾದವರಿಗೆ ತಕ್ಕ ಶಿಕ್ಷೆ ಆಗಬೇಕಿದೆ. ನ್ಯಾಯಯುತ ತನಿಖೆ ಆಗಬೇಕು, ಅನ್ಯಾಯಕ್ಕೆ ಅವಕಾಶ ನೀಡಬಾರದು ಎಂದು ಮಾಜಿ ಶಾಸಕ ಎಸ್‌.ಕೆ.ಬಸವರಾಜನ್‌ ಪ್ರತಿಕ್ರಿಯಿಸಿದ್ದಾರೆ.

ರಾತ್ರಿಯೇ ಅಂತ್ಯಕ್ರಿಯೆ

ಬೆಂಗಳೂರಿನಲ್ಲಿ ರೇಣುಕಾಸ್ವಾಮಿ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬ ಸದಸ್ಯರಿಗೆ ಹಸ್ತಾಂತರ ಮಾಡಲಾಯಿತು. ರಾತ್ರಿ ಮೃತದೇಹ ನಗರ ತಲುಪಿದ ಕೆಲವೇ ಹೊತ್ತಿನಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು. ಅವರ ಮೃತದೇಹ ನೋಡಲು ಮನೆಯ ಬಳಿ ಸಾವಿರಾರು ಜನರು ಸೇರಿದ್ದರು.

ಕೊಂದವರಿಗೂ ಸಾವು ಬರಲಿ: ಕಣ್ಣೀರು

ಚಿತ್ರದುರ್ಗ: ‘ನನ್ನ ಮಗನನ್ನು ಕೊಂದವರಿಗೂ ಸಾವು ಬರಲಿ, ನನ್ನ ಮಗ ವಿಲವಿಲ ಒದ್ದಾಡಿ ಸತ್ತಿದ್ದಾನೆ. ಅವನಂತೆಯೇ ಇವರೂ ಸಾಯಬೇಕು. ಇನ್ನೂ 15 ದಿನದಲ್ಲಿ ಸಾಯಬೇಕು’ ಎಂದು ಕೊಲೆಯಾದ ರೇಣುಕಾಸ್ವಾಮಿ ತಾಯಿ ರತ್ನಪ್ರಭಾ ಆಕ್ರಂದನ ವ್ಯಕ್ತಪಡಿಸಿದರು.

‘ನನ್ನ ಮಗನಿಗೆ ಬಂದ ಪರಿಸ್ಥಿತಿ ಅವರಿಗೂ ಬರಬೇಕು. ಯಾರನ್ನೂ ಬಿಡಬೇಡಿ. ನನ್ನ ಮಗನ ಸ್ಥಿತಿ ಅವರಿಗೂ ಬರಬೇಕು. ನನ್ನ ಸೊಸೆ ಗಂಡನಿಗಾಗಿ ಕಾಯುತ್ತಿದ್ದಾಳೆ. ಆ ಪಾಪಿಗಳಿಗೆ ತಕ್ಕ ಶಿಕ್ಷೆ ಆಗಬೇಕು’ ಎಂದರು.

‘ಮಾನವೀಯತೆ ಇಲ್ಲದವರು ಇವರು ಮನುಷ್ಯರಾ, ಮನುಷ್ಯತ್ವ ಇಲ್ಲ. ಮಾನವೀಯತೆ ಇಲ್ಲದ ಇವರು ದೊಡ್ಡ ಮನುಷ್ಯರು, ಸತ್ತು ಹೋದ ನನ್ನ ಮಗ ಬರುತ್ತಾನಾ, ಇವರು ಜೀವ ತರುತ್ತಾರಾ’ ಎಂದು ತಂದೆ ಶಿವಣ್ಣ ಗೌಡರ್‌ ಕಣ್ಣೀರಿಟ್ಟರು.

ಚಿತ್ರುದುರ್ಗದ ವಿಆರ್‌ಎಸ್‌ ಬಡಾವಣೆಯ ನಿವಾಸಕ್ಕೆ ರೇಣುಕಾಸ್ವಾಮಿ ಮೃತದೇಹ ಬಂದಾಗ ಸೇರಿದ್ದ ಜನಸ್ತೋಮ


ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.