ADVERTISEMENT

‘ಮೋದಿ ಮತ್ತೊಮ್ಮೆ’: ಗೋಡೆ ಬರಹ ಅಭಿಯಾನಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 15 ಜನವರಿ 2024, 14:04 IST
Last Updated 15 ಜನವರಿ 2024, 14:04 IST
ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಸೋಮವಾರ ಶೇಷಾದ್ರಿಪುರದ ಮಾರುತಿ ಆಸ್ಪತ್ರೆಯ ಬಳಿ ಗೋಡೆ ಬರಹ ಅಭಿಯಾನಕ್ಕೆ ಚಾಲನೆ ನೀಡಿದರು. ಸಂಸದ ಪಿ.ಸಿ ಮೋಹನ್, ರಾಜ್ಯ ಪ್ರಧಾನ ಕಾರ್ಯದರ್ಶಿ ನಂದೀಶ್ ರೆಡ್ಡಿ, ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷ ಸಪ್ತಗಿರಿ ಗೌಡ ಭಾಗವಹಿಸಿದ್ದರು.
ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಸೋಮವಾರ ಶೇಷಾದ್ರಿಪುರದ ಮಾರುತಿ ಆಸ್ಪತ್ರೆಯ ಬಳಿ ಗೋಡೆ ಬರಹ ಅಭಿಯಾನಕ್ಕೆ ಚಾಲನೆ ನೀಡಿದರು. ಸಂಸದ ಪಿ.ಸಿ ಮೋಹನ್, ರಾಜ್ಯ ಪ್ರಧಾನ ಕಾರ್ಯದರ್ಶಿ ನಂದೀಶ್ ರೆಡ್ಡಿ, ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷ ಸಪ್ತಗಿರಿ ಗೌಡ ಭಾಗವಹಿಸಿದ್ದರು.   

ಬೆಂಗಳೂರು: ‘2024ಕ್ಕೆ ಮತ್ತೊಮ್ಮೆ ಮೋದಿ’ ಎಂಬ ಲೋಕಸಭಾ ಚುನಾವಣೆಯ ಗೋಡೆ ಬರಹ ಅಭಿಯಾನಕ್ಕೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಸೋಮವಾರ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ವಿಜಯೇಂದ್ರ, ‘2047ಕ್ಕೆ ವಿಕಸಿತ ಭಾರತದ ಸಂಕಲ್ಪವನ್ನು ಪ್ರಧಾನಿ ಮೋದಿಯವರು ಹೊಂದಿದ್ದಾರೆ. ಅದನ್ನು ಈಡೇರಿಸಲು ಮೋದಿ ಸಂಕಲ್ಪಕ್ಕೆ ಜನತೆ ಭಾರಿ ಬೆಂಬಲ ನೀಡುತ್ತಿದ್ದಾರೆ’ ಎಂದರು.

‘ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಸೂಚನೆಯ ಮೇರೆಗೆ ಗೋಡೆ ಬರಹ ಅಭಿಯಾನ ಆರಂಭಿಸಿದ್ದೇವೆ. ವಿಕಸಿತ ಭಾರತದ ಸಂಕಲ್ಪದ ಮೂಲಕ ಮೋದಿ ಅವರ ಜನಪರ ಯೋಜನೆಗಳು ಜನರನ್ನು ತಲುಪುತ್ತಿವೆ. ರಾಜ್ಯದ ಜನತೆ ಕೂಡಾ ಬಿಜೆಪಿ ಮತ್ತು ಮೋದಿ ಅವರ ಮೇಲಿನ ಗೌರವದಿಂದ ಬಹಳ ಉತ್ಸಾಹದಿಂದ ಪಾಲ್ಗೊಳ್ಳುತ್ತಿದ್ದಾರೆ’ ಎಂದು ವಿವರಿಸಿದರು.

ADVERTISEMENT

ಹಾವೇರಿಯಲ್ಲಿ ಮಹಿಳೆ ಮೇಲೆ ಅತ್ಯಾಚಾರದ ಪ್ರಕರಣಕ್ಕೆ ಸಂಬಂಧಿಸಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ನಾನು ಈ ವಿಷಯದಲ್ಲಿ ರಾಜಕೀಯ ಮಾಡಲು ಬಯಸುವುದಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಪದೇ ಪದೇ ಈ ರೀತಿಯ ಘಟನೆಗಳು ನಡೆಯುತ್ತಿವೆ. ಬೆಳಗಾವಿ, ಹಾವೇರಿಯಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯದ ಘಟನೆಗಳು ನಾಚಿಕೆಗೇಡಿನ ಸಂಗತಿ’ ಎಂದರು.

‘ರಾಜ್ಯದಲ್ಲಿ ಮಹಿಳೆಯರಿಗೆ ಸುರಕ್ಷತೆ ಇಲ್ಲ. ಇಂತಹ ಗಂಭೀರ ವಿಷಯಗಳನ್ನು ರಾಜ್ಯ ಸರ್ಕಾರ ಹಗುರವಾಗಿ ತೆಗೆದುಕೊಂಡಿದೆ. ಪೊಲೀಸರು ರಾಜ್ಯ ಕಾಂಗ್ರೆಸ್‌ ಸರ್ಕಾರದ ತಾಳಕ್ಕೆ ತಕ್ಕಂತೆ ಕುಣಿಯುತ್ತಿರುವುದು ದುರ್ದೈವ. ಈ ಘಟನೆಯ ತನಿಖೆಗೆ ವಿಶೇಷ ತನಿಖಾ ತಂಡ ರಚಿಸಲು ಸರ್ಕಾರವನ್ನು ಒತ್ತಾಯಿಸಿದ್ದೇವೆ’ ಎಂದು ಹೇಳಿದರು.

3 ಕಷ್ಟಕರ ಕ್ಷೇತ್ರ ಗೆಲ್ಲಿಸಿಕೊಂಡು ಬರುತ್ತೇನೆ: ಸೋಮಣ್ಣ

‘ಕಷ್ಟಕರವಾದ ಯಾವುದೇ ಮೂರು ಲೋಕಸಭಾ ಕ್ಷೇತ್ರಗಳ ಉಸ್ತುವಾರಿ ಕೊಟ್ಟರೂ ಸರಿ ಅವುಗಳನ್ನು ಗೆಲ್ಲಿಸಿಕೊಂಡು ಬರುತ್ತೇನೆಂದು ವರಿಷ್ಠರಿಗೆ ಹೇಳಿದ್ದೇನೆ’ ಎಂದು ಮಾಜಿ ಸಚಿವ ವಿ.ಸೋಮಣ್ಣ ತಿಳಿಸಿದರು. ಸೋಮವಾರ ಅವರು ಸುದ್ದಿಗಾರರ ಜತೆ ಮಾತನಾಡಿ ‘ವರಿಷ್ಠರನ್ನು ಶನಿವಾರ ಭೇಟಿ ಮಾಡಿದಾಗ ರಾಜ್ಯಸಭೆಗೆ ಟಿಕೆಟ್‌ ಕೇಳುವುದರ ಜತೆಗೆ ಮೂರು ಲೋಕಸಭಾ ಕ್ಷೇತ್ರಗಳ ಗೆಲ್ಲಿಸಿಕೊಂಡು ಬರುವ ಜವಾಬ್ದಾರಿಯನ್ನೂ ಕೇಳಿದ್ದೇನೆ’ ಎಂದರು. ‘ಕೇಂದ್ರ ಗೃಹ ಸಚಿವ ಅಮಿತ್‌ ಶಾ ಮತ್ತು ಪಕ್ಷದ ಅಧ್ಯಕ್ಷ ಜೆ.ಪಿ.ನಡ್ಡಾ ಜತೆ ಮಾಡಿ ಮಾತುಕತೆ ನಡೆಸಿದೆ. ಐದು ನಿಮಿಷ ಸಮಯ ಕೇಳಿದ್ದೆ. ಆದರೆ ಅವರು ನನ್ನ ಜತೆ ಅರ್ಧ ಗಂಟೆ ಮಾತನಾಡಿದರು. ಇದೀಗ ಎಲ್ಲವೂ ಸುಖಾಂತ್ಯವಾಗಿದೆ. ಒಳ್ಳೆಯತನಕ್ಕೆ ಮತ್ತು ಒಳ್ಳೆಯ ನಡವಳಿಕೆಗೆ ಬೆಲೆ ಇರುತ್ತದೆ ಎಂಬುದಕ್ಕೆ ದೆಹಲಿ ಭೇಟಿಯೇ ಒಂದು ಉದಾಹರಣೆ. ಅಮಿತ್‌ ಶಾ ಅವರು ನನ್ನ ಬಗ್ಗೆ ಸಕಾರಾತ್ಮಕವಾಗಿಯೇ ಇದ್ದರು. ಮುಂದೆ ಒಳ್ಳೆಯ ತೀರ್ಮಾನವನ್ನೇ ತೆಗೆದುಕೊಳ್ಳಲಿದ್ದಾರೆ’ ಎಂದು ಸೋಮಣ್ಣ ವಿಶ್ವಾಸ ವ್ಯಕ್ತಪಡಿಸಿದರು. ‘ಕೆಲಸ ಮಾಡಿ ಮುಂದಿನದು ಚರ್ಚೆ ಮಾಡುತ್ತೇವೆ ಎಂದು ಶಾ ಅವರು ಹೇಳಿದ್ದಾರೆ’ ಎಂದರು.

ಸೋಮಣ್ಣ ಸ್ಪರ್ಧೆಗೆ ಅಭ್ಯಂತರವಿಲ್ಲ. ವಿಜಯೇಂದ್ರ

‘ಸೋಮಣ್ಣ ಅವರು ಹಿರಿಯರು. ಪಕ್ಷಕ್ಕೇ ಅವರದ್ದೇ ಆದ ಕೊಡುಗೆ ಇದೆ. ವಿಧಾನಸಭಾ ಚುನಾವಣೆಯಲ್ಲಿ ಎರಡೂ ಕ್ಷೇತ್ರಗಳಲ್ಲಿ ಗೆಲ್ಲುವ ಭರವಸೆಯಿಂದ ಸ್ಪರ್ಧಿಸಿದ್ದರು. ಅವರ ಸೋಲು ನಮಗೂ ನೋವು ತಂದಿದೆ. ವರಿಷ್ಠರ ಮುಂದೆ ಅವರು ವ್ಯಕ್ತಪಡಿಸಿರುವ ಆಕಾಂಕ್ಷೆ(ರಾಜ್ಯಸಭೆ ಟಿಕೆಟ್‌) ಬಗ್ಗೆ ಮಾತನಾಡುತ್ತೇನೆ.  ಇದಕ್ಕೆ ನಮ್ಮ ಅಭ್ಯಂತರವಿಲ್ಲ. ಲೋಕಸಭೆ ಚುನಾವಣೆ ಸ್ಪರ್ಧೆಯೂ ಸೇರಿ ಯಾವುದೇ ವಿಚಾರವಾದರೂ ಸರಿ ವರಿಷ್ಠರು ಯಾವ ತೀರ್ಮಾನ ತೆಗೆದುಕೊಳ್ಳುತ್ತಾರೋ ಅದೇ ರೀತಿ ನಡೆದುಕೊಳ್ಳುತ್ತೇನೆ’ ಎಂದು ಬಿ.ವೈ.ವಿಜಯೇಂದ್ರ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.