ಬೆಂಗಳೂರು: ಕೇಂದ್ರ ಸರ್ಕಾರದ ನೂತನ ಸಚಿವರಿಗೆ ಇಂದು (ಸೋಮವಾರ) ಖಾತೆ ಹಂಚಿಕೆ ಮಾಡಲಾಗಿದೆ. ಪ್ರಮುಖ ನಾಲ್ವರು ಸಚಿವರು ಗೃಹ, ರಕ್ಷಣೆ, ಹಣಕಾಸು ಹಾಗೂ ವಿದೇಶಾಂಗ ವ್ಯವಹಾರ ಖಾತೆಗಳನ್ನು ಉಳಿಸಿಕೊಂಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಹೊಸ ಎನ್‌ಡಿಎ ಸರ್ಕಾರದಲ್ಲಿ ಹಲವಾರು ಸಚಿವರು ತಮ್ಮ ಹಿಂದಿನ ಖಾತೆಗಳನ್ನು ಉಳಿಸಿಕೊಂಡಿದ್ದಾರೆ. ಜತೆಗೆ, ಜೆಡಿಎಸ್ ಸಂಸದ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆಯನ್ನು ನೀಡಲಾಗಿದೆ.
ಈ ಕುರಿತು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಕುಮಾರಸ್ವಾಮಿ, ‘ಸತತವಾಗಿ 3ನೇ ಅವಧಿಗೆ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಿರುವ ಭಾರತೀಯ ಪ್ರಜಾಸತ್ತಾತ್ಮಕ ಒಕ್ಕೂಟದ (ಎನ್‌ಡಿಎ) ಸರ್ಕಾರ ಸಂಪುಟದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನನಗೆ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಹಂಚಿಕೆ ಮಾಡಿದ್ದು, ಅವರಿಗೆ ನನ್ನ ತುಂಬು ಹೃದಯದ ಧನ್ಯವಾದಗಳು’ ಎಂದು ಬರೆದುಕೊಂಡಿದ್ದಾರೆ.
ಪರಿಚಯ: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಮಗ ಎಚ್.ಡಿ. ಕುಮಾರಸ್ವಾಮಿ, ರಾಜ್ಯದಲ್ಲಿ ಎರಡು ಬಾರಿ ಅಲ್ಪಾವಧಿಗೆ ಮುಖ್ಯಮಂತ್ರಿಯಾಗಿದ್ದರು. ಮೂರನೇ ಬಾರಿ ಸಂಸದರಾಗಿರುವ ಅವರು, ಜೆಡಿಎಸ್ ಪಕ್ಷವು ಎನ್‌ಡಿಎ ಮೈತ್ರಿಕೂಟ ಸೇರಿರುವ ಕಾರಣದಿಂದಾಗಿ ಕೇಂದ್ರ ಸಂಪುಟದ ಸದಸ್ಯರಾಗಿದ್ದಾರೆ. ತಾವು ಗೆಲ್ಲುವುದರ ಜತೆಯಲ್ಲೇ ಒಕ್ಕಲಿಗ ಮತದಾರರ ಪ್ರಾಬಲ್ಯದ ಕ್ಷೇತ್ರಗಳಲ್ಲಿ ಬಿಜೆಪಿಯನ್ನು ಗೆಲುವಿನ ದಡ ಸೇರಿಸಿರುವುದಕ್ಕಾಗಿ ನರೇಂದ್ರ ಮೋದಿಯವರ ಸಂಪುಟದಲ್ಲಿ ಆದ್ಯತೆ ಸಿಕ್ಕಿದೆ. ಒಕ್ಕಲಿಗ ನಾಯಕತ್ವಕ್ಕಾಗಿ ಕುಮಾರಸ್ವಾಮಿ ಮತ್ತು ರಾಜ್ಯದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಧ್ಯೆ ಹಣಾಹಣಿ ಜೋರಾಗಿದೆ. ಈ ಸಂದರ್ಭದಲ್ಲಿ ಕುಮಾರಸ್ವಾಮಿ ಅವರನ್ನು ಕೇಂದ್ರ ಸಚಿವರಾಗಿ ಮಾಡುವುದರ ಹಿಂದೆ ಅವರೇ ಒಕ್ಕಲಿಗ ಸಮುದಾಯದ ನಾಯಕ ಎಂದು ಬಿಂಬಿಸುವ ಲೆಕ್ಕಾಚಾರವೂ ಇದೆ.
* ವಯಸ್ಸು– 65 ವರ್ಷ
* ಜಾತಿ– ಒಕ್ಕಲಿಗ
* ವಿದ್ಯಾರ್ಹತೆ– ಬಿ.ಎಸ್‌ಸಿ
* ಎರಡು ಬಾರಿ ಅಲ್ಪಾವಧಿಗೆ ರಾಜ್ಯದ ಮುಖ್ಯಮಂತ್ರಿ
* ಮೂರು ಬಾರಿ ಸಂಸದ
* ಐದು ಬಾರಿ ಶಾಸಕ
* ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.