ಬೆಂಗಳೂರು: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ವಿರುದ್ಧ ದಾಖಲಾಗಿದ್ದ ಜಾತಿ ನಿಂದನೆ ಪ್ರಕರಣವನ್ನು ಹೈಕೋರ್ಟ್ ವಜಾಗೊಳಿಸಿದೆ.
‘ಈ ಕುರಿತ ಎಫ್‌ಐಆರ್ ಹಾಗೂ ಅಧೀನ ನ್ಯಾಯಾಲಯದಲ್ಲಿನ ವಿಚಾರಣೆ ರದ್ದುಗೊಳಿಸಬೇಕು’ ಎಂದು ಕೋರಿ ಮೋಹನ ಆಳ್ವ ಸೇರಿದಂತೆ ನಾಲ್ವರು ಸಲ್ಲಿಸಿದ್ದ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಅಶೋಕ ಜಿ.ನಿಜಗಣ್ಣವರ ಅವರಿದ್ದ ಏಕಸದಸ್ಯ ನ್ಯಾಯಪೀಠ ಪುರಸ್ಕರಿಸಿದೆ.
‘ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದ ವ್ಯಕ್ತಿಯ ವಿರುದ್ಧ ಯಾರಾದರೂ (ಎಸ್.ಸಿ ಮತ್ತು ಎಸ್.ಟಿ ವರ್ಗಕ್ಕೆ ಸೇರದವರು) ಉದ್ದೇಶಪೂರ್ವಕವಾಗಿ, ಸಾರ್ವಜನಿಕವಾಗಿ ನಿಂದಿಸಿದರೆ ಮಾತ್ರವೇ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆ–1989ರ ಅನ್ವಯ ಕ್ರಮ ಜರುಗಿಸಲು ಸಾಧ್ಯ. ಆದರೆ, ಈ ಪ್ರಕರಣದಲ್ಲಿ ಅಂತಹ ಅಂಶಗಳಿಲ್ಲ’ ಎಂಬ ಕಾರಣ ನೀಡಿ ನ್ಯಾಯಪೀಠ ಪ್ರಕರಣ ರದ್ದುಗೊಳಿಸಿದೆ.
ಪ್ರಕರಣವೇನು?: ‘ಮೂಡಬಿದಿರೆಯ ವಿದ್ಯಾಗಿರಿಯಲ್ಲಿ 2014ರ ನವೆಂಬರ್ 14ರಂದು ನುಡಿಸಿರಿ ಮೆರವಣಿಗೆಯಲ್ಲಿ ನಮ್ಮ ಜನಾಂಗ ಅಣಕಿಸುವಂತೆ ನಡೆದುಕೊಳ್ಳಲಾಗಿದೆ ಮತ್ತು ಕೊರಗ ಜನಾಂಗದ ವೇಷಕ್ಕೆ ಅವಮಾನ ಮಾಡಲಾಗಿದೆ’ ಎಂದು ಮಾರ್ಪಾಡಿ ಗ್ರಾಮದ ಮಾಸ್ತಿಕಟ್ಟೆ ನಿವಾಸಿ ಕೊರಗ ಒಕ್ಕೂಟದ ಕಾರ್ಯದರ್ಶಿ ಸಂಜೀವ ದೂರು ದಾಖಲಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.