ADVERTISEMENT

ಮಂತ್ರಿ, ಮುಖ್ಯಮಂತ್ರಿಗೆ ನೀಡಲು ವಿಧಾನಸೌಧಕ್ಕೆ ಹಣ ತಂದಿರಬಹುದು: ಸಿದ್ದರಾಮಯ್ಯ

ವಿಧಾನಸೌಧಕ್ಕೆ ಬಂದಿದ್ದ ಎಂಜಿನಿಯರ್ ಬ್ಯಾಗ್‌ನಲ್ಲಿ ₹10 ಲಕ್ಷ ಪತ್ತೆ ಪ್ರಕರಣ

​ಪ್ರಜಾವಾಣಿ ವಾರ್ತೆ
Published 6 ಜನವರಿ 2023, 9:27 IST
Last Updated 6 ಜನವರಿ 2023, 9:27 IST
ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ
ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ    

ಹುಬ್ಬಳ್ಳಿ: ‘ವಿಧಾನಸೌಧಕ್ಕೆ ಬಂದಿದ್ದ ಲೋಕೋಪಯೋಗಿ ಕಿರಿಯ ಎಂಜಿನಿಯರ್‌ ಒಬ್ಬರ ಬ್ಯಾಗ್‌ನಲ್ಲಿ ₹10 ಲಕ್ಷ ಪತ್ತೆಯಾಗಿದ್ದು, ಆತನನ್ನು ಪೊಲೀಸರು ಬಂಧಿಸಿದ್ದಾರೆ. ವರ್ಗಾವಣೆ ಅಥವಾ ಬೇರೆ ಯಾವುದೇ ಕೆಲಸ ಮಾಡಿಸಿಕೊಳ್ಳಲು ಮಂತ್ರಿ ಅಥವಾ ಮುಖ್ಯಮಂತ್ರಿಗೆ ನೀಡಲು ಆ ಹಣವನ್ನು ತಂದಿರಬಹುದು ಎಂಬುದು ನನ್ನ ಅನುಮಾನ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ಶುಕ್ರವಾರ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿದರು. ಹೆದರುವವರಿಗೆ ಹಳ್ಳಿಭಾಷೆಯಲ್ಲಿ ಬೆಕ್ಕು, ನಾಯಿ ಎನ್ನುತ್ತಾರೆ. ಪ್ರಧಾನಿ ಎದುರು ಧೈರ್ಯವಾಗಿ ಮಾತನಾಡಿ ರಾಜ್ಯಕ್ಕೆ ಬರಬೇಕಾದ ಹಣವನ್ನು ಪಡೆಯಬೇಕು ಎಂಬ ಅರ್ಥದಲ್ಲಿ ಮಾತನಾಡಿದ್ದೇನೆಯೇ ಹೊರತು ಮುಖ್ಯಮಂತ್ರಿಗೆ ಅಗೌರವ ತೋರುವ ಉದ್ದೇಶದಿಂದ ‘ನಾಯಿ ಮರಿ’ ಎಂಬ ಹೇಳಿಕೆ ನೀಡಿಲ್ಲ ಎಂದರು.

2024ರಲ್ಲಿ ರಾಮಮಂದಿರ ನಿರ್ಮಾಣವಾಗಲಿದೆ ಎಂಬ ಅಮಿತ್‌ ಶಾ ಹೇಳಿಕೆ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ರಾಮಮಂದಿರ ನಿರ್ಮಾಣಕ್ಕೆ ನಮ್ಮ ವಿರೋಧ ಇಲ್ಲ. ನಾವು ಸಹ ಹಳ್ಳಿಯಲ್ಲಿ ರಾಮಮಂದಿರ ಕಟ್ಟಿದ್ದೇವೆ. ಆದರೆ ಮಂದಿರ ವಿಷಯವನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದಕ್ಕೆ ಹಾಗೂ ಅದನ್ನು ಇನ್ನೊಂದು ಧರ್ಮದ ವಿರುದ್ಧ ಬಳಸಿಕೊಳ್ಳುವುದಕ್ಕೆ ವಿರೋಧ ಇದೆ ಎಂದರು.

ADVERTISEMENT

ಎಸ್‌ಡಿಪಿಐ ನಿಷೇಧಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರ ಹೇಳಿಕೆ ಕುರಿತ ಪ್ರಶ್ನೆಗೆ ಉತ್ತರಿಸಿ ಅವರು, ಕೋಮುವಾದ ಮಾಡುವ ಯಾವುದೇ ಪಕ್ಷ ಜನರನ್ನು ಆಳಲು ಅನರ್ಹ. ನಾನು ಸ್ವತಃ ಹಿಂದೂ, ಆದರೆ ಹಿಂದುತ್ವಕ್ಕೆ ವಿರೋಧವಿದೆ. ಎಲ್ಲ ಜಾತಿ ಧರ್ಮದವರನ್ನು ಒಟ್ಟಿಗೆ ಕರೆದೊಯ್ಯಬೇಕು ಎಂದು ಸಂವಿಧಾನವೇ ಹೇಳಿದೆ. ಎಲ್ಲರನ್ನೂ ಮುನುಷ್ಯರಂತೆ ಕಾಣಬೇಕು ಎಂದು ಹೇಳಿದರು.

1925ರಲ್ಲಿ ಆರ್‌ಎಸ್‌ಎಸ್ ಸ್ಥಾಪನೆಯಾಯಿತು, ಅಲ್ಲಿಂದ 1947ರ ವರೆಗೆ ಆ ಸಂಘಟನೆಯ ಯಾರಾದರೂ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದಾರ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.