ADVERTISEMENT

ಆಪರೇಷನ್‌ ಕಮಲಕ್ಕೆ ಹಣ: ಹೈಕೋರ್ಟ್ ನ್ಯಾಯಮೂರ್ತಿಯಿಂದ ತನಿಖೆಯಾಗಲಿ– ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 16 ಜನವರಿ 2021, 9:58 IST
Last Updated 16 ಜನವರಿ 2021, 9:58 IST
   

ಬೆಂಗಳೂರು: ‘ಆಪರೇಷನ್‌ ಕಮಲಕ್ಕೆ ಸಿ.ಪಿ. ಯೋಗೇಶ್ವರ್ ಹಣ ಖರ್ಚು ಮಾಡಿರುವುದಾಗಿ ರಮೇಶ ಜಾರಕಿಹೊಳಿ ಒಪ್ಪಿಕೊಂಡಿದ್ದಾರೆ. ಈ ಬಗ್ಗೆ ಹೈಕೋರ್ಟ್‌ ನ್ಯಾಯಮೂರ್ತಿ ಮೂಲಕ ಸೂಕ್ತ ತನಿಖೆ ನಡೆಸಬೇಕು’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹಿಸಿದರು.

ಸುದ್ದಿಗಾರರ ಜೊತೆ ಶನಿವಾರ ಮಾತನಾಡಿದ ಅವರು, ‘ಬಿಜೆಪಿಯವರು ಸಜ್ಜನರಂತೆ ಮಾತನಾಡುತ್ತಾರೆ. ಆದರೆ, ಈಗ ರಮೇಶ ನಿಜ ಹೇಳಿದ್ದಾರೆ. ಯಡಿಯೂರಪ್ಪ ಅವರು ಆಪರೇಷನ್ ಕಮಲದ ಜನಕ. ಅವರು ಜನಾದೇಶದ ಮೂಲಕ ಮುಖ್ಯಮಂತ್ರಿ ಆಗಿಲ್ಲ. ಶಾಸಕರನ್ನು ಖರೀದಿಸಿ ಆಗಿದ್ದಾರೆ. ರಮೇಶ ಅವರದೇ ಮಂತ್ರಿ. ಅವರು ನಿಜ ಹೇಳುತ್ತಿದ್ದಾರೆ. ಹೀಗಾಗಿ ತನಿಖೆ ಮಾಡಬೇಕು’ ಎಂದು ಒತ್ತಾಯಿಸಿದರು.

‘ಯತ್ನಾಳ್‌ ಬಿಜೆಪಿಯ ಒಬ್ಬ ಹಿರಿಯ ನಾಯಕ, ಅವರೇ ಬಾಯಿ ಬಿಟ್ಟು ಹೇಳುತ್ತಿದ್ದಾರೆ. ಯಡಿಯೂರಪ್ಪನವರ ಕೊಳಕು ಸಿ.ಡಿ. ಇದೆಯೆಂದು’ ಎಂದೂ ಸಿದ್ದರಾಮಯ್ಯ ಹೇಳಿದರು.

ADVERTISEMENT

‘ಕಾಂಗ್ರೆಸ್ ಶಾಸಕರಿಗೆ ಹೆಚ್ಚು ಅನುದಾನ ಬಿಡುಗಡೆ ಮಾಡಲಾಗಿದೆ’ ಎಂಬ ಯತ್ನಾಳ್‌ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ಅನುದಾನ ಹಂಚಿಕೆ ವಿಷಯದಲ್ಲಿ ಯತ್ನಾಳ್ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಶಾಸಕರಿಗೆ ಅನುದಾನ ಕೇಳುವ ಮತ್ತು ಪಡೆಯುವ ಹಕ್ಕಿದೆ. ಜಮೀರ್ ಅಹ್ಮದ್‌ ಅನುದಾನ ಕೇಳಿದ ಮಾತ್ರಕ್ಕೆ ಹಣ ಬಿಡುಗಡೆ ಆಗಲ್ಲ’ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.‌

ರಾಜ್ಯಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ ಬಗ್ಗೆ ಮಾತನಾಡಿದ ಅವರು, ‘ಶಾ ಬಂದರೆ ಸರ್ಕಾರದಲ್ಲಿ ‌ಯಾವುದೇ ಬದಲಾವಣೆ ಆಗಲ್ಲ. ಯಾಕೆಂದರೆ ಸರ್ಕಾರ ಸತ್ತು ಹೋಗಿದೆ. ಅನಿವೃಷ್ಟಿಯಿಂದ ಹಾನಿಗೊಳಗಾದ ಮನೆಗಳ ದುರಸ್ತಿಗೆ ಹಣ ಬಿಡುಗಡೆ ಮಾಡಿಲ್ಲ. ನೀರಾವರಿ ಯೋಜನೆಗಳೆಲ್ಲ ಸ್ಥಗಿತಗೊಂಡಿದೆ, ವಿದ್ಯಾರ್ಥಿ ವೇತನ ಕೊಡುತ್ತಿಲ್ಲ. ರಸ್ತೆ ಕಾಮಗಾರಿಗಳು ಕೂಡಾ ನಡೆಯುತ್ತಿಲ್ಲ. ಜನರು ಚುನಾವಣೆ ಬರಲಿ ಎಂದು ಕಾಯುತ್ತಿದ್ದಾರೆ. ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಲಿದೆ’ ಎಂದರು.

‘ಕೋವಿಡ್‌ ಲಸಿಕೆ ಎಲ್ಲ ಜನರಿಗೆ ಹಾಕಲೇಬೇಕು. ಅದರ ಬಗ್ಗೆ ಯಾವುದೇ ಆಕ್ಷೇಪ ಇಲ್ಲ. ಶಾಸಕರಿಗೆ ‌ಲಸಿಕೆ ಹಾಕುವ ಸಮಯ ಬಂದಿಲ್ಲ. ಸಮಯ ಬಂದಾಗ‌ ಹಾಕುತ್ತಾರೆ. ಈಗ ಕೊರೊನಾ ವಾರಿಯರ್ಸ್‌ಗೆ ಲಸಿಕೆ ಹಾಕುತ್ತಿದ್ದಾರೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.