ADVERTISEMENT

ಮಂಕಿಪಾಕ್ಸ್‌: ರಾಜ್ಯದ ವಿಮಾನ ನಿಲ್ದಾಣಗಳಲ್ಲಿ ಕಟ್ಟೆಚ್ಚರ

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2024, 15:55 IST
Last Updated 27 ಆಗಸ್ಟ್ 2024, 15:55 IST
ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ (ಸಾಂಕೇತಿಕ ಚಿತ್ರ)
ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ (ಸಾಂಕೇತಿಕ ಚಿತ್ರ)   

ಬೆಂಗಳೂರು: ನೆರೆಯ ಪಾಕಿಸ್ತಾನ ಸೇರಿದಂತೆ ವಿವಿಧ ದೇಶಗಳಲ್ಲಿ ಮಂಕಿಪಾಕ್ಸ್‌ ಪ್ರಕರಣಗಳು ವರದಿಯಾಗಿರುವುದರಿಂದ ರಾಜ್ಯದ ವಿಮಾನ ನಿಲ್ದಾಣ ಮತ್ತು ಬಂದರುಗಳಲ್ಲಿ ಪ್ರಯಾಣಿಕರ ತಪಾಸಣೆ ನಡೆಸಿ ಮಂಕಿಪಾಕ್ಸ್‌ ಶಂಕಿತರನ್ನು ಗುರುತಿಸಿ, ಅವರ ಮೇಲೆ ನಿಗಾ ಇರಿಸುವಂತೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ.

ಕೇಂದ್ರ ಆರೋಗ್ಯ ಸಚಿವಾಲಯದ ಸೂಚನೆಯಂತೆ ಪ್ರಕರಣಗಳು ವರದಿಯಾದ ದೇಶಗಳಿಂದ ಬರುವ ಪ್ರಯಾಣಿಕರ ಮೇಲೆ ಹೆಚ್ಚಿನ ನಿಗಾ ಅಗತ್ಯ ಎಂದು ಆರೋಗ್ಯ ಇಲಾಖೆ ಮಂಗಳವಾರ ಹೊರಡಿಸಿರುವ ಸುತ್ತೋಲೆಯಲ್ಲಿ ತಿಳಿಸಿದೆ.

ಈ ರೋಗದ ಶಂಕಿತ ಪ್ರಕರಣಗಳ ನಿರ್ವಹಣೆಗೆ ಬೆಂಗಳೂರಿನ ಇಂದಿರಾನಗರದಲ್ಲಿರುವ ಸಾಂಕ್ರಾಮಿಕ ರೋಗಗಳ ಆಸ್ಪತ್ರೆ ಹಾಗೂ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗಳನ್ನು ಗುರುತಿಸಲಾಗಿದೆ. ಶಂಕಿತರನ್ನು ಈ ಆಸ್ಪತ್ರೆಗಳಲ್ಲಿ ದಾಖಲಿಸಿ, ವೈದ್ಯಕೀಯ ನಿಗಾದಲ್ಲಿ ಇರಿಸಬೇಕು ಎಂದು ಸೂಚಿಸಲಾಗಿದೆ. 

ADVERTISEMENT

ಶಂಕಿತರಿಂದ ಸಂಗ್ರಹಿಸಿದ ಮಾದರಿಗಳನ್ನು ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಲ್ಲಿರುವ ಪ್ರಯೋಗಾಲಯಕ್ಕೆ ಕಳುಹಿಸಬೇಕು. ಪರೀಕ್ಷೆಯ ವರದಿಯಲ್ಲಿ ರೋಗ ದೃಢಪಟ್ಟರೆ 21 ದಿನಗಳವರೆಗೆ ಅಥವಾ ಗುಳ್ಳೆಗಳು ಸಂಪೂರ್ಣ ನಿವಾರಣೆಯಾಗುವವರೆಗೆ ಪ್ರತ್ಯೇಕವಾಸದಲ್ಲಿ ಇರಿಸಬೇಕು ಎಂದು ತಿಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.