ಬೆಂಗಳೂರು: ರಾಜ್ಯದ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಮಡಿಕೇರಿ ಸೇರಿದಂತೆ ಇತರ ಜಿಲ್ಲೆಗಳಲ್ಲೂ ಮುಂಗಾರು ಚುರುಕುಗೊಂಡಿದೆ.
ಕೊಡಗು ಜಿಲ್ಲೆಯ ಹಲವೆಡೆ ಗುರುವಾರ ಧಾರಾಕಾರವಾಗಿ ಮಳೆ ಸುರಿಯುತ್ತಿದೆ. ಇದರಿಂದ ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ.
ದಕ್ಷಿಣ ಕನ್ನಡದ ಮಾಂಟ್ರಾಡಿಯಲ್ಲಿ ಬುಧವಾರ ರಾತ್ರಿ ಅಂಗವಿಕಲ ವ್ಯಕ್ತಿಯೊಬ್ಬರು ಮಳೆ ನೀರಿನಿಂದ ತುಂಬಿದ್ದ ಕೆರೆಗೆ ಬಿದ್ದು ಮೃತಪಟ್ಟಿದ್ದಾರೆ. ಮೂಡುಬಿದಿರೆ ಸುತ್ತ ಮುತ್ತ ಭಾರಿ ಮಳೆಯಾಗಿದ್ದು ಬೈಲಾರೆ ಪಟ್ಲದಲ್ಲಿರುವ ಮೂರು ಮನೆಗಳು ಜಲಾವೃತಗೊಂಡಿವೆ.
ಕರಾವಳಿಯ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ಇರುವುದರಿಂದ ಹವಾಮಾನ ಇಲಾಖೆಯು ಗುರುವಾರ ರೆಡ್ ಅಲರ್ಟ್ ಘೋಷಣೆ ಮಾಡಿದೆ.
ಕರಾವಳಿ ಇಂದು ರೆಡ್, ನಾಳೆ ಆರೆಂಜ್ ಅಲರ್ಟ್
ಮಂಗಳೂರು: ರಾಜ್ಯದ ಕರಾವಳಿಯ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ಇರುವುದರಿಂದ ಹವಾಮಾನ ಇಲಾಖೆಯು ಗುರುವಾರ ರೆಡ್ ಅಲರ್ಟ್ ಘೋಷಣೆ ಮಾಡಿದೆ.
ಶುಕ್ರವಾರವೂ (ಜುಲೈ 7) ವ್ಯಾಪಕ ಮಳೆಯಾಗುವ ಸಾಧ್ಯತೆ ಇದ್ದು, ಆರೆಂಜ್ ಅಲರ್ಟ್ ಘೋಷಣೆ ಮಾಡಿದೆ.
ಶನಿವಾರ ಮತ್ತು ಭಾನುವಾರವೂ ಮಳೆ ಜಾಸ್ತಿ ಇರುವ ಸಾಧ್ಯತೆ ಇದ್ದು, ಈ ಎರಡು ದಿನಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.
ಮಾಂಟ್ರಾಡಿ: ಕೆರೆಗೆ ಬಿದ್ದು ವ್ಯಕ್ತಿ ಸಾವು
ಮೂಡುಬಿದಿರೆ: ಮಾಂಟ್ರಾಡಿಯಲ್ಲಿ ಗದ್ದೆ ಹುಣಿಯಲ್ಲಿ ಬುಧವಾರ ರಾತ್ರಿ ನಡೆದುಕೊಂಡು ಹೋಗುತ್ತಿದ್ದ ಅಂಗವಿಕಲ ವ್ಯಕ್ತಿಯೊಬ್ಬರು ಜಾರಿ ಮಳೆನೀರಿನಿಂದ ತುಂಬಿದ್ದ ಕೆರೆಗೆ ಬಿದ್ದು ಮೃತಪಟ್ಟಿದ್ದಾರೆ.
ಮೃತ ವ್ಯಕ್ತಿಯನ್ನು ಸ್ಥಳಿಯ ನಿವಾಸಿ ನಿರಂಜನ್ ಜೈನ್ (42)ಎಂದು ಗುರುತಿಸಲಾಗಿದೆ.
ನಿರಂತರ ಮಳೆಯಿಂದಾಗಿ ಕೆರೆ ಭರ್ತಿಯಾಗಿದೆಯೇ ಎಂದು ನೋಡಲು ನಿರಂಜನ್ ಅವರು ಬುಧವಾರ ರಾತ್ರಿ ಗದ್ದೆಗೆ ಹೋಗಿದ್ದರು. ಹುಣಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಕಾಲು ಜಾರಿ ಗದ್ದೆ ಪಕ್ಕದಲ್ಲಿದ್ದ ಕೆರೆಗೆ ಬಿದ್ದಿದ್ದರು. ಮನೆಯವರು ರಾತ್ರಿ ಇಡೀ ಅವರಿಗಾಗಿ ಹುಡುಕಿದ್ದರು.
ಗುರುವಾರ ಬೆಳಿಗ್ಗೆ ಮತ್ತೆ ಹುಡುಕಾಟ ನಡೆಸಿದಾಗ ಕೆರೆಯಲ್ಲಿ ನಿರಂಜನ್ ಅವರ ಶವ ಪತ್ತೆಯಾಗಿದೆ ಎಂದು ಸ್ಥಳೀಯರು ತಿಳಿಸಿದರು. ಮೂಡುಬಿದಿರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
3 ಮನೆಗಳು ಜಲಾವೃತ
ಮೂಡುಬಿದಿರೆ ಸುತ್ತ ಮುತ್ತ ಭಾರಿ ಮಳೆಯಾಗಿದ್ದು ಬೈಲಾರೆ ಪಟ್ಲದಲ್ಲಿರುವ ಮೂರು ಮನೆಗಳು ಗುರುವಾರ ಜಲಾವೃತಗೊಂಡಿವೆ.
ಪಟ್ಲ ತಗ್ಗುಪ್ರದೇಶದಲ್ಲಿರುವ ಕಲ್ಯಾಣಿ ಪೂಜಾರ್ತಿ, ಲಲಿತ ಪೂಜಾರ್ತಿ ಮತ್ತು ಉದಯ ಎಂಬವರ ಮನೆಗಳಿಗೆ ನೀರು ನುಗ್ಗಿದೆ. ಮನೆ ಹಿಂಬದಿಯ ಹಳ್ಳವು ಕಸ ಕಡ್ಡಿಗಳು ತುಂಬಿ ಬಂದ್ ಆಗಿದೆ.
ಪುರಸಭೆಯವರು ಮಳೆಗಾಲಕ್ಕೆ ಮೊದಲು ಅದನ್ನು ಸ್ವಚ್ಚಗೊಳಿಸಲಿಲ್ಲ. ಇದರಿಂದಾಗಿ ಮಳೆಗಾಲದಲ್ಲಿ ನೀರು ಸರಾಗವಾಗಿ ಹರಿಯಲು ತೊಂದರೆಯಾಗಿ ಪಕ್ಕದ ಪಟ್ಲಕ್ಕೆ ನೀರು ಹರಿದು ಅಲ್ಲಿಂದ ಮೂರು ಮನೆಗಳಿಗೆ ಮಳೆ ನೀರು ನುಗ್ಗಿದೆ ಎಂದು ಸ್ಥಳೀಯರು ದೂರಿದ್ದಾರೆ.
ಕೊಡಗಿನಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆ
ಮಡಿಕೇರಿ: ನಗರ ಸೇರಿದಂತೆ ಕೊಡಗು ಜಿಲ್ಲೆಯ ಹಲವೆಡೆ ಗುರುವಾರ ಧಾರಾಕಾರವಾಗಿ ಮಳೆ ಸುರಿಯುತ್ತಿದೆ. ಇದರಿಂದ ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ.
ಗೋಣಿಕೊಪ್ಪಲುವಿನಲ್ಲಿ ಮಳೆ ಇಲ್ಲದೇ ಬತ್ತಿ ಹೋಗಿದ್ದ ಕೀರೆಹೊಳೆ ತುಂಬಿ ಹರಿಯುತ್ತಿದೆ.
ಭಾಗಮಂಡಲದ ತ್ರಿವೇಣಿ ಸಂಗಮ ಭರ್ತಿಯಾಗಿ, ನಾಪೋಕ್ಲು–ಭಾಗಮಂಡಲ ರಸ್ತೆ ಜಲಾವೃತಗೊಂಡಿದೆ. ಇಲ್ಲಿ ವಾಹನ ಸಂಚಾರಕ್ಕೆ ತೊಂದರೆಯಾಗಿದೆ. ಮೂರ್ನಾಡು– ಪಾರಣೆ ಮಧ್ಯದ ಬಲಮುರಿಯ ಕಿರು ಸೇತುವೆ ಸಂಪೂರ್ಣ ಮುಳುಗಿದೆ. ಆದರೆ, ಇಲ್ಲಿ ಎತ್ತರದ ಸೇತುವೆ ಇದ್ದು, ಸಂಚಾರಕ್ಕೆ ತೊಂದರೆಯಾಗಿಲ್ಲ.
ಮಡಿಕೇರಿ ನಗರದಲ್ಲಿಯೂ ಭಾರಿ ಮಳೆ ಸುರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಮಳೆಯ ಜತೆಗೆ ಭಾರಿ ಗಾಳಿ ಬೀಸುತ್ತಿದ್ದು, ಹಲವೆಡೆ ಮರಗಳ ಬುಡಮೇಲಾಗಿವೆ.
ಜಿಲ್ಲೆಯ ಎಲ್ಲ ಅಂಗನವಾಡಿ ಹಾಗೂ ಶಾಲಾ, ಕಾಲೇಜುಗಳಿಗೆ ಜುಲೈ 7 ರಂದು ರಜೆ ಘೋಷಿಸಿ ಜಿಲ್ಲಾಧಿಕಾರಿ ವೆಂಕಟ್ ರಾಜಾ ಆದೇಶ ಹೊರಡಿಸಿದ್ದಾರೆ.
ಜಿಲ್ಲೆಯಲ್ಲಿ ಶುಕ್ರವಾರ ಭಾರಿ ಮಳೆಯ ಮುನ್ನಚ್ಚರಿಕೆ ನೀಡಿರುವ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದೆ.
ಬಪ್ಪನಾಡು ದೇವಸ್ಥಾನ ಜಲಾವೃತ
ಮೂಲ್ಕಿ: ಭಾರಿ ಮಳೆಯಿಂದಾಗಿ ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿ ಪ್ರದೇಶದಲ್ಲಿ ಪ್ರವಾಹ ಕಾಣಿಸಿಕೊಂಡಿದ್ದು, ಇಲ್ಲಿನ ಬಪ್ಪನಾಡು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನವು ಜಲಾವೃತಗೊಂಡಿದೆ.
ಕೊಡಿ ಮರ ಇರುವ ದೇವಸ್ಥಾನದ ಹೊರಗಿನ ಸುತ್ತನ್ನು ದಾಟಿ ಬಂದಿರುವ ಮಳೆ ನೀರು ಗರ್ಭಗುಡಿ ಇರುವ ಸುತ್ತನ್ನೂ ಆವರಿಸಿದೆ. ಗರ್ಭಗುಡಿಯ ಮೆಟ್ಟಿಲುಗಳು ಮುಳುಗಿವೆ. ತೀರ್ಥ ಮಂಟಪವಿರುವ ಪ್ರದೇಶದಲ್ಲಿ ಎರಡು ಅಡಿಗಳಿಗೂ ಹೆಚ್ಚು ನೀರು ನಿಂತಿದೆ.
ರಾಮನಗರದಲ್ಲಿ ಸಾಧಾರಣ ಮಳೆ
ರಾಮನಗರ: ನಗರದಲ್ಲಿ ಗುರುವಾರ ಸಾಧಾರಣ ಮಳೆಯಾಗಿದೆ. ಮಧ್ಯಾಹ್ನ 1.45ರ ಸುಮಾರಿಗೆ ಶುರುವಾದ ಮಳೆ, ಹದಿನೈದು ನಿಮಿಷ ಸುರಿದಿದೆ.
ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಬೆಳಿಗ್ಗೆಯಿಂದ ಮೋಡ ಕವಿದ ವಾತಾವರಣ ಒತ್ತು. ಸಣ್ಣದಾಗಿ ಶುರುವಾದ ಮಳೆ ಕೆಲ ಹೊತ್ತು ಬಿಡದೆ ಸುರಿದು ನಿಂತಿತು.
ಹಾವೇರಿ ಜಿಲ್ಲೆಯಾದ್ಯಂತ ಉತ್ತಮ ಮಳೆ
ಹಾವೇರಿ: ಜಿಲ್ಲೆಯಾದ್ಯಂತ ಮುಂಗಾರು ಮಳೆ ಚುರುಕುಗೊಂಡಿದ್ದು, ಗುರುವಾರ ದಿನವಿಡೀ ತುಂತುರು ಮಳೆ ಸುರಿಯಿತು. ತುಂತುರು ಮಳೆಗೆ ಕೃಷಿ ಚಟುವಟಿಕೆ ಗರಿಗೆದರಿದ್ದು, ರೈತರು ಹೊಲಗಳಲ್ಲಿ ಕೆಲಸ ಮಾಡುವ ದೃಶ್ಯ ಕಂಡು ಬಂದಿತು.
ಒಣಗಿದ್ದ ಕೆರೆ–ಕಟ್ಟೆಗಳಿಗೆ ಸ್ವಲ್ಪಮಟ್ಟಿಗೆ ನೀರು ಹರಿದು ಬರುತ್ತಿದೆ. ಹಾವೇರಿ ನಗರ ಸೇರಿದಂತೆ ಶಿಗ್ಗಾವಿ ತಾಲ್ಲೂಕಿನ ದುಂಡಶಿ, ತಡಸ ಜೋಂಡಲಗಟ್ಟಿ, ಮಮದಾಪುರ, ಕುನ್ನೂರು ಗ್ರಾಮಗಳಲ್ಲಿ ಉತ್ತಮ ಮಳೆಯಾಗಿದೆ. ಹಾವೇರಿ ತಾಲ್ಲೂಕಿನ ಹೊಸರಿತ್ತಿ, ಗುತ್ತಲ, ದೇವಿಹೊಸೂರು ಭಾಗಗಳಲ್ಲೂ ಉತ್ತಮ ಮಳೆ ಸುರಿದಿದೆ. ಶಿಗ್ಗಾವಿ ತಾಲ್ಲೂಕಿನ ತಡಸದಲ್ಲಿ 32.8 ಮಿಲಿ ಮೀಟರ್, ಹಾನಗಲ್ ತಾಲ್ಲೂಕಿನ ಬೊಮ್ಮನಹಳ್ಳಿಯಲ್ಲಿ 25.8 ಮಿಲಿ ಮೀಟರ್ ಮಳೆಯಾಗಿದ್ದು, ಜಿಲ್ಲೆಯಲ್ಲೆ ಬಿದ್ದ ಗರಿಷ್ಠ ಮಳೆಯಾಗಿದೆ.
ಕುನ್ನೂರು ಸಮೀಪದ ಮೌಲಾನಾ ಆಜಾದ್ ಮಾದರಿ ಶಾಲೆಯ ಮಕ್ಕಳು ಮಳೆಯಲ್ಲಿ ನೆನೆಯುತ್ತಾ, ಆಟವಾಡುತ್ತಾ ಮನೆ ಕಡೆ ತೆರಳುತ್ತಿದ್ದ ದೃಶ್ಯ ಕಂಡು ಬಂದಿತು.
ಉತ್ತರ ಕನ್ನಡ: ಸತತ 3ನೇ ದಿನವೂ ಶಾಲೆಗೆ ರಜೆ ಘೋಷಣೆ
ಕಾರವಾರ: ಜಿಲ್ಲೆಯ ಕರಾವಳಿ ಭಾಗದ ತಾಲ್ಲೂಕುಗಳಲ್ಲಿ ಶುಕ್ರವಾರವೂ ವ್ಯಾಪಕ ಪ್ರಮಾಣದ ಮಳೆ ಸುರಿಯುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಈ ವ್ಯಾಪ್ತಿಯ ಶಾಲೆಯ ಪದವಿಪೂರ್ವ ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಆದೇಶಿಸಿದ್ದಾರೆ.
ಭಾರಿ ಮಳೆ ಬೀಳುವ ಕುರಿತು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ನೀಡಿರುವ ಮಾಹಿತಿ ಆಧರಿಸಿ ಸತತ ಮೂರನೇ ದಿನವೂ ಮುನ್ನೆಚ್ಚರಿಕೆ ಕ್ರಮವಾಗಿ ಶಾಲೆ, ಕಾಲೇಜುಗಳಿಗೆ ರಜೆ ಘೋಷಿಸುತ್ತಿರುವುದಾಗಿ ಅವರು ತಿಳಿಸಿದ್ದಾರೆ.
ಉಡುಪಿ: ಜುಲೈ 7ರಂದು ಶಾಲಾ ಕಾಲೇಜುಗಳಿಗೆ ರಜೆ
ಉಡುಪಿ: ಜಿಲ್ಲೆಯಾದ್ಯಂತ ಮಳೆಯಾಗುತ್ತಿದ್ದು ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಣೆ ಮಾಡಿದೆ. ಹೀಗಾಗಿ ವಿದ್ಯಾರ್ಥಿಗಳ ಸುರಕ್ಷತೆ ದೃಷ್ಟಿಯಿಂದ ಜುಲೈ 7ರಂದು ಜಿಲ್ಲೆಯ ಎಲ್ಲ ಶಾಲೆಗಳು ಹಾಗೂ ಪದವಿಪೂರ್ವ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.