ಬೆಂಗಳೂರು: ಈ ವರ್ಷ ಮುಂಗಾರು ಮಳೆ ಸಾಮಾನ್ಯಕ್ಕಿಂತಲೂ ಕಡಿಮೆ ಬೀಳುವ ನಿರೀಕ್ಷೆ ಇದ್ದು, ರಾಜ್ಯದ ಹಲವು ಜಿಲ್ಲೆಗಳಲ್ಲಿ ಬರಗಾಲ ಮುಂದುವರಿಯುವ ಭೀತಿ ಎದುರಾಗಿದೆ.
ಭಾರತೀಯ ಹವಾಮಾನ ಇಲಾಖೆ ಮತ್ತು ‘ಸ್ಕೈಮೆಟ್’ ಪ್ರತ್ಯೇಕವಾಗಿ ಬಿಡುಗಡೆ ಮಾಡಿರುವ ಮುಂಗಾರು ಮುನ್ಸೂಚನೆ ವರದಿಗಳು ರಾಜ್ಯದ ಪಾಲಿಗೆ ಆಶಾದಾಯಕವಾಗಿಲ್ಲ. ಕರ್ನಾಟಕ ಮಾತ್ರವಲ್ಲದೆ, ದೇಶದ ಇತರ ರಾಜ್ಯಗಳೂ ಮಳೆ ಕೊರತೆಯಿಂದ ಸಂಕಷ್ಟಕ್ಕೆ ತುತ್ತಾಗಲಿವೆ.
ಜೂನ್‌ನಿಂದ ಸೆಪ್ಟೆಂಬರ್‌ವರೆಗಿನ ನೈರುತ್ಯ ಮುಂಗಾರು ಮಳೆ ಇಡೀ ದೇಶದಲ್ಲೇ ಸಾಮಾನ್ಯದ ಸಮೀಪಕ್ಕೂ (ನಿಯರ್ ನಾರ್ಮಲ್) ಬರುವುದಿಲ್ಲ. ಈ ಅವಧಿಯಲ್ಲಿ (ಮಳೆಯ ಪ್ರಮಾಣ ಸುದೀರ್ಘ ಅವಧಿ–ಎಲ್‌ಪಿಎ)ಸರಾಸರಿ ಶೇ 96ರಷ್ಟು ಇರಲಿದೆ. ಇದರಲ್ಲಿ ಶೇ 5ರಷ್ಟು ಹೆಚ್ಚು ಅಥವಾ ಕಡಿಮೆ ಆಗಲೂ ಬಹುದು ಎಂದು ಭಾರತೀಯ ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
‘ಸ್ಕೈಮೆಟ್ ವೆದರ್’ ಪ್ರಕಾರ, ಶೇ 93ರಷ್ಟು ಮಳೆ ಬರಲಿದೆ. ಜೂನ್–ಸೆಪ್ಟೆಂಬರ್ ಅವಧಿಯಲ್ಲಿ 887 ಮಿ.ಮೀ ಮಳೆ ಆಗಲಿದೆ. ವಾರ್ಷಿಕ ಸರಾಸರಿ ಮಳೆ ಪ್ರಮಾಣ ಶೇ 96ರಿಂದ ಶೇ 104 ಇದ್ದರೆ, ಅದು ಸಾಮಾನ್ಯ (ನಾರ್ಮಲ್) ಮಳೆಯ ವ್ಯಾಪ್ತಿಗೆ ಬರುತ್ತದೆ. ಸ್ಕೈಮೆಟ್ ಲೆಕ್ಕಾಚಾರದಂತೆ ಎಲ್‌ಪಿಎ ಶೇ 93ರಷ್ಟು ಎಂದರೆ, ಅಪಾಯ ಎದುರಾಗುವ ಸಾಧ್ಯತೆ ಇದೆ ಎಂದೇ ಅರ್ಥ. ಅಲ್ಲದೆ, ಜೂನ್‌ನಿಂದ ಸೆಪ್ಟೆಂಬರ್‌ವರೆಗೆ ಸಾಮಾನ್ಯ ಮಳೆ ಶೇ 30ರಷ್ಟು ಸಾಧ್ಯತೆ ಇದ್ದರೆ, ಸಾಮಾನ್ಯಕ್ಕಿಂತ ಕಡಿಮೆ ಶೇ 55ರಷ್ಟು ಎಂದು ನಿರೀಕ್ಷಿಸಲಾಗಿದೆ.
ಹಿಂದೂ ಮಹಾಸಾಗರದ ಮೇಲ್ಮೈನ ತಾಪಮಾನದ ಮೇಲೆ ನಿರಂತರ ನಿಗಾ ಇಡಲಾಗಿದೆ. ಇದು ಮುಂಗಾರು ಮಳೆಯ ಮೇಲೆ ಪ್ರಬಲ ಪರಿಣಾಮ ಬೀರಲಿದೆ. ಒಂದು ವೇಳೆ ಮಾರುತಗಳು ಚದುರಿ ಹಂಚಿಕೆಯಾಗಿ ಎಲ್ಲೆಡೆ ಮಳೆಯಾದರೆ, ರೈತರಿಗೆ ಕೃಷಿ ಕಾರ್ಯಗಳಿಗೆ ಅನುಕೂಲವಾಗುತ್ತದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಆಶಯ ವ್ಯಕ್ತಪಡಿಸಿದ್ದಾರೆ.
ರಾಜ್ಯದ ಕಠಿಣ ಪರಿಸ್ಥಿತಿ: ಸ್ಕೈಮೆಟ್ ವರದಿ ನಿಜವೇ ಆದರೆ, ರಾಜ್ಯದಲ್ಲಿ ಜಲಾಶಯಗಳು ತುಂಬುವುದಿಲ್ಲ. ಅಂತರ್ಜಲವೂ ವೃದ್ಧಿಯಾಗುವುದಿಲ್ಲ ಮತ್ತು ಕೃಷಿ ಬಿತ್ತನೆಯ ಮೇಲೂ ಪರಿಣಾಮ ಬೀರಲಿದೆ. ಮೇನಲ್ಲಿ ಉತ್ತಮ ಮಳೆ ಬೀಳದಿದ್ದರೆ ಜಲಾಶಯಗಳಿಗೆ ಒಳಹರಿವು ಕಡಿಮೆ ಆಗುತ್ತದೆ. ಮೇ ಮತ್ತು ಜೂನ್ ಎರಡೂ ತಿಂಗಳು ಅಚ್ಚುಕಟ್ಟು ಪ್ರದೇಶದಲ್ಲಿ ಮಳೆಯಾದರಷ್ಟೇ ಜಲಾಶಯಗಳು ತುಂಬುತ್ತವೆ ಎನ್ನುತ್ತಾರೆ ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಡಾ.ಶ್ರೀನಿವಾಸರೆಡ್ಡಿ.
ಎಲ್‌ನಿನೊ ಪರಿಣಾಮ: ಮಳೆ ಕೊರತೆ
ಮಳೆಯ ಕೊರತೆಗೆ ಎಲ್‌ನಿನೊ ವೈಪರೀತ್ಯದ ಪರಿಣಾಮವೇ ಕಾರಣವೆಂದು ಭಾರತೀಯ ಹವಾಮಾನ ಇಲಾಖೆ ಅಭಿಪ್ರಾಯಪಟ್ಟಿದೆ.
ಎಲ್‌ನಿನೊ ದುರ್ಬಲವಾಗಿದ್ದು, ಇದೇ ಪರಿಸ್ಥಿತಿ ಮುಂಗಾರು ಅವಧಿಯ ಉದ್ದಕ್ಕೂ ಮುಂದುವರಿಯಲಿದೆ. ಕೊನೆಯಲ್ಲಿ ತೀವ್ರತೆ ಕಡಿಮೆ ಆಗುತ್ತದೆ. ಪೆಸಿಫಿಕ್ ಮತ್ತು ಹಿಂದೂ ಮಹಾಸಾಗರದ ಮೇಲ್ಮೈ ಉಷ್ಣಾಂಶದ ಮೇಲೆ ನಿಗಾ ಇಡಲಾಗಿದೆ. ಈ ವಾತಾವರಣವು ಭಾರತೀಯ ಮುಂಗಾರಿನ ಮೇಲೆ ಪರಿಣಾಮ ಬೀರಲಿದೆ.
400 ವರ್ಷಗಳಲ್ಲಿ ಭಾರಿ ಬದಲಾವಣೆ
ಆಸ್ಟ್ರೇಲಿಯಾದ ವಿಜ್ಞಾನಿಗಳು ಸುಮಾರು 400 ವರ್ಷಗಳ ಎಲ್‌ನಿನೊ ಬದಲಾವಣೆಯ ಬಗ್ಗೆ ಅಧ್ಯಯನ ನಡೆಸಿದ್ದು, ಇತ್ತೀಚಿನ ದಶಕಗಳಲ್ಲಿ ಎಲ್‌ನಿನೊ ವರ್ತನೆಯಲ್ಲಿ ಭಾರೀ ಬದಲಾವಣೆ ಆಗಿರುವುದನ್ನು ಪತ್ತೆ ಹಚ್ಚಿದ್ದಾರೆ.
ಹವಳದ ಉಳಿಕೆಗಳಲ್ಲಿ ಹುದುಗಿಕೊಂಡಿರುವ ಎಲ್‌ನಿನೊಗಳ ರಾಸಾಯನಿಕ ಕುರುಹುಗಳನ್ನು ಗುರುತಿಸಿ ಪ್ರತಿಯೊಂದು ಎಲ್‌ನಿನೊವಿನ ವರ್ತನೆಯನ್ನು ವಿಜ್ಞಾನಿಗಳು ಅನಾವರಣಗೊಳಿಸಿದ್ದಾರೆ. ಇದು ಅಸಾಧ್ಯವೆಂದೇ ಇಲ್ಲಿಯವರೆಗೆ ಎಲ್ಲರೂ ನಂಬಿದ್ದರು.
ಎಲ್‌ನಿನೊ ಘಟಿಸಿದಾಗ ಹವಳದೊಳಗೆ ಕೂಡಿಕೊಳ್ಳುವಾಗ ರಾಸಾಯನಿಕ ಅಂಶಗಳು ವಿಶಿಷ್ಟವಾಗಿರುತ್ತವೆ. ಎಲ್‌ನಿನೊವಿನ ಈ ವರ್ತನೆ ಹವಾಮಾನದ ಮೇಲೆ ಗಂಭೀರ ಪರಿಣಾಮ ಬೀರಿದ್ದು, ಅದರ ಫಲವನ್ನು ಸಮಾಜ ಉಣ್ಣಲೇಬೇಕಾಗಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
ವಾರದೊಳಗೆ ಬರ ಪರಿಶೀಲನಾ ಸಭೆ
ರಾಜ್ಯ ಎದುರಿಸುತ್ತಿರುವ ಬರ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸುವ ನಿಟ್ಟಿನಲ್ಲಿ ವಾರದೊಳಗೆ ಜಿಲ್ಲಾ ಉಸ್ತುವಾರಿ ಸಚಿವರು ಪರಿಶೀಲನಾ ಸಭೆ ನಡೆಸಲು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಯಿತು.
ಅಲ್ಲದೆ, ಕುಡಿಯುವ ನೀರು ಪೂರೈಕೆ, ಮೇವು ಲಭ್ಯತೆ ಮತ್ತು ಉದ್ಯೋಗ ಖಾತ್ರಿ ಯೋಜನೆ ಅನುಷ್ಠಾನ ಸಂಬಂಧಿಸಿದಂತೆ ಮೇ 15ರಂದು ಜಿಲ್ಲಾಧಿಕಾರಿಗಳ ಜೊತೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿಡಿಯೊ ಸಂವಾದ ನಡೆಸಲಿದ್ದಾರೆ. ಸಂಪುಟ ಸಭೆಯ ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಕೃಷ್ಣ ಬೈರೇಗೌಡ, ‘ಬರ ಮತ್ತು ವಿಪತ್ತು ನಿರ್ವಹಣೆಗೆ ಚುನಾವಣಾ ಆಯೋಗ ನೀತಿಸಂಹಿತೆ ಸಡಿಲಗೊಳಿಸಿದೆ. ಹೀಗಾಗಿ, ಉಪ ಚುನಾವಣೆ ನಡೆಯುವ ವಿಧಾನಸಭಾ ಕ್ಷೇತ್ರಗಳಿರುವ ಎರಡು ಜಿಲ್ಲೆಗಳನ್ನು (ಧಾರವಾಡ ಮತ್ತು ಕಲಬುರ್ಗಿ) ಬಿಟ್ಟು ಉಳಿದ ಜಿಲ್ಲೆಗಳಲ್ಲಿ ಸಭೆ ನಡೆಸುವಂತೆ ಉಸ್ತುವಾರಿ ಸಚಿವರಿಗೆ ಸೂಚಿಸಲಾಗಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.