ಉಳ್ಳಾಲ (ದಕ್ಷಿಣ ಕನ್ನಡ): ಸೋಮೇಶ್ವರ ಸಮುದ್ರ ತೀರದಲ್ಲಿ ವಿಹಾರಕ್ಕೆ ಬಂದವರ ಮೇಲೆ ತಂಡವೊಂದು ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಉಳ್ಳಾಲ ಪೊಲೀಸರು ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮಂಗಳೂರಿನ ಪ್ಯಾರಾ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳು ಸೋಮೇಶ್ವರ ಸಮುದ್ರ ತೀರಕ್ಕೆ ಗುರುವಾರ ಸಂಜೆ ಬಂದಿದ್ದರು. ಅವರಲ್ಲಿ ಮೂವರು ಯುವಕರು ಮುಸ್ಲಿಂ ಸಮುದಾಯಕ್ಕೆ ಸೇರಿದವರೆಂದು ತಂಡವೊಂದು ಅವರನ್ನು ಹಿಂಬಾಲಿಸಿತ್ತು. ಹಿಂದೂ ವಿದ್ಯಾರ್ಥಿನಿಯರ ಜೊತೆ ಬಂದಿದ್ದ ಕಾರಣಕ್ಕೆ ಈ ತಂಡವು ಯುವಕರ ಮೇಲೆ ಸುಮಾರು ಸಂಜೆ 7.20ರ ಸಂದರ್ಭದಲ್ಲಿ ಹಲ್ಲೆ ನಡೆಸಿತ್ತು. ಕೇರಳ ಚೆರ್ಕಳದ ಜಾಫರ್ ಶರೀಫ್ ಹಾಗೂ ಮಂಜೇಶ್ವರದ ಮುಜೀಬ್ ಮತ್ತು ಆಶಿಕ್ ಹಲ್ಲೆಗೊಳಗಾದವರು.
ಪ್ರಕರಣದ ವಿಚಾರಣೆಗಾಗಿ ಎರಡು ವಿಶೇಷ ತಂಡವನ್ನು ರಚಿಸಿರುವುದಾಗಿ ನಗರ ಪೊಲೀಸ್ ಕಮಿಷನರ್ ಕುಲದೀಪ್ ಜೈನ್ ತಿಳಿಸಿದ್ದರು.
ಉಳ್ಳಾಲ ಬಸ್ತಿಪಡ್ಪು ನಿವಾಸಿ ಯತೀಶ್, ಉಚ್ಚಿಲ ನಿವಾಸಿ ಸಚಿನ್, ಸುಹಾನ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಗಾಯಗೊಂಡ ಯುವಕರ ಜತೆಗಿದ್ದ ಮೂವರು ವಿದ್ಯಾರ್ಥಿನಿಯರು ಕೇರಳಕ್ಕೆ ತೆರಳಿರುವ ಮಾಹಿತಿ ಲಭ್ಯವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.